ಪುತ್ತೂರು : ತೋಟಗಾರಿಕೆ ಇಲಾಖೆಯಡಿ 2024-25ನೇ ಸಾಲಿನ ಬೆಳೆ ವಿಮಾ ಪರಿಹಾರ ದ.ಕ. ಜಿಲ್ಲೆಯ ರೈತರ ಖಾತೆಗಳಿಗೆ ಸೋಮವಾರದಿಂದ ಜಮೆಯಾಗಲು ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ತೋಟಗಾರಿಕೆ ಬೆಳೆಗೆ ಸಂಭವಿಸುವ ನಷ್ಟ ಪರಿಹಾರವನ್ನು ಭರಿಸಲು ಸರಕಾರ ಪರಿಹಾರ ವಿತರಿಸುತ್ತಿದೆ. ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುರಿದ ಮಳೆಯ ಪ್ರಮಾಣ ಆಧರಿಸಿ ಪರಿಹಾರ ಮೊತ್ತ ಪಾವತಿಸಲಾಗುತ್ತದೆ.
ದ.ಕ.ದಲ್ಲಿ 2024-25ರಲ್ಲಿ 1.30 ಲಕ್ಷ ಪ್ರಕರಣಗಳು (ಅರ್ಜಿಗಳು) ಸಲ್ಲಿಕೆಯಾಗಿತ್ತು. ಅರ್ಜಿದಾರ ಖಾತೆಗಳಿಗೆ ನವೆಂಬರ್ ಮೊದಲ ವಾರದಲ್ಲಿ ಪರಿಹಾರ ಮೊತ್ತ ಜಮೆಯಾಗಬೇಕಿತ್ತು. ತಾಂತ್ರಿಕ ಕಾರಣದಿಂದ ತಡವಾಗಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ಮುಂದಿನ ಒಂದು ವಾರದೊಳಗೆ ಸಂಪೂರ್ಣ ಪರಿಹಾರ ಪಾವತಿಯಾಗುವ ನಿರೀಕ್ಷೆ ಇದೆ. ಈ ನಡುವೆ ಕೆಲವು ರೈತರು ತಾವು ವಿಮೆ ಕಂತು ಪಾವತಿಸಿದ್ದಕ್ಕಿಂತಲೂ ಕಡಿಮೆ ಪರಿಹಾರ ಬಂದಿರುವುದಾಗಿ ದೂರಿದ್ದಾರೆ. ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೂ ಈ ಬಗ್ಗೆ ದೂರುಗಳು ಬಂದಿದ್ದು, ವಿಮಾ ಕಂಪೆನಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ವರದಿ ಕೈ ಸೇರಿದ ಬಳಿಕ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
