ಹಳೆನೇರಂಕಿ ಶಾಲಾ ಶತಮಾನೋತ್ಸವ-ಗುರುವಂದನೆ

0

ಶಾಲೆಯನ್ನು ಮನೆಯಂತೆ ಊರಿನ ಜನ ಪ್ರೀತಿಸುತ್ತಿದ್ದಾರೆ; ಕೆ.ಸೇಸಪ್ಪ ರೈ

ರಾಮಕುಂಜ: ಕಡಬ ತಾಲೂಕಿನ ಹಳೆನೇರಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ’ಶತಮಾನೋತ್ಸವ ಸಂಭ್ರಮ-2025’ರ ಸಲುವಾಗಿ ಗುರುವಂದನಾ ಕಾರ್ಯಕ್ರಮ ಡಿ.7ರಂದು ಬೆಳಿಗ್ಗೆ ನಡೆಯಿತು.


ಗುರುವಂದನೆ ಹಾಗೂ ಶಾಲಾ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು, ನೂರು ವರ್ಷಗಳ ಇತಿಹಾಸದಲ್ಲಿ ಹಲವು ಕಷ್ಟ, ಸುಖ, ನೋವು ಇರುತ್ತದೆ. ಇವೆಲ್ಲವನ್ನೂ ಮೆಲುಕು ಹಾಕುವ ಯೋಗ ಶತಮಾನೋತ್ಸವ ಸಂಭ್ರಮದ ಮೂಲಕ ಊರಿನ ಜನರಿಗೆ ದೊರೆತಿದೆ. ಹಿರಿಯ ವಿದ್ಯಾರ್ಥಿಗಳು ಈ ಶಾಲೆಯ ಎಲ್ಲಾ ಚಟುವಟಿಕೆಯಲ್ಲಿ ಭಾಗಿಗಳಾಗುತ್ತಿದ್ದಾರೆ. ಊರಿನ ಜನರು ಶಾಲೆಯನ್ನು ಮನೆಯಂತೆ ಪ್ರೀತಿಸುತ್ತಿದ್ದಾರೆ. ಯಾವುದೇ ಕೆಲಸಗಳಲ್ಲಿ ತಮ್ಮನ್ನು ತಾವು ತೊಗಡಿಸಿಕೊಂಡಲ್ಲಿ ಸಂತೋಷ ಸಿಗುತ್ತದೆ ಎಂದರು. ಮುಚ್ಚುತ್ತಿರುವ ಶಾಲೆಗಳನ್ನು ಮತ್ತೆ ಆರಂಭಿಸುವುದು ದೊಡ್ಡ ಸಾಧನೆ. ಹಳೆನೇರಂಕಿ ಶಾಲೆ ಉನ್ನತ ಮಟ್ಟದಲ್ಲಿ ಬೆಳೆದಿದೆ. ಪ್ರತಿಯೊಬ್ಬರು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಕೆ.ಸೇಸಪ್ಪ ರೈ ಹೇಳಿದರು.


ಅತಿಥಿಯಾಗಿದ್ದ ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಮಾತನಾಡಿ, ಊರಿನ ಜನರ ಅನೇಕ ದಿನಗಳ ಶ್ರಮ ಮೂರು ದಿನಗಳ ಸಂಭ್ರಮದಲ್ಲಿ ಪರಿಪೂರ್ಣಗೊಂಡಿದೆ. ಈ ಸಂಭ್ರಮಕ್ಕೆ ಕಾರಣರಾದ ಕೊಡುಗೈ ದಾನಿಗಳನ್ನು ಅಭಿನಂದಿಸುವುದಾಗಿ ಹೇಳಿದರು. ಶಾಲೆ ಊರಿನ ದೇವಾಲಯವಿದ್ದಂತೆ. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದಲ್ಲಿ ವಿದ್ಯಾರ್ಥಿಗಳೂ ಒಳ್ಳೆಯ ಶಿಕ್ಷಣ ಪಡೆದು ಶೋಭೆ ತರಲಿದ್ದಾರೆ. ಇದು ಊರಿಗೂ ಸುಭಿಕ್ಷೆ ತರಲಿದೆ ಎಂದರು.
ಇನ್ನೋರ್ವ ಅತಿಥಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ.ಮಾತನಾಡಿ, ಹಳೆನೇರಂಕಿ ಶಾಲೆ ಆಟೋಟ, ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದೆ. ವಿದ್ಯಾಲಯ ಊರಿನ ಕೇಂದ್ರ ಸ್ಥಾನ. ಊರಿನ ಜನರು ಹೇಗಿದ್ದಾರೆ ಎಂಬುದನ್ನು ಶಾಲೆಯ ಚಟುವಟಿಕೆಯಿಂದ ತಿಳಿಯಬಹುದು. ಹಲವು ಸರಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿಯಲ್ಲಿದ್ದರೂ ಹಳೆನೇರಂಕಿ ಶಾಲೆ ಖಾಸಗಿ ಶಾಲೆಗಳಿಗೆ ಸರಿಮಾನವಾಗಿ ಅಭಿವೃದ್ಧಿ ಹೊಂದಿರುವುದು ಸಂತಸ ತಂದಿದೆ. ಇಲ್ಲಿ ಕ್ರೀಯಾಶೀಲ ಮುಖ್ಯಶಿಕ್ಷಕರು, ಶಿಕ್ಷಕರ ತಂಡವಿದೆ ಎಂದು ಹೇಳಿದರು.


ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಕೇಡರ್ ಹಾಗೂ ಪದವಿಯೇತರ ಮುಖ್ಯಗುರುಗಳ ಸಂಘದ ಅಧ್ಯಕ್ಷ ನಿಂಗರಾಜು ಕೆ.ಪಿ.ಮಾತನಾಡಿ, ಹಳೆನೇರಂಕಿಯ ಮಣ್ಣಿನಲ್ಲಿ ಸಂಸ್ಕೃತಿಯ ಸೊಬಗು ಇದೆ ಎಂಬುದು ಸಾಬೀತಾಗಿದೆ. ಈ ಶಾಲೆ ಹೈಸ್ಕೂಲ್ ಆರಂಭಕ್ಕೆ ಸೂಕ್ತವಾಗಿದೆ ಎಂದು ಹೇಳಿದರು. ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ.ಮಾತನಾಡಿ, ಹಳೆನೇರಂಕಿ ಶಾಲೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಶಿಕ್ಷಕರು ಹೆಚ್ಚು ಶ್ರಮವಹಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಸರಕಾರಿ ಶಾಲೆಗಳಿಗೆ ಹಿರಿಯ ವಿದ್ಯಾರ್ಥಿಗಳೇ ಬೆನ್ನೆಲುಬು ಆಗಿದ್ದಾರೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತಡ್ಡ ಮಾತನಾಡಿ, ಶತಮಾನೋತ್ಸವ ಸಂಭ್ರಮದಲ್ಲಿರುವ ಹಳೆನೇರಂಕಿ ಶಾಲೆಯಲ್ಲಿ ಈಗ ಯಾವುದೇ ಕೊರತೆಗಳು ಇಲ್ಲ. ನೂತನ ಕೊಠಡಿ, ರಂಗಮಂದಿರ, ಸಭಾಭವನ, ಆಟದ ಮೈದಾನ, ಕಂಪ್ಯೂಟರ್, ಗ್ರಂಥಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಮುಂದಿನ ವರ್ಷದಿಂದ ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಆಂಗ್ಲಮಾಧ್ಯಮ ಆರಂಭಗೊಳ್ಳಲಿದೆ. ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಊರಿನವರು ತಮ್ಮ ಮಕ್ಕಳನ್ನೂ ಊರಿನ ಶಾಲೆಗೆ ಕಳಿಸುವ ಮೂಲಕ ಶತಮಾನೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸಬೇಕೆಂದು ಹೇಳಿದರು.

ದತ್ತಿನಿಧಿ ಪ್ರಾಯೋಜಕರಿಗೆ ಗೌರವಾರ್ಪಣೆ;
ಶಾಲೆಯಲ್ಲಿ ದಿ| ವಿಶ್ವನಾಥ ಮರಂಕಾಡಿ, ದಿ| ಲಕ್ಷ್ಮೀ ತಿಮ್ಮಪ್ಪ ಗೌಡ ಕಣೆಮಾರು, ದಿ| ಗಣಪತಿ ಆಚಾರ್ಯ ಪಾತೃಮಾಡಿ, ದಿ| ಬಾಬು ರೈ ರಾಮಮಜಲು, ದಿ| ಪೆರ್ನು ಗೌಡ ಮತ್ತು ಸೀತಮ್ಮ ಪಾಲೆತ್ತಡ್ಡ, ದಿ| ಬಾಳಪ್ಪ ಗೌಡ ಕಟ್ಟಪುಣಿ ಅವರ ಹೆಸರಿನಲ್ಲಿ ಶಾಶ್ವತ ದತ್ತಿನಿಧಿ ಸ್ಥಾಪಿಸಿರುವ ಕುಟುಂಬಸ್ಥರಿಗೆ ಗೌರವಾರ್ಪಣೆ ಮಾಡಲಾಯಿತು. ಸಂಜೀವ ಗೌಡ ಮುಳಿಮಜಲು, ಸುಗಂಧಿ ಕೆ.ಬಟ್ಲಡ್ಕ ಅವರಿಗೆ ಶಾಲು ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ;
ವಿಭಾಗ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಪ್ರತಿನಿಧಿಸಿದ ಶಾಲೆಯ ಸಾಧಕ ವಿದ್ಯಾರ್ಥಿಗಳಾದ ನಿತಿನ್ ಪರಕ್ಕಾಲು, ಜಯೇಶ್, ತನ್ವಿ, ನೂತನ್, ಅಕ್ಷಯ್ ಗೌಡ, ಚಿಂತನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಿ| ಬಾಳಪ್ಪ ಗೌಡ ಕಟ್ಟಪುಣಿ ಅವರ ಸ್ಮರಣಾರ್ಥ ಅವರ ಕುಟುಂಬದವರು ಈ ದತ್ತಿನಿಧಿ ಪ್ರಾಯೋಜಿಸಿದ್ದರು.

ಸರಕಾರಿ ನೌಕರರಿಗೆ ಸನ್ಮಾನ;
ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಳೆನೇರಂಕಿ ಗ್ರಾಮದವರಾದ ಶಿವಪ್ಪ ಕದ್ರ, ಜನಾರ್ದನ ಪೂಜಾರಿ ಕದ್ರ, ರಾಜೇಶ್ವರಿ ಪುಲಾರ, ಪುಷ್ಪಲತಾ, ಹರಿನಾರಾಯಣ ಆಚಾರ್ಯ, ಖಾಸೀಂ ಬೈಲಂಗಡಿ, ಶೀಲಾವತಿ ಮುಳಿಮಜಲು, ಪುಷ್ಪಲತಾಇಂದುಶೇಖರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಗೆ ವಿವಿಧ ರೀತಿಯಲ್ಲಿ ದೇಣಿಗೆ ನೀಡಿ ಸಹಕರಿಸಿದ ಮಹಾದಾನಿಗಳನ್ನೂ ಸಮಾರಂಭದಲ್ಲಿ ಗೌರವಿಸಲಾಯಿತು.

ಎಸ್‌ಡಿಎಂಸಿ ಸದಸ್ಯರಿಗೆ ಗೌರವಾರ್ಪಣೆ;
ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಲೋಚನಾ ಮರಂಕಾಡಿ, ಸದಸ್ಯರಾದ ಸವಿತಾ ಕೆ.ಕುಕ್ಕೆಜಾಲು, ಅಕ್ಷತಾ ಕುಕ್ಕೆಜಾಲು, ಅಬ್ಸಾ ಮೇಲೂರು, ಮಾಲತಿ ಕೆಮ್ಮಿಂಜೆ, ಲೀಲಾವತಿ ಪಾತೃಮಾಡಿ, ಭಾರತಿ ಬರೆಂಬೆಟ್ಟು, ರೇವತಿ ಮರಂಕಾಡಿ, ಶುಭಾ ಬರೆಂಬೆಟ್ಟು, ಚಂದ್ರಶೇಖರ ಹೊಸಮಾರಡ್ಡ, ಪುರಂದರ ಪೂಜಾರಿ, ಆನಂದ ಆರಟಿಗೆ, ಪೂವಪ್ಪ ಗೌಡ ಕೆಮ್ಮಿಂಜೆ, ಧರ್ಣಪ್ಪ ಮೂಲ್ಯ ಪರಕ್ಕಾಲು, ದಾಮೋದರ ಬರೆಂಬೆಟ್ಟು, ಜನಾರ್ದನ ಬರೆಂಬೆಟ್ಟು, ದಿನೇಶ ಆಲಂಕಾರು ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ ರೈ ರಾಮಮಜಲು, ಪ್ರಧಾನ ಕಾರ್ಯದರ್ಶಿ, ಮುಖ್ಯಶಿಕ್ಷಕರೂ ಆದ ವೈ.ಸಾಂತಪ್ಪ ಗೌಡ, ಉಪಾಧ್ಯಕ್ಷೆ ವಸಂತಿ ಕಣೆಮಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸದಸ್ಯರಾದ ಚಂದ್ರಶೇಖರ ಹೊಸಮಾರಡ್ಡ, ಆನಂದ ಪರಕ್ಕಾಲು, ಪೂವಪ್ಪ ಗೌಡ ಕೆಮ್ಮಿಂಜೆ, ಜಯಂತ ಬರೆಂಬೆಟ್ಟು, ಶುಭಾ ಬರೆಂಬೆಟ್ಟು, ಮಾಲತಿ ಕೆಮ್ಮಿಂಜೆ, ಸಹಶಿಕ್ಷಕ ನವೀನ ಎ.ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಹಶಿಕ್ಷಕಿ ಶಶಿಕಲಾ ಎಂ.ಸ್ವಾಗತಿಸಿದರು. ಸಹಶಿಕ್ಷಕ ನವೀನ ಎ.ವಂದಿಸಿದರು. ಸಹಶಿಕ್ಷಕಿ ಗೀತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಾರಂಭದ ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಊರಿನ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

ನಿವೃತ್ತ,ವರ್ಗಾವಣೆಗೊಂಡ ಶಿಕ್ಷಕರಿಗೆ ಗುರುವಂದನೆ;
ಹಳೆನೇರಂಕಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಹಾಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕರಾದ ಸಂಜೀವ ಬಿ.ಬಟ್ಲಡ್ಕ, ಸುಗಂಧಿ ಕೆ., ನಿವೃತ್ತ ಶಿಕ್ಷಕಿ ರಾಜೇಶ್ವರಿ ಪುಲಾರ, ವರ್ಗಾವಣೆಗೊಂಡ ಶಿಕ್ಷಕರಾದ ಮೀನಾಕ್ಷಿ, ಮಯೂರು ಪಿ., ಮೋಹನಾಂಗಿ, ದೀಪಾ ಚಿತ್ತೂರು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಹಶಿಕ್ಷಕ ದಯಾನಂದ ಓಡ್ಲ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ಅವರು ಪರಿಚಯಿಸಿದರು. ಸನ್ಮಾನಿತರ ಪರವಾಗಿ ಶಿಕ್ಷಕಿ ದೀಪಾ ಸಂದರ್ಭೋಚಿತವಾಗಿ ಮಾತನಾಡಿದರು.

ಉದ್ಯಾನವನ ಉದ್ಘಾಟನೆ;
ಗೋಪಣ್ಣ ಗೌಡ ಹಾಗೂ ವಸಂತಿ ಕಣೆಮಾರು ಅವರು ಪ್ರಾಯೋಜಿಸಿದ್ದ ಉದ್ಯಾನವನದ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಯಿತು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಉದ್ಯಾನವನ ಉದ್ಘಾಟಿಸಿದರು. ಉದ್ಯಾನವನ ಪ್ರಾಯೋಜಿಸಿದ್ದ ಗೋಪಣ್ಣ ಗೌಡ-ವಸಂತಿ ಕಣೆಮಾರು ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ವಸಂತಿ ಕಣೆಮಾರು ಅವರು ಸಂದರ್ಭೋಚಿತವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here