




ವಿಟ್ಲ: ಬಡತನದಿಂದಾಗಿ ಶಿಕ್ಷಣ ಮುಂದುವರೆಸಲಾಗದ ಸ್ಥಿತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದ ಗಂಗಾಧರ್ ರೈ ಅವರು ದೇವರಂತೆ ಬಂದು ನನ್ನನ್ನು ಈ ಮಟ್ಟಕ್ಕೆ ಏರಿಸಿದರು.
ನನಗೆ ಅವರೇ ದೇವರು ಎಂದು ಸರಕಾರಿ ಪ್ರೌಢ ಶಾಲೆ ಮಂಚಿ – ಕೊಳ್ನಾಡು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ವಿನೋದರವರು ಹೇಳಿದರು.




ಅವರು ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವುಗಳ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.





ಪಾಟ್ರಕೋಡಿ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕರಾದ ಸುಧಾಕರ್ ಭಟ್ ಮಾತನಾಡಿ ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿದ್ದು ನಿರಂತರವಾದ ಕ್ರೀಡಾಭ್ಯಾಸ ನಿಮ್ಮನ್ನು ಜೀವನದಲ್ಲಿ ಮೇಲ್ದರ್ಜೆಗೇರಿಸುತ್ತದೆ ಎಂದರು.
ಧ್ವಜಾರೋಹಣ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದು, ತಾಲೂಕು ಮಟ್ಟದ ಕ್ರೀಡಾಪಟುಗಳಾದ ಅಬ್ದುಲ್ ಮಜೀದ್, ಲಾವಣ್ಯ , ಮಹಮ್ಮದ್ ಅಫ್ಜಲ್ ಮತ್ತು ಸಾನ್ವಿ ಪಿ.ಕೆ. ನೇತೃತ್ವದಲ್ಲಿ ಕ್ರೀಡಾ ಜ್ಯೋತಿ ಆಗಮಿಸಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಆಡಳಿತ ಮಂಡಳಿಯ ಅಧ್ಯಕ್ಷರಾದ ರೊ. ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಹಾಜಿ ಇಬ್ರಾಹಿಂ ಕೆ. ಆಡಳಿತ ಮಂಡಳಿ ಸದಸ್ಯರಾದ ಗಂಗಾಧರ ಆಳ್ವ , ಬಾಲಕೃಷ್ಣ ಆಳ್ವ , ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರುಗಳಾದ ಕೃತಿಕ ಮಾಣಿ ಮತ್ತು ಮೆಲ್ವಿನ್ ಕಿಶೋರ್ ಮಾರ್ಟಿಸ್, ದೈಹಿಕ ಶಿಕ್ಷಣ ಶಿಕ್ಷಕಿ ಕೃತಿಕಾ ಹಾಗೂ ಇತರರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಎಸ್ ಚೆನ್ನಪ್ಪ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ವಂದಿಸಿದರು. ಸಹ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಾಯಕಿ ಮೈತ್ರಿ ಮತ್ತು ಕ್ಲೆನೆತ್ ಸಿಕ್ವೇರಾ, ಕ್ರೀಡಾ ಕಾರ್ಯದರ್ಶಿ ಮೊಹಮ್ಮದ್ ಶಮಾಝ್ ಮೊದಲಾದವರು ಸಹಕರಿಸಿದರು.










