ಶಾಲೆಯನ್ನು ಮರೆಯಲಿಲ್ಲ ಹಿರಿಯ ವಿದ್ಯಾರ್ಥಿಗಳು….

0

4 ದಶಕಗಳ ಹಿಂದೆ ಕಲಿತ ವಿದ್ಯಾರ್ಥಿಗಳಿಂದ ಶಾಲೆಗೆ ಕೊಡುಗೆ

ಉಪ್ಪಿನಂಗಡಿ : 47 ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಮತ್ತೆ ಒಗ್ಗೂಡಿ ತಾವು ಕಲಿತ ವಿದ್ಯಾ ಸಂಸ್ಥೆಯ ಇಂದಿನ ಅಗತ್ಯತೆಯನ್ನು ಪೂರೈಸುವ ಮೂಲಕ ಸಮಾಜಕ್ಕೆ ಪ್ರೇರಣಾದಾಯಿ ನಡೆಯನ್ನು ತೋರಿಸಿಕೊಟ್ಟ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.


ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತವರ ಸ್ನೇಹಿತರು 1978 ರಲ್ಲಿ ಉಪ್ಪಿನಂಗಡಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸ್ಥಿತಿಗತಿಗಳಲ್ಲಿ ಬದುಕು ಕಂಡುಕೊಂಡಿದ್ದರು. ಅವರಲ್ಲಿ ಹಲವರು ಪರಸ್ಪರ ಸಂಪರ್ಕದಲ್ಲಿದ್ದು, ಕಳೆದ ಅಗಸ್ಟ್ 17 ರಂದು ಅದೇ ವಿದ್ಯಾ ಸಂಸ್ಥೆಯಲ್ಲಿ ಪುನರ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಸ್ಪರರ ಜೀವನಗಾಥೆಯನ್ನು ಹಂಚಿಕೊಂಡಿದ್ದರು. ಈ ವೇಳೆ ತಾವು ಕಲಿತ ಈ ವಿದ್ಯಾ ಸಂಸ್ಥೆಗೆ ಏನಾದರೂ ಕೊಡುಗೆಯನ್ನು ನೀಡಬೇಕೆಂಬ ಬಯಕೆ ವ್ಯಕ್ತಗೊಂಡಾಗ ಶಾಲಾಡಳಿತವು ವಿದ್ಯಾರ್ಥಿಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ, ಕೈತೊಳೆಯುವ ಸ್ಟೀಲ್ ಬೇಸಿನ್, ನ್ಯಾಪ್ಕಿನ್ ಬರ್ನರ್ ಘಟಕದ ಅವಶ್ಯಕತೆಯನ್ನು ಈ ತಂಡದ ಮುಂದಿರಿಸಿತ್ತು.


ಸ್ಪಂದಿಸಿದ ಈ ಹಿರಿಯ ವಿದ್ಯಾರ್ಥಿ ಗುಂಪು 80 ಸಾವಿರ ವೆಚ್ಚದಲ್ಲಿ ಈ ಮೂರು ಘಟಕಗಳನ್ನು ಮಂಗಳವಾರದಂದು ಶಾಲೆಗೆ ಹಸ್ತಾಂತರಿಸಿ ತಾವು ಕಲಿತ ಶಾಲೆಯೊಂದಿಗಿನ ತಮ್ಮ ಸಂಬಂಧವನ್ನು ಮತ್ತೆ ಜೀವಂತವಿರಿಸಿತು.


ಘಟಕಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಡಾ. ಗೋವಿಂದಪ್ರಸಾದ್ ಕಜೆ, ಜಲೀಲ್ ಮುಕ್ರಿ, ಎಂ ಕೆ ರಜಾಕ್, ಸುಬ್ರಾಯ, ವಿಶ್ವನಾಥ, ಜಯಕುಮಾರ್, ವಿಲ್ಪ್ರೆಡ್ ಡಿಸೋಜಾ, ಸುಬ್ರಹ್ಮಣ್ಯ, ಗಣೇಶ್ ನಾಯಕ್ ಕರಾಯ, ರುಕ್ಮಿಣಿ, ಮರಿಯಮ್ಮ, ಜೆಸಿಂತಾ , ಪ್ರೌಡ ಶಾಲಾ ಉಪ ಪ್ರಾಂಶುಪಾಲೆ ದೇವಕಿ ಡಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಗುಣವತಿ, ಸದಸ್ಯರಾದ ಫಾರೂಕ್ ಜಿಂದಗಿ, ಮಲ್ಲೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here