ಪುತ್ತೂರು:ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ, ಪ್ರಗತಿಪರ ಕೃಷಿಕ ಸೋಮಶೇಖರ ಭಟ್(84ವ.)ರವರು ಎ.11ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿಯಲ್ಲಿ ಮುಂಚೂಣಿಯಲ್ಲಿದ್ದ ಇವರು ರಸ್ತೆ ಸಂಪರ್ಕವಿಲ್ಲದೇ ಇದ್ದ ಈಗಿನ ಆರ್ಯಾಪು, ಬಂಗಾರಡ್ಕ, ಬಲ್ನಾಡು ಸಂಪರ್ಕ ರಸ್ತೆಯಲ್ಲಿ ಸುಮಾರು 1 ಕಿ.ಮೀ. ದೂರದ ತನಕ ಸ್ವತಃ ತಾನೇ ಅಗೆದು ರಸ್ತೆ ನಿರ್ಮಿಸಿದ್ದವರು. ಈ ರಸ್ತೆ ಈಗ ಬಿ.ಎಸ್ ರಸ್ತೆ ಎಂದು ಹೆಸರು ಪಡೆದಿದೆ. ಯಾವುದೇ ಪ್ರಚಾರ ಬಯಸದೇ ಇದ್ದ ಸೋಮಶೇಖರ ಭಟ್ ಹಲವು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ದೇವಕಿ, ಪುತ್ರರಾದ ಪುರುಷರಕಟ್ಟೆಯ ಪ್ರಸಾದಿನಿ ಆಯುರ್ನಿಕೇತನ ಆಯುರ್ವೇದದ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಪ್ರಶಾಂತರಾಮ್ ಕುಮಾರ್, ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು, ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾಗಿರುವ ಇಂಜಿನಿಯರ್ ಪ್ರದೀಪಕೃಷ್ಣ ಬಂಗಾರಡ್ಕರವರನ್ನು ಅಗಲಿದ್ದಾರೆ.