ವಿಟ್ಲ: ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಅಲ್ಯುಮಿನಿಯಂ ದೋಟಿ ಸಮೀಪದ ಹೈಟೆನ್ಶನ್ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕರೋಪಾಡಿ ಗ್ರಾಮದ ಪದ್ಯಾಣ ಗಡಿಭಾಗದಲ್ಲಿ ನಡೆದಿದೆ.

ಕರೋಪಾಡಿ ಗ್ರಾಮದ ಪದ್ಯಾಣ ನಿವಾಸಿ ನಾರಾಯಣ ನಾಯ್ಕ (45 ವ.) ಮೃತ ದುರ್ದೈವಿ.
ನಾರಾಯಣ ನಾಯ್ಕರವರು ಡಿ.7ರಂದು ಬೆಳಿಗ್ಗೆ ಕರೋಪಾಡಿ ಗ್ರಾಮದ ಪದ್ಯಾಣ ಗಡಿಜಾಗೆ ಎಂಬಲ್ಲಿರುವ ಮನೆಯ ಎದುರುಗಡೆ ಇರುವ ತೆಂಗಿನ ಮರದಿಂದ ಅಲ್ಯೂಮಿನಿಯಂ ದೋಟಿಯಿಂದ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ದೋಟಿ ತೆಂಗಿನ ಮರದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗೆ ತಾಗಿ ಶಾಕ್ ತಗುಲಿದೆ.
ಘಟನೆಯಿಂದಾಗಿ ಕೆಳಕ್ಕೆ ಬಿದ್ದ ಅವರನ್ನು ಕೂಡಲೇ ಅವರ ತಮ್ಮ ಗಣೇಶ್ ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ನಾರಾಯಣ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.