ನಾನು ಕೂಡ ಧರ್ಮಸ್ಥಳ ಸಂಘದಲ್ಲಿ ಸದಸ್ಯೆಯಾಗಿದ್ದೆ: ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಭಂಡಾರಿ
ಪುತ್ತೂರು: ಜ್ಞಾನವಿಕಾಸ ಕೇಂದ್ರಗಳ ಮೂಲಕ ಜ್ಞಾನ ಹಂಚುವ ಕೆಲಸ ಆಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳೆಯರಿಗೆ ಅದೆಷ್ಟೋ ಒಳ್ಳೆಯ ಮಾಹಿತಿಗಳು ತಲುಪುತ್ತಿವೆ. ಕಾರ್ಯಕ್ರಮದ ಶಿಸ್ತು ಸದಸ್ಯರ ಶಿಸ್ತು ತುಂಬಾ ಉತ್ತಮವಾಗಿದೆ ಇದಕ್ಕೆ ಕಾರಣ ಜ್ಞಾನವಿಕಾಸ ಕಾರ್ಯಕ್ರಮ. ನನ್ನ ತಾಯಿ ಕೂಡ ಸಂಘದ ಸದಸ್ಯೆ, ನಾನೂ ಕೂಡ ಕೆಲವು ವರ್ಷ ಸಂಘದ ಸದಸ್ಯೆಯಾಗಿದ್ದೆ ಎಂದು ಸಂಪ್ಯ ಪೊಲೀಸ್ ಠಾಣೆಯ ಉಪನಿರೀಕ್ಷಾಕರಾದ ಸುಷ್ಮಾ ಭಂಡಾರಿ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಜ.7 ರಂದು ಕುಂಬ್ರ ವಲಯದ ಪರ್ಪುಂಜ ಶಿವಕೃಪಾ ಸಭಾಭವನದಲ್ಲಿ ನಡೆದ ತಾಲೂಕಿನ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ತಾಲೂಕು ಮಟ್ಟದ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಾವು ತಿಳಿದುಕೊಂಡ ಒಳ್ಳೆಯ ವಿಚಾರಗಳನ್ನು ಇತರರಿಗೂ ತಿಳಿಸುವುದರಿಂದ ಜಾಗೃತಿ ಮೂಡುತ್ತದೆ ಎಂದ ಸುಷ್ಮಾ ಭಂಡಾರಿಯವರು ಮೊಬೈಲ್ ಬಳಕೆಯಿಂದ ಆಗುವ ಸಮಸ್ಯೆಗಳ ಬಗ್ಗೆ, ಸದಸ್ಯರು ಮೋಸ ಹೋಗುತ್ತಿರುವ ಬಗ್ಗೆ, ಸದಸ್ಯರು ಈ ಬಗ್ಗೆ ಎಚ್ಚೆತ್ತುಕೊಂಡು ಪ್ರತಿಕ್ರಿಯಿಸುವ ಬಗ್ಗೆ, ನಮ್ಮ ವೈಯಕ್ತಿಕ ವಿಚಾರಗಳನ್ನು ಯಾವುದೇ ಕಾರಣಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಬಾರದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಪುತ್ತೂರು ತಾಲೂಕಿನ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ತಾಲೂಕಿನಲ್ಲಿ 25 ಕೇಂದ್ರಗಳಿದ್ದು ಎಲ್ಲಾ ಕೇಂದ್ರಗಳಿಂದಲೂ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದರ ಹಿಂದೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀಯವರು ಶ್ರಮ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಬಿಸಿ ಟ್ರಸ್ಟ್ ದಕ್ಷಿಣ ಕನ್ನಡ 2 ಜಿಲ್ಲೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮವು ಮಹಿಳೆಯರನ್ನು ಸಬಲರನ್ನಾಗಿಸಿ ತನ್ನ ಕುಟುಂಬದ ಬೆಳವಣಿಗೆಯನ್ನು ಕಂಡುಕೊಂಡಿದೆ. ಯೋಜನೆಯು ಸ್ವಚ್ಛತೆಗೆ ಹೆಚ್ಚಿನ ಪ್ರಾಧನ್ಯತೆ ನೀಡಿದೆ. ಮಹಿಳೆಯರು ಮನೆಯಲ್ಲಿ ರಂಗೋಲಿ ಹಾಕುವುದರಿಂದ, ಭಜನೆ ಮಾಡುವುದರಿಂದ ಆಗುವ ಪ್ರಯೋಜನಗಳೇನು ಎಂದು ಮಾಹಿತಿ ನೀಡಿದರು. ಹಾಗೂ ಮಹಿಳೆಯರು ತಮ್ಮ ಕೌಶಲ್ಯ ವನ್ನು ಪ್ರದರ್ಶಿಸಲು ಜ್ಞಾನವಿಕಾಸ ಕಾರ್ಯಕ್ರಮ ವೇದಿಕೆ ಮಾಡಿ ಕೊಟ್ಟಿದೆ. ಹಾಗೂ ಸ್ವ ಉದ್ಯೋಗಕ್ಕೂ ಹೆಚ್ಚಿನ ಗಮನ ನೀಡುವುದು ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದಲ್ಲಿ ಕುಂಬ್ರ ವಲಯದ ಜನಜಾಗೃತಿ ವಲಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ, ಹಿರಿಯರು ಪ್ರಗತಿಪರ ಕೃಷಿಕರಾದ ಹೊನ್ನಪ್ಪ ಗೌಡ ಕೋಡಿಬೈಲ್ ಉಪಸ್ಥಿತರಿದ್ದರು.
ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ” ಮಹಿಳೆಯರ ಕೌಟುಂಬಿಕ ಜೀವನದೊಂದಿಗೆ ವೃತ್ತಿ ಬದುಕು ಹಾಗೂ ಒತ್ತಡ ನಿವಾರಣೆ ” ಎಂಬ ವಿಷಯದಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಆಶಾ ಬೆಳ್ಳಾರೆಯವರು ಮಾಹಿತಿ ನೀಡುತ್ತಾ ಮಹಿಳೆ ಸಮಾಜದ ಶಕ್ತಿ, ಎಲ್ಲಾ ವಿಧದಲ್ಲಿಯೂ ಮಹಿಳೆ ಸಬಲೆ ಆಗಿದ್ದಾಳೆ.ತನ್ನ ಕುಟುಂಬದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದು ಮಕ್ಕಳ ಭವಿಷ್ಯ, ಗಂಡನ ಆರೋಗ್ಯ,ಮನೆಯ ಹಿರಿಯರ ಆರೋಗ್ಯ ಉತ್ತಮವಾಗಿಡಲು ಕಷ್ಟ ಪಡುತ್ತಾಳೆ. ತನ್ನ ಕುಟುಂಬದ ಜೀವನದೊಂದಿಗೆ ತನ್ನ ವೃತ್ತಿಯನ್ನು ಸಂಬಾಳಿಸಿಕೊಂಡು ಹೋಗುತ್ತಿದ್ದಾಳೆ. ನಮ್ಮ ಬುದ್ದಿ ಆಲೋಚನೆಗಳ ಕೇಂದ್ರ, ಮನಸ್ಸು ಭಾವನೆಗಳ ಕೇಂದ್ರ, ಶರೀರ ಒಂದು ವ್ಯಕ್ತಿತ್ವದ ಭಾಗ. ನಮ್ಮ ಬುದ್ದಿ,ಮನಸ್ಸು,ಶರೀರ ಇದು ಒಂದೇ ಆಗಿರಬೇಕು. ಇದರ ನಿಯಂತ್ರಣ ನಮಗಿರಬೇಕು. ಇದರ ನಿಯಂತ್ರಣ ನಮಗಿದ್ದರೆ ಯಾವುದೇ ಒತ್ತಡಗಳು ನಮಗೆ ಆಗುವುದಿಲ್ಲ ಎಲ್ಲಾ ಕೆಲಸಗಳನ್ನು ವಿಚಾರಗಳನ್ನು ಒಮ್ಮೆಯೇ ಹಾಕಿಕೊಂಡಾಗ ಒತ್ತಡ ಹೆಚ್ಚಾಗುತ್ತದೆ.ಬದಲಾಗಿ ನಮ್ಮತನವನ್ನು ಅರಿತುಕೊಂಡು ಹೋದಾಗ ಜೀವನ ಸುಂದರವಾಗಿರುತ್ತದೆ.ನಮ್ಮ ಮಕ್ಕಳಿಗೆ ನಾವೇ ರೋಲ್ ಮಾಡೆಲ್ ಆಗಬೇಕು. ಪುಸ್ತಕ ಓದುವುದರಿಂದ ಆಗುವ ಪ್ರಯೋಜಗಳ ಬಗ್ಗೆ ತಿಳಿಸಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆಯೂ ತಿಳಿಸಿದರು.
ವಿಚಾರಗೋಷ್ಠಿ ಕಾರ್ಯಕ್ರಮದ ಬಳಿಕ ಕೇಂದ್ರದ ಸದಸ್ಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೇಂದ್ರದ ಸದಸ್ಯರಾದ ಗೀತಪ್ರಿಯ ಹಾಗೂ ಅಂಕಿತ ಪ್ರಾರ್ಥಿಸಿದರು. ಕೇಂದ್ರದ ಸದಸ್ಯರಾದ ರಾಜೀವಿ ಹಾಗೂ ಚೇತನರವರು ಜ್ಞಾನ ವಿಕಾಸ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ರಾಜೇಶ್ ರೈ ಪರ್ಪುಂಜ, ರಾಜೀವಿ ಕುಂಬ್ರ, ಹರಿಹರ ಕೋಡಿಬೈಲು, ಅರುಣ್ ರೈ ಬಿಜಳ, ಸುಧಾಕರ ರೈ ಕುಂಬ್ರ, ಪಾರ್ವತಿ, ಸುರೇಖಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕುಂಬ್ರ ವಲಯದ ಮೇಲ್ವಿಚಾರಕರಾದ ಸುನೀತ ಶೆಟ್ಟಿ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಸದಸ್ಯರಿಗೆ ಗೌರವಾರ್ಪಣೆ
ಜಲಮಂಗಲ ಕಾರ್ಯಕ್ರಮದಡಿಯಲ್ಲಿ ಉಪ್ಪಳ್ಳಿಗೆಯ ಲಕ್ಷ್ಮಿಯವರಿಗೆ ಕಮೋಡ್ ವೀಲ್ ಚೇರನ್ನು ಹಸ್ತಾಂತರ, ಮೇನಲದ ಚಂದ್ರವತಿಯವರಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಣೆ, ಕರ್ನೂರಿನಲ್ಲಿ ಹೊಸದಾಗಿ ಆರಂಭಿಸಿದ ದಾರಿದೀಪ ಜ್ಞಾನವಿಕಾಸ ಕೇಂದ್ರದ ದಾಖಲಾತಿಯನ್ನು ಕೇಂದ್ರದ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ತಾಲೂಕಿನ ಜ್ಞಾನವಿಕಾಸ ಕೇಂದ್ರದಲ್ಲಿರುವ ಹಿರಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಸದಸ್ಯರಿಗೆ ಪುಷ್ಪಗುಚ್ಛ ಸ್ಪರ್ಧೆ ರಂಗೋಲಿ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಕೇಂದ್ರದ ಸದಸ್ಯರ ಸ್ವ ಉದ್ಯೋಗದ ಸ್ಟಾಲ್ಅನ್ನು ಹಾಕಿದ್ದರು.
6 ಲಕ್ಷಕ್ಕೂ ಅಧಿಕ ಸಂಘಗಳು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ೨೨ ಸಾವಿರ ಹಳ್ಳಿಗಳಲ್ಲಿ ವ್ಯಾಪಿಸಿದ್ದು 6 ಲಕ್ಷಕ್ಕೂ ಅಧಿಕ ಸಂಘಗಳಿವೆ, 56 ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ.46 ಸಾವಿರ ಮಂದಿ ಸಿಬ್ಬಂದಿಗಳಿದ್ದಾರೆ. ತಾಲೂಕಿನಲ್ಲಿ 22 ಸಾವಿರ ಮಂದಿ ಸದಸ್ಯರಿದ್ದು, ಸುಮಾರು 162 ಕುಟುಂಬಗಳಿಗೆ ಮಾಸಶಾನ ಬರುತ್ತಿದೆ.