ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕದ ವಿರುದ್ಧ ವಿ.ಹಿಂ.ಪ. ಪುತ್ತೂರು ಜಿಲ್ಲೆಯಿಂದ ಪ್ರತಿಭಟನೆ

0

ಪುತ್ತೂರು: ಗೋಹತ್ಯೆಗೆ ಸಹಕಾರ, ಪ್ರೋತ್ಸಾಹ ನೀಡಲು ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತರಲು ಮುಂದಾಗಿರುವ ನೂತನ ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕದ ವಿರುದ್ಧ ಹಾಗೂ ಸರಕಾರದ ಗೋ ವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಗೋರಕ್ಷಾ ವಿಭಾಗ ಪುತ್ತೂರು ಜಿಲ್ಲೆ ವತಿಯಿಂದ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು.


ತಿದ್ದುಪಡಿ ತಂದರೆ ದೇಶವ್ಯಾಪಿ ಚಳುವಳಿಗೆ ಕರೆ ಕೊಡುತ್ತದೆ:
ವಿ.ಹಿಂ.ಪ. ಜಿಲ್ಲಾ ಪ್ರಸಾರ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಮಾತನಾಡಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಪ್ರತೀ ಬಾರಿ ಗೋರಕ್ಷಣೆಗೆ ಬೀದಿಗೆ ಇಳಿಯುವುದು ಅನಿವಾರ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ, ಗೋಹತ್ಯೆ ಆಗದಂತೆ ಎಸ್‌ಪಿಯವರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೋಕಳ್ಳರ ಮೇಲೆ ಕರುಣೆ ತೋರಿಸಿ ಸಿದ್ದರಾಮಯ್ಯನವರು ಗೋಹಂತಕರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಸಿದ್ದರಾಮಯ್ಯನವರು ಕೂಡ ಗೋವಿನ ಹಾಲನ್ನೇ ಕುಡಿಯುವುದು. ಬೇರೆ ಪ್ರಾಣಿಯ ಹಾಲನ್ನು ಕುಡಿಯುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಕಾಯಿದೆಗೆ ತಿದ್ದುಪಡಿ ಮಾಡಿದ್ದೇ ಆದರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗುತ್ತೀರಿ. ನಮ್ಮನ್ನು ಕೆಣಕಲು ಬರಬೇಡಿ. ಕಾಯಿದೆಗೆ ತಿದ್ದುಪಡಿ ತರಬೇಡಿ. ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಘಾಸಿಮಾಡಬೇಡಿ. ಮಾಡಿದರೆ ವಿಹಿಪಂ, ಬಜರಂಗದಳ ದೇಶವ್ಯಾಪಿ ಚಳುವಳಿಗೆ ಕರೆ ಕೊಡುತ್ತದೆ ಎಂದು ಎಚ್ಚರಿಸಿದರು.


ಮಸೂದೆ ಜಾರಿಗೊಳಿಸಿ ಹಿಂದುತ್ವವನ್ನು ಮಟ್ಟ ಹಾಕುತ್ತಿದೆ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಗೋವು ದೇಶದ ಸಂಪತ್ತು, ಗೋವು ಇಲ್ಲದೆ ಕೃಷಿಕ ಇಲ್ಲ. ಮಹಾತ್ಮಾ ಗಾಂಧಿಜಿಯವರು ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತಂದರು. ಕಳೆದ ಬಿಜೆಪಿ ಸರಕಾರ ಜಾನುವಾರು ಹತ್ಯೆ ಪ್ರತಿಬಂಧಕ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಪೊಲೀಸ್ ಇಲಾಖೆ ಕೂಡ ಕಾನೂನು ಪಾಲನೆ ಮಾಡುತ್ತಿದ್ದು ಅಕ್ರಮ ಗೋಸಾಗಾಟ ನಿಯಂತ್ರಿಸುವಲ್ಲಿ ಕಾರ್ಯನಿರತವಾಗುತ್ತಿದೆ. ಆದರೆ ಇದೀಗ ರಾಜ್ಯ ಕಾಂಗ್ರೆಸ್ ಸರಕಾರ ಕಾನೂನ್ನು ಸಡಿಲಪಡಿಸಿ ಮಸೂದೆಯನ್ನು ಜಾರಿಗೆ ತರುತ್ತಿದೆ. ಗೋಕಳ್ಳರ ಪರವಾಗಿ, ಗೋ ಹತ್ಯೆ ಮಾಡುವವರ ಪರವಾಗಿ ಸರಕಾರ ನಿಂತಿದೆ. ಅಲ್ಲದೆ ದ್ವೇಷ ಭಾಷಣದ ವಿರುದ್ಧ ಮಸೂದೆ ಜಾರಿ ಗೊಳಿಸುತ್ತಿದ್ದು ಹಿಂದುತ್ವವನ್ನು ಮಟ್ಟ ಹಾಕಲು ಅಧಿನಿಯಮ ಜಾರಿಗೆ ತರುತ್ತಿದೆ. ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುತ್ತಿದೆ. ಪೊಲೀಸರನ್ನು ನಿಯಂತ್ರಿಸುತ್ತಿದೆ. ಆದುದರಿಂದ ಹಿಂದುಗಳು ಗೋವಿನ ರಕ್ಷಣೆ ಮಾಡಬೇಕು ಎಂದು ಹೇಳಿದರು.


ಹಿಂದು ಭಾವನೆಯನ್ನು ಕೆಣಕಬೇಡಿ:
ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದು ಸಮಾಜದ ಪರವಾಗಿ, ಗೋಹತ್ಯೆಯ ರಾಕ್ಷಸಿ ಪ್ರವೃತ್ತಿಯವರಿಗೆ ಶಿಕ್ಷೆ ಆಗಲು ಹೋರಾಟ ಮಾಡ್ತಿದ್ದೇವೆ. ಆದರೆ ಸರಕಾರ ಗೋ ಹತ್ಯೆ ಮಾಡುವವರಿಗೆ ಬೆಂಬಲ ನೀಡಿ ಮಸೂದೆ ಜಾರಿ ಮಾಡುತ್ತಿದೆ. ಬಿಜೆಪಿ ಸರಕಾರದ ಮಸೂದೆ ಸಡಿಲಗೊಳಿಸಿ ನೀಚ ಕೃತ್ಯ ಮಾಡಿ ಗೋಕಳ್ಳರಿಗೆ ಬೆಂಬಲ ನೀಡುತ್ತಿದೆ. ಮಸೂದೆ ತಿದ್ದುಪಡಿ ಮಾಡಲು ಬರಬೇಡಿ. ಹಿಂದು ಭಾವನೆಯನ್ನು ಕೆಣಕಬೇಡಿ. ಇದರ ವಿರುದ್ಧ ಹಿಂದು ಸಮಾಜ ರಾಜ್ಯವ್ಯಾಪಿ ಪ್ರತಿಭಟನೆ ಮಾಡುವುದು ನಿಶ್ಚಿತ ಎಂದರು.


ವಿಶ್ವಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್, ಯುವರಾಜ್ ಪೆರಿಯತ್ತೋಡಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಮುಖಂಡರುಗಳಾದ ರಾಜೇಶ್ ಬನ್ನೂರು, ಲೋಕೇಶ್ ಹೆಗ್ಡೆ, ನಿತೀಶ್ ಕುಮಾರ್ ಶಾಂತಿವನ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಹರೀಶ್ ಬಿಜತ್ರೆ, ಶ್ರೀಧರ್ ತೆಂಕಿಲ, ನಾಗೇಶ್ ಟಿ.ಎಸ್., ರಾಮಚಂದ್ರ ಕಾಮತ್, ಹರಿಪ್ರಸಾದ್ ಯಾದವ್, ಸತೀಶ್ ನಾಕ್, ಸೇಸಪ್ಪ ಬೆಳ್ಳಿಪ್ಪಾಡಿ, ನಾಗೇಂದ್ರ ಬಾಳಿಗ, ಹರೀಶ್ ದೋಳ್ಪಾಡಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ಸಂತೋಷ್ ಪೆರಿಯಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿ.ಹಿ.ಪಂ. ಜಿಲ್ಲಾ ಸತ್ಸಂಗ ಪ್ರಮುಖ್ ರವಿಕುಮಾರ್ ಕೈತಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here