ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಮೇರಮಜಲ್ ಎಂಬಲ್ಲಿರುವ ಶ್ರೀಮಾತಾ ಲಕ್ಷಣಿ ಶಾಂತಿಧಾಮ ಎಂಬ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು.
‘ಮಾತೃದೇವೋಭವ ‘ಎಂಬ ನಾಣ್ಣುಡಿಯಂತೆ ಅಗಲಿದ ತನ್ನ ತಾಯಿಯ ಸ್ಮರಣಾರ್ಥ ಶ್ರೀಮಾತಾ ಲಕ್ಷಣಿ ಶಾಂತಿಧಾಮ ಎಂಬ ವೃದ್ಧಾಶ್ರಮವನ್ನು 17 ವರ್ಷಗಳ ಹಿಂದೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಸ್ವಂತ ಖರ್ಚಿನಿಂದ ಸ್ಥಾಪಿಸಿರುವ ಹರೀಶ್ ಪೆರ್ಗಡೆ ಕಾಂತಾಡಿಗುತ್ತು ಮಕ್ಕಳನ್ನು ಬರಮಾಡಿಕೊಂಡರು. ಪ್ರಸ್ತುತ ಒಟ್ಟು 44 ವೃದ್ಧರಿರುವ ಈ ಶಾಂತಿಧಾಮದಲ್ಲಿ ಇದುವರೆಗೆ ಸುಮಾರು 110 ಅನಾಥ ಶವಗಳಿಗೆ ಹರೀಶ್ ಪೆರ್ಗಡೆಯವರು ತಾನೇ ಹೆಗಲು ಕೊಟ್ಟು ಶವಸಂಸ್ಕಾರ ಮಾಡಿರುತ್ತಾರೆ. ವಿದ್ಯಾರ್ಥಿಗಳು ಭಜನೆ ಮತ್ತು ಹಾಡುಗಳ ಮೂಲಕ ಮನರಂಜಿಸಿದರು.

ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪ್ರವಾಸಕ್ಕೆ ಮಾತ್ರ ಆದ್ಯತೆ ಕೊಡದೆ ವೃದ್ಧರ ಕಷ್ಟಸುಖಗಳನ್ನು ಅರಿತು ಇಂತಹ ಸಂಸ್ಥೆಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಎಲ್ಲ ಮಕ್ಕಳು ಮನೆಯಲ್ಲಿ ಪೋಷಕರನ್ನು ಪ್ರೀತಿಯಿಂದ ಕಾಣಬೇಕು ಆ ಮೂಲಕ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು ಎಂದರು.
ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕವೃಂದದವರಿಂದ ಅಕ್ಕಿ, ತರಕಾರಿ, ಹಣ್ಣು ಹಂಪಲುಗಳನ್ನು ಸಂಗ್ರಹಿಸಿ ವೃದ್ಧಾಶ್ರಮಕ್ಕೆ ನೀಡಲಾಯಿತು. ಮಾನ್ಯ ಸಂಚಾಲಕರು ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಟ್ರಸ್ಟಿ ವೃಂದಾ ಜೆ ರೈ, ಸಹ ಆಡಳಿತ ಅಧಿಕಾರಿ ಹೇಮನಾಗೇಶ್ ರೈ, ಮುಖ್ಯ ಗುರುಗಳಾದ ನಾರಾಯಣ್ ಭಟ್ ಮತ್ತು ವಿನಯ ವಿ ಶೆಟ್ಟಿ, ಗೈಡ್ ಕ್ಯಾಪ್ಟನ್ ವನಿತಾ, ಶಿಕ್ಷಕಿಯರಾದ ಸವಿತಾ ಕೆ, ಕವಿತಾ ವಿ ರೈ, ಸುಷ್ಮಾ ಎಚ್ ರೈ, ಶಾಲಾ ಸಿಬಂದಿ ಶ್ರೀಧರ ಅಗಳಿ ಉಪಸ್ಥಿತರಿದ್ದರು.