ಕಂಬಳ ವಿಚಾರವಾಗಿ ಶಾಸಕ ಅಶೋಕ್ ರೈ ಹತ್ತು ಬಾರಿ ನನಗೆ ಮನವಿ ಮಾಡಿದ್ದರು; ಸಚಿವ ಎಚ್ ಕೆ ಪಾಟೀಲ್
ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ ಒಟ್ಟು 23 ಕಂಬಳಗಳಿಗೆ ವಾರ್ಷಿಕವಾಗಿ ತಲಾ 5 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಸರಕಾರ ಘೋಷಣೆ ಮಾಡಿದ್ದು , ಈ ವಿಚಾರವನ್ನು ಡಿ.8ರಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್‌ರವರು ಸದನದಲ್ಲಿ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ವಿಚಾರವಾಗಿ ಮಾತನಾಡಿದರು. ಉಭಯ ಜಿಲ್ಲೆಗಳ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಮತ್ತು ಯುವಜನ ಸಬಲೀಕರಣ ಇಲಾಖೆಯ ಅಧೀನ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿದ್ದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಅಶೋಕ್ ರೈ ಹೇಳಿದರು.
ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರದ ನೆರವು ಅಗತ್ಯವಾಗಿದೆ. ಈ ಹಿಂದೆ ಕಂಬಳಕ್ಕೆ ತಲಾ 5 ಲಕ್ಷ ಅನುದಾನವನ್ನು ನೀಡಲಾಗುತ್ತಿತ್ತು ಅದನ್ನು ಆ ಬಳಿಕ ನಿಲ್ಲಿಸಲಾಗಿತ್ತು. ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 23 ಕಂಬಳ ಕ್ರೀಡೆಗಳು ವಿವಿಧ ಕಡೆಗಳಲ್ಲಿ ನಡೆಯುತ್ತಿದೆ. ದ ಕ ಜಿಲ್ಲೆಯಲ್ಲಿ 19 ಕಡೆ ಮತ್ತು ಉಡುಪಿ ಜಿಲ್ಲೆಯಲ್ಲಿ 4 ಕಡೆಗಳಲ್ಲಿ ಈ ಕ್ರೀಡೆ ನಡೆಯುತ್ತಿದೆ. ಸರಕಾರ ಈ ವರ್ಷ 10 ಕಂಬಳಗಳಿಗೆ ತಲಾ 5 ಲಕ್ಷ ರೂ.ನಂತೆ ಪ್ರೋತ್ಸಾಹ ಧನವನ್ನು ನೀಡಿತ್ತು. ಎಲ್ಲಾ ಕಂಬಳಗಳಿಗೂ ಸರಕಾರ ಪ್ರೋತ್ಸಾಹ ಧನವನ್ನು ನೀಡುವಂತೆ ಸದನದಲ್ಲಿ ಆಗ್ರಹಿಸಿದರು. ಶಾಸಕರ ಪ್ರಸ್ತಾಪಕ್ಕೆ ದ ಕ ಜಿಲ್ಲೆಯ ಶಾಸಕರು ಬೆಂಬಲ ಸೂಚಿಸಿದರು.
ಅಶೋಕ್ ರೈ ಹತ್ತಕ್ಕೂ ಹೆಚ್ಚು ಬಾರಿ ನನ್ನ ಬಳಿ ಮನವಿ ಮಾಡಿದ್ದರು; ಸಚಿವ ಎಚ್ ಕೆ ಪಾಟೀಲ್
ಶಾಸಕ ಅಶೋಕ್ ರೈ ಪ್ರಶ್ನೆಗೆ ಉತ್ತರಿಸಿದ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ರವರು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ವಿಚಾರವಾಗಿ ಮಾತನಾಡಲು, ಮನವಿ ಮಾಡಲು ಪುತ್ತೂರು ಶಾಸಕ ಅಶೋಕ್ ರೈ ಅವರು ಹತ್ತಕ್ಕೂ ಮಿಕ್ಕಿ ಬಾರಿ ನನ್ನ ಬಳಿ ಬಂದಿದ್ದರು. ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಸಕ ಅಶೋಕ್ ರೈ ನಿರಂತರವಾಗಿ ನನ್ನ ಬಳಿ ಬಂದು ಮಾತನಾಡುತ್ತಿದ್ದರು. ಸರಕಾರ ಕಂಬಳವನ್ನು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಮತ್ತು ಯುವಜನ ಸಬಲೀಕರಣ ಅಧೀನ ಸಂಸ್ಥೆಗೆ ಸೇರ್ಪಡೆ ಮಾಡಿದೆ. ಈ ಬಾರಿ 10 ಕಂಬಳಗಳಿಗೆ ತಲಾ 5 ಲಕ್ಷ ರೂ ಪ್ರೋತ್ಸಾಹ ಧನವನ್ನು ನೀಡಿದೆ. ಒಟ್ಟು 23 ಅರ್ಜಿಗಳು ಸರಕಾರದ ಮುಂದೆ ಇದೆ. ಕಂಬಳದ ಬಗ್ಗೆ ಇರುವ ಬೇಡಿಕೆಯನ್ನು ಹಣಕಾಸು ಇಲಾಖೆಗೆ ಮಂಜೂರಾತಿಗೆ ಕಳುಹಿಸಲಾಗಿದೆ. ಮುಂದಿನ ವರ್ಷದಿಂದ ಒಟ್ಟು 23 ಕಂಬಳಗಳಿಗೂ ಸರಕಾರ ತಲಾ 5 ಲಕ್ಷ ಪ್ರೋತ್ಸಾಹ ಧನವನ್ನು ನೀಡಲಿದೆ ಎಂದು ಸಭೆಗೆ ತಿಳಿಸಿದರು.
ಮತ್ತೆ ತುಳುವಿನಲ್ಲಿ ಮಾತನಾಡಿದ ಆಶೋಕ್ ರೈ
ಮಂಗಳವಾರ ಕಂಬಳ ವಿಷಯ ಪ್ರಸ್ತಾಪ ಮಾಡಿದ ಶಾಸಕರು, ಸಭಾಧ್ಯಕ್ಷ ಯು ಟಿ ಖಾದರ್ ಅವರ ಜೊತೆ ತುಳುವಿನಲ್ಲೇ ಮಾತನಾಡಿದರು.
