ಕೊಳ್ತಿಗೆ: ಆನೆ‌ ದಾಳಿಗೆ ಮಹಿಳೆ ಬಲಿ ಪ್ರಕರಣ : ಒಂದೂವರೆ ವರ್ಷಗಳಿಂದ ಅಲೆದಾಡುತ್ತಿದ್ದ ಒಂಟಿ ಸಲಗ..?!:

0

ಯಾರಿಗೂ ತೊಂದರೆ ಕೊಡದ ಆನೆಯಾಗಿತ್ತು…
ಕೊನೆಗೂ ನನ್ನ ತಾಯಿಯ ಜೀವ ಬಲಿಯಾಯಿತು: ಯೋಗರಾಜ, ಮೃತ ಸೆಲ್ಲಮ್ಮರವರ ಪುತ್ರ
ಮೃತರ ಕುಟುಂಬಕ್ಕೆ ಸರಕಾರದಿಂದ 15 ಲಕ್ಷ ರೂಪಾಯಿ ಪರಿಹಾರ-ಶಾಸಕ ರೈ

ಪುತ್ತೂರು: ರಬ್ಬರ್ ಟ್ಯಾಪಿಂಗ್‌ನಲ್ಲಿ ನಿರತರಾಗಿದ್ದ ಮಹಿಳೆಯೋರ್ವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಕಣಿಯಾರು ಹರ್ತ್ಯಡ್ಕ ಕೆಎಫ್ ಡಿಸಿ ರಬ್ಬರ್ ಪ್ಲಾಂಟೇಶನ್‌ನಲ್ಲಿ ಏ.29 ರಂದು ಬೆಳಗ್ಗಿನ ಜಾವ ನಡೆದಿದೆ.ಅರ್ತ್ಯಡ್ಕ ಸಿಆರ್‌ಸಿ ಕಾಲನಿಯ ಸೆಲ್ಲಮ್ಮ (65ವ) ಮೃತಪಟ್ಟವರು.

ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಸಹಿತ ವಿವಿಧ ಜನಪ್ರತಿನಿಧಿಗಳು, ಅರಣ್ಯ ಇಲಾಖೆ, ಕೆಎಫ್ ಡಿಸಿ ಅಧಿಕಾರಿಗಳು, ಪೊಲೀಸ್ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸರಕಾರದ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರ ಕೊಡಿಸುವುದಾಗಿ ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದರು. ಇದಲ್ಲದೆ ಮೃತ ಸೆಲ್ಲಮ್ಮರವರ ಪುತ್ರ ಯೋಗರಾಜ್‌ರವರಿಗೆ ಕೆಎಫ್ ಡಿಸಿಯಲ್ಲಿ ಉದ್ಯೋಗ ನೀಡುವ ಬಗ್ಗೆಯೂ ಬೋರ್ಡ್‌ನಲ್ಲಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ 10 ದಿನಗಳ ಕಾಲ ಈ ಭಾಗದಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸದಂತೆ ಹಾಗೂ ರಬ್ಬರ್ ಪ್ಲಾಂಟೇಶನ್‌ನಲ್ಲಿ ಟಾಸ್ಕ್ ಫೋರ್ಸ್ ನಡೆಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಘಟನೆಯ ವಿವರ:
ಕೆಎಫ್ ಡಿಸಿ ನಿವೃತ್ತ ಉದ್ಯೋಗಿಯಾಗಿರುವ ಸೆಲ್ಲಮ್ಮರವರು ಎ.29 ರಂದು ಬೇರೊಬ್ಬ ಕೆಲಸದಾಳುವಿನ ಬದಲಿಗೆ ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ್ದರು. ಎಂದಿನಂತೆ ಬೆಳಿಗ್ಗಿನ ಜಾವ ಸುಮಾರು 7.30 ರಿಂದ 8 ಗಂಟೆಯೊಳಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸೆಲ್ಲಮ್ಮರವರು ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ವೇಳೆ ಒಂಟಿ ಸಲಗವೊಂದು ದಿಢೀರನೆ ದಾಳಿ ನಡೆಸಿದ್ದು ಈ ವೇಳೆ ಸೆಲ್ಲಮ್ಮರವರಿಗೆ ಓಡಿ ಹೋಗಲು ಆಗದೇ ಇದ್ದ ಪರಿಣಾಮ ಆನೆ ಸೆಲ್ಲಮ್ಮರವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿರಬಹುದು ಎಂದು ಅಂದಾಜಿಸಲಾಗಿದೆ. ಸೆಲ್ಲಮ್ಮರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಆನೆಯನ್ನು ನೋಡಿದ ಸತ್ಯಬಾಲು:
ರಬ್ಬರ್ ಪ್ಲಾಂಟೇಶನ್ ತುಂಬಾ ಪೊದೆ ಆವರಿಸಿಕೊಂಡಿರುವುದರಿಂದ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದೇ ಇರುವುದು ಅಲ್ಲದೆ ಇಳಿಜಾರು ಪ್ರದೇಶವಾಗಿರುವುದರಿಂದ ಕಾಡುಪ್ರಾಣಿಗಳಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಂಡು ಹೋಗಲು ಕೂಡ ಅಸಾಧ್ಯವಾದ ಪ್ರದೇಶ ಇದಾಗಿದೆ. ರಬ್ಬರ್ ಟ್ಯಾಪಿಂಗ್‌ನಲ್ಲಿ ನಿರತರಾಗಿದ್ದ ಸತ್ಯಬಾಲು ಎಂಬವರಿಗೆ ಆನೆ ಇರುವ ಬಗ್ಗೆ ಕಂಡು ಬಂದಿದ್ದು ಬೆಳಿಗ್ಗೆ 7.30 ರ ವೇಳೆಗೆ ಪ್ಲಾಂಟೇಶನ್‌ನಲ್ಲಿ ಮರಗಳು ಅಲುಗಾಡಿದಂತೆ ಕಂಡಿತ್ತು ಮಂಗಗಳು ಇರಬಹುದೇ ಎಂದು ನೋಡಿದಾಗ ಆನೆಯೊಂದು ನಡೆದುಕೊಂಡು ಹೋಗುತ್ತಿರುವುದು ಕಂಡಿದೆ. ತಕ್ಷಣವೇ ನಾನು ಬೊಬ್ಬೆ ಹೊಡೆದು ಆನೆ ಬಂದಿದೆ ಓಡಿ ಎಂದು ತಿಳಿಸಿದೆ. ಆನೆ ಯಾವ ಕಡೆ ಓಡಿದೆ ಎಂದು ನನಗೆ ಗೊತ್ತಾಗಲಿಲ್ಲ. ಆ ಬಳಿಕ ನಾವು ಎಲ್ಲರೂ ಸೇರಿಕೊಂಡಾಗ ನಮ್ಮಲ್ಲಿ ಒಬ್ಬರು ಅಂದರೆ ಸೆಲ್ಲಮ್ಮರವರು ಕಾಣದೇ ಇರುವುದು ಕಂಡು ಬಂತು. ಆ ಬಳಿಕ ನಾವುಗಳು ಹುಡುಕಿದಾಗ ಅವರ ಮೇಲೆ ಆನೆ ದಾಳಿ ನಡೆಸಿರುವುದು ಕಂಡು ಬಂದಿದೆ ಎಂದು ಸತ್ಯಬಾಲುರವರು ಮಾಹಿತಿ ನೀಡಿದ್ದಾರೆ.


ಒಂದೂವರೆ ವರ್ಷಗಳಿಂದ ಅಲೆದಾಡುತ್ತಿದ್ದ ಒಂಟಿ ಸಲಗ..?!:
ಕೊಳ್ತಿಗೆಯ ಆನೆಗುಂಡಿ ಪ್ರದೇಶದಿಂದ ಬಂದಿದೆ ಎನ್ನಲಾದ ಈ ಒಂಟಿ ಸಲಗವು ಕಳೆದ ಒಂದೂವರೆ ವರ್ಷಗಳಿಂದ ಕೊಳ್ತಿಗೆ, ಪೆರ್ಲಂಪಾಡಿ, ಕಣಿಯಾರು, ದೇರ್ಲ ಪರಿಸರ ಹಾಗೇ ಒಂದೊಮ್ಮೆ ಕೆಯ್ಯೂರು ಗ್ರಾಮದ ಎರಬೈಲು, ತೆಗ್ಗು ಹಾಗೇ ಉಪ್ಪಿನಂಗಡಿಯ ಬೆಳ್ಳಿಪ್ಪಾಡಿ, ಕಠಾರ ಪ್ರದೇಶದವರೇಗೆ ಸಂಚರಿಸಿದ ಸದ್ದು ಮಾಡಿತ್ತು. ಒಂದೊಮ್ಮೆ ಕೊಳ್ತಿಗೆಯಿಂದ ಪ್ರಯಾಣ ಬೆಳೆಸಿದ್ದ ಈ ಒಂಟಿ ಸಲಗ ಉಪ್ಪಿನಂಡಿಯ ಬೆಳ್ಳಿಪ್ಪಾಡಿ ಪ್ರದೇಶದವರೇಗೆ ನಡಿಗೆ ಮಾಡಿ ಅಲ್ಲಿಂದ ಜೊತೆಗಾತಿ ಆನೆಯೊಂದನ್ನು ಕರೆದುಕೊಂಡು ಮತ್ತೆ ಕೊಳ್ತಿಗೆ ಆನೆಗುಂಡಿ ಪ್ರದೇಶಕ್ಕೆ ಪ್ರವೇಶ ಪಡೆದಿತ್ತು. ಆ ಬಳಿಕವೂ ಮೂರ‍್ನಾಲ್ಕು ತಿಂಗಳಿಗೊಮ್ಮೆ ಕಣಿಯಾರು, ಅರ್ತಿಯಡ್ಕ, ದೇರ್ಲ,ಇಳಂತಾಜೆ ಈ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇತ್ತು. ಇತ್ತೀಚಿಗೆ ಅಂದರೆ ಒಂದೂವರೆ ತಿಂಗಳ ಹಿಂದೆ ಇದೇ ಆನೆ ಅರ್ತಿಯಡ್ಕ ಪ್ರದೇಶದಲ್ಲಿ ಕಾಣಿಸಿಕೊಂಡು ಒಂದಷ್ಟು ಕೃಷಿ ಹಾನಿ ಕೂಡ ಮಾಡಿತ್ತು.


ಆನೆ ಓಡಿಸಲು ಅರಣ್ಯ ಇಲಾಖೆ ಹರಸಾಹಸಪಟ್ಟಿತ್ತು…:
ಆಗಾಗ ಕಾಣಿಸಿಕೊಳ್ಳುತ್ತಿದ್ದ ಈ ಒಂಟಿ ಸಲಗವನ್ನು ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನ ಪಟ್ಟಿದ್ದರು. ಪಟಾಕಿಗಳನ್ನು ಸಿಡಿಸುವ ಮೂಲಕ ಆನೆಯನ್ನು ಮತ್ತೆ ಆನೆಗುಂಡಿ ಪ್ರದೇಶದತ್ತ ಕಳುಹಿಸಲು ಅಧಿಕಾರಿಗಳು ಪ್ರಯತ್ನ ಪಟ್ಟಿದ್ದರು. ಒಂದು ವರ್ಷದ ಹಿಂದೆ ಇದೇ ಆನೆಯು ಬೆಳ್ಳಿಪ್ಪಾಡಿ ಭಾಗಕ್ಕೆ ಎಂಟ್ರಿಕೊಟ್ಟಾಗ ಅಽಕಾರಿಗಳು ಮತ್ತೆ ಅದನ್ನು ಸ್ವಸ್ಥಾನಕ್ಕೆ ಕಳುಹಿಸಲು ಪ್ರಯತ್ನಪಟ್ಟಿದ್ದರು. ಅದರಂತೆ ಆನೆ ಮತ್ತೆ ಆನೆಗುಂಡಿ ಪ್ರದೇಶಕ್ಕೆ ಎಂಟ್ರಿ ಕೊಟ್ಟಿತ್ತು. ಆ ಬಳಿಕವೂ ಆನೆ ಕೊಳ್ತಿಗೆ ಗ್ರಾಮದ ಅರ್ತ್ಯಡ್ಕ, ಕೆಯ್ಯೂರು ಗ್ರಾಮದ ದೇರ್ಲ, ಇಳಂತಾಜೆ, ಕಣಿಯಾರುಮಲೆ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು.


ಯಾರಿಗೂ ತೊಂದರೆ ಕೊಡದ ಆನೆಯಾಗಿತ್ತು..?:
ಕಳೆದ ಒಂದೂವರೆ ವರ್ಷದಿಂದ ಅಲೆಮಾರಿಯಾಗಿ ಅಲೆದಾಡುತ್ತಿದ್ದ ಈ ಒಂಟಿ ಸಲಗ ಇದುವರೆಗೆ ಯಾರಿಗೂ ತೊಂದರೆಕೊಟ್ಟ ಉದಾಹರಣೆಗಳಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಹಸಿವಾದಾಗ ಸಿಕ್ಕಿದ ತೆಂಗಿನ ಸಸಿ,ಬಾಳೆಗಿಡ ಇತ್ಯಾದಿಗಳನ್ನು ಹುಡಿಮಾಡಿ ತಿಂದುಂಡು ಹೋಗುತ್ತಿತ್ತೇ ವಿನಹ ದೊಡ್ಡ ಮಟ್ಟದ ಕೃಷಿ ಹಾನಿ ಮಾಡಿದ ಘಟನೆಯೂ ಇಲ್ಲ ಎನ್ನುತ್ತಿದ್ದರು. ಆದರೆ ಅದೇ ಒಂಟಿ ಸಲಗ ಮಹಿಳೆಯೋರ್ವರ ಮೇಲೆ ದಾಳಿ ನಡೆಸಿ ಸಾಯಿಸಿದ್ದು ಮಾತ್ರ ದುರಂತವೇ ಸರಿ.


ಆನೆಯನ್ನು ಸ್ಥಳಾಂತರಿಸುವಂತೆ ವರ್ಷದ ಹಿಂದೆಯೇ ಮನವಿ ಮಾಡಲಾಗಿತ್ತು..?!:
ಒಂದೂವರೆ ವರ್ಷದ ಹಿಂದೆಯೇ ಆನೆ ಕೊಳ್ತಿಗೆ ಗ್ರಾಮಕ್ಕೆ ಕಾಲಿಟ್ಟು ರಂಪಾಟ ನಡೆಸಿದ ಬೆನ್ನಲ್ಲೆ ಈ ಭಾಗದ ಕೃಷಿಕರು ಆನೆಯನ್ನು ಹಿಡಿದು ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಆನೆಯನ್ನು ಹಿಡಿದು ಬೇರೆ ಕಡೆಗೆ ಸಾಗಿಸುವುದು ಅಷ್ಟು ಸುಲಭದ ಕೆಲಸವಲ್ಲ ಮತ್ತು ಇದಕ್ಕೆ ಸರಕಾರದಿಂದ ಅನುಮತಿ ಕೂಡ ಅಗತ್ಯವಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಆನೆಯನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಿಸುವ ಕೆಲಸವನ್ನು ಮಾಡಿದ್ದರು. ಆ ಬಳಿಕ ಕೆಲವು ತಿಂಗಳ ಹಿಂದೆ ಮತ್ತೆ ಕಾಡಿನಿಂದ ನಾಡಿಗೆ ಆನೆ ದಾಳಿ ಇಟ್ಟಾಗಲೂ ಜನರು ಭಯಗೊಂಡಿದ್ದರು. ಅದೆಷ್ಟೇ ಓಡಿಸಿದರೂ ಮತ್ತೆ ಮತ್ತೆ ನಾಡಿಗೆ ಪ್ರವೇಶ ಮಾಡುತ್ತಿದ್ದ ಆನೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಒಂದೇ ಪರಿಹಾರ ಎಂದು ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.


ಬೇರೊಬ್ಬರ ಬದಲಿಗೆ ಕೆಲಸಕ್ಕೆ ಹೋಗಿದ್ದ ಸೆಲ್ಲಮ್ಮ ದುರಂತ ಸಾವು…!:
ಸೆಲ್ಲಮ್ಮರವರು 65 ರ ಹರೆಯದವರಾಗಿದ್ದು ರಬ್ಬರ್ ಟ್ಯಾಪಿಂಗ್ ಕೆಲಸದಿಂದ ನಿವೃತ್ತಿ ಹೊಂದಿದ್ದು ಮನೆಯಲ್ಲೇ ಉಳಿದುಕೊಂಡಿದ್ದರು. ಎ.29 ರಂದು ಬೇರೊಬ್ಬರು ಕೆಲಸಕ್ಕೆ ರಜೆ ಮಾಡಿದ್ದರಿಂದ ಅವರ ಬದಲಿಗೆ ಸೆಲ್ಲಮ್ಮರವರು ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ್ದರು. ಆನೆ ದಾಳಿಗೆ ಅವರು ದುರಂತ ಸಾವು ಕಂಡಿದ್ದು ಮಾತ್ರ ಎಲ್ಲರ ಮನಸ್ಸಿಗೂ ನೋವು ತಂದಿದೆ. ಸೆಲ್ಲಮ್ಮರವರು ಪುತ್ರ ಯೋಗರಾಜ್ ಮತ್ತು ಪುತ್ರಿ ಶೈಲಾರವರನ್ನು ಅಗಲಿದ್ದಾರೆ. ಸೆಲ್ಲಮ್ಮರವರು ಕಣಿಯಾರು ಅರ್ತ್ಯಡ್ಕದಲ್ಲಿ ಒಬ್ಬರೇ ವಾಸವಾಗಿದ್ದು ಅಲ್ಲಿಂದಲೇ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಘಟನೆ ನಡೆದ ದಿನ ಸೆಲ್ಲಮ್ಮರವರ ಪುತ್ರ ಕೆಲಸ ನಿಮಿತ್ತ ಬೇರೆ ಕಡೆಗೆ ತೆರಳಿದ್ದರು. ಈ ವೇಳೆ ಅವರಿಗೆ ಸ್ಥಳೀಯರು ವಿಷಯ ತಿಳಿಸಿದ್ದರು.


ಇದು ಆನೆ ನಡಿಗೆಯ ದಾರಿ-ಆಗಬೇಕಾಗಿದೆ ಕಾಂಕ್ರೀಟ್…?!
ಈ ಒಂಟಿ ಸಲಗ ಕೇರಳದ ಪರಪ್ಪೆಯಿಂದ ಆನೆಗುಂಡಿ ಮಾರ್ಗವಾಗಿ ಬಂದಿದೆ ಎಂದು ಹೇಳಲಾಗಿದೆ. ಮುಖ್ಯವಾಗಿ ಆನೆಗಳು ಕೊಳ್ತಿಗೆ ಗ್ರಾಪಂ ವ್ಯಾಪ್ತಿಯ ಆನೆಗುಂಡಿಯಿಂದ ಕೊಂರ್ಬಡ್ಕ, ಪೆರ್ನಾಜೆ ಕೂದ್ರುಕೂಡಿ, ಕೋರಿಕ್ಕಾರು ರಸ್ತೆ, ಕಣಿಯಾರು ಪೆರ್ಲಂಪಾಡಿ ರಸ್ತೆಯಾಗಿ ಬರುತ್ತಿವೆ. ಇದು ಆನೆ ದಾಟುವ ರಸ್ತೆಯಾಗಿದ್ದು ಸಂಪೂರ್ಣ ಕಚ್ಛಾ ರಸ್ತೆಯಾಗಿದೆ. ಇದನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಬೇಕಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಈಗಾಗಲೇ ಸರಕಾರಕ್ಕೆ ಮನವಿ ಕೂಡ ಮಾಡಲಾಗಿದೆ ಎಂದು ಕೊಳ್ತಿಗೆ ಗ್ರಾಪಂ ಸದಸ್ಯ ಪವನ್ ಡಿ.ಜಿ ದೊಡ್ಡಮನೆ ತಿಳಿಸಿದ್ದಾರೆ.


ಘಟನಾ ಸ್ಥಳಕ್ಕೆ ಜಮಾಯಿಸಿದ ಸಾರ್ವಜನಿಕರು:
ಘಟನೆ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದರು. ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಕೊಳ್ತಿಗೆ ಗ್ರಾಪಂ ಸದಸ್ಯ ಪವನ್ ಡಿ.ಜಿ ದೊಡ್ಡಮನೆ, ಮಾಜಿ ಸದಸ್ಯರಾದ ಶಿವರಾಮ ಭಟ್ ಬೀರ್ಣಕಜೆ, ತೀರ್ಥಾನಂದ ದುಗ್ಗಳ, ಗ್ರಾಪಂ ಸದಸ್ಯ ಯಶೋಧಾ ಬಾಬು ರಾಜೇಂದ್ರ, ನಾಗವೇಣಿ, ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರ ಪಲ್ಲತ್ತಡ್ಕ, ಸದಸ್ಯರುಗಳಾದ ಮೀನಾಕ್ಷಿ ವಿ.ರೈ, ಮಮತಾ ರೈ, ಜಯಂತ ಪೂಜಾರಿ ಕೆಂಗುಡೇಲು, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಜನಾರ್ದನ ಗೌಡ ಮೇರಗುಡ್ಡೆ ಸಹಿತ ನೂರಾರು ಮಂದಿ ಆಗಮಿಸಿದ್ದರು.
ಸೆಲ್ಲಮ್ಮರವರ ಪುತ್ರ ಟಿ.ಯೋಗರಾಜ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಽಕಾರಿಗಳು, ಕೆಎ-ಡಿಸಿ ಅಽಕಾರಿಗಳು, ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಬೆಳ್ಳಾರೆ ಠಾಣಾ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಕುಟುಂಬಕ್ಕೆ ಸರಕಾರದಿಂದ 15 ಲಕ್ಷ ರೂಪಾಯಿ ಪರಿಹಾರ-ಶಾಸಕ ರೈ
ಘಟನೆ ನಡೆದ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಮಹಿಳೆಯ ಪುತ್ರ ಯೋಗರಾಜ್‌ರವರಿಗೆ ಸಾಂತ್ವನ ತಿಳಿಸಿದ ರೈಯವರು ಸ್ಥಳದಲ್ಲೇ ವೈಯಕ್ತಿಕ ನೆಲೆಯಲ್ಲಿ 10 ಸಾವಿರ ರೂಪಾಯಿಗಳನ್ನು ಮೃತ ಮಹಿಳೆಯ ಕುಟುಂಬಕ್ಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಕುಮಾರ್ ರೈಯವರು, ಕೆಎ-ಡಿಸಿಗೆ ಸೇರಿದ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಆನೆಯೊಂದು ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿರುವುದು ಬಹಳಷ್ಟು ದುಃಖ ತಂದಿದೆ. ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿಗಳ ಪರಿಹಾರವನ್ನು ಕೊಡುವ ಕೆಲಸ ಸರಕಾರದಿಂದ ಆಗಲಿದೆ. ಅಲ್ಲದೆ ಕೆಎ-ಡಿಸಿಯಿಂದ ಮಹಿಳೆಯ ಪುತ್ರನಿಗೆ ಸೂಕ್ತವಾದ ಉದ್ಯೋಗವನ್ನು ನೀಡುವಂತೆ ಅಽಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಅಲ್ಲದೆ ಕೆಎಫ್ ಡಿಸಿಯಿಂದ ಸಿಗುವ ಪರಿಹಾರವನ್ನು ಕೂಡ ದೊರೆಕಿಸಿ ಕೊಡುವ ಬಗ್ಗೆ ಬೋರ್ಡ್‌ನಲ್ಲಿ ಚರ್ಚೆ ಮಾಡಿ ಅದನ್ನೂ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಇನ್ನು ಮುಂದೆ ಇಂತಹ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆ, ಕೆಎಫ್ ಡಿಸಿ ಇಲಾಖಾ ಅಧಿಕಾರಿಗಳು ಮಾಡಲಿದ್ದಾರೆ. ರಬ್ಬರ್ ತೋಟದಲ್ಲಿರುವ ಪೊದೆಗಳನ್ನು ತೆರವು ಮಾಡುವ ಕೆಲಸ ಆಗಬೇಕು ಹಾಗೇ ರಬ್ಬರ್ ಹಾಲನ್ನು ತೋಟದಿಂದ ಸಾಗಿಸಲು ವಾಹನದ ವ್ಯವಸ್ಥೆಯನ್ನು ಮಾಡಿಸಲು ಕೆಎಫ್ ಡಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಪ್ರಾಣಿಗಳನ್ನು ತಡೆಯುವುದು ಕಷ್ಟ ಸಾಧ್ಯ ಏಕೆಂದರೆ ಅದಕ್ಕೆ ಬಾಯಿ ಬರುವುದಿಲ್ಲ ಮನುಷ್ಯನಷ್ಟು ಬುದ್ದಿ ಇಲ್ಲ. ಯಾವುದೇ ಪ್ರಾಣಿಗಳು ಅವುಗಳಿಗೆ ತೊಂದರೆ ಕೊಡದೆ ಅವುಗಳು ನಮ್ಮ ಮೇಲೆ ದಾಳಿ ಮಾಡುವುದಿಲ್ಲ. ಇಲ್ಲಿ ಆನೆ ಕೂಡ ಇದೇ ರೀತಿ ದಾಳಿ ಮಾಡಿದೆ. ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಜಾಗೃತರಾಗಿರಬೇಕಾಗಿದೆ. ಸರಕಾರ ಜನರ ಪರ ಸದಾ ಇದೆ. ಜನರು ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.

ತಿಂಗಳ ಹಿಂದೆಯೂ ಆನೆ ಇತ್ತು ಕೊನೆಗೂ ನನ್ನ ತಾಯಿಯ ಜೀವ ಬಲಿಯಾಯಿತು: ಯೋಗರಾಜ, ಮೃತ ಸೆಲ್ಲಮ್ಮರವರ ಪುತ್ರ
ನನ್ನ ತಾಯಿಯು ಕೆಲಸದಿಂದ ನಿವೃತ್ತಿ ಪಡೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿದೆ. ಬೇರೊಬ್ಬರು ಕೆಲಸಕ್ಕೆ ರಜೆ ಮಾಡಿದ್ದರಿಂದ ಅವರ ಬದಲಿಗೆ ನನ್ನ ತಾಯಿ ಕೆಲಸಕ್ಕೆ ಹೋಗಿದ್ದರು. ಒಂದು ತಿಂಗಳ ಹಿಂದೆಯೂ ಆನೆ ಈ ಭಾಗದಲ್ಲಿ ಓಡಾಡಿತ್ತು. ನಾನೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೆ. ಕೊನೆಗೂ ನನ್ನ ತಾಯಿಯೇ ಆನೆಯ ದಾಳಿಗೆ ಬಲಿಯಾಗಬೇಕಾಯಿತು. ಸರಕಾರದಿಂದ ಪರಿಹಾರ ಸಿಗಬಹುದು ಆದರೆ ನನ್ನ ತಾಯಿಯ ಜೀವ ನಮಗೆ ಸಿಗಬಹುದೆ? ಮುಂದಿನ ದಿನಗಳಲ್ಲಿ ಯಾರಿಗೂ ಇಂತಹ ಸಾವು ಬರಬಾರದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ಮೃತ ಸೆಲ್ಲಮ್ಮರವರ ಪುತ್ರ ಯೋಗರಾಜರವರು ಹೇಳಿದರು.


10 ದಿನಗಳ ಕಾಲ ರಬ್ಬರ್ ಹಾಲು ತೆಗೆಯುವಂತಿಲ್ಲ
ಆನೆ ದಾಳಿ ನಡೆದ ಹಿನ್ನೆಲೆಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಗಾರರ ಸುರಕ್ಷತೆಯ ಹಿನ್ನೆಲೆಯಲ್ಲಿ 10 ದಿನಗಳ ಕಾಲ ರಬ್ಬರ್ ಹಾಲು ತೆಗೆಯುವುದನ್ನು ನಿಲ್ಲಿಸುವಂತೆ ಕೆಎಫ್ ಡಿಸಿ ಡಿಎಂ ನಂದಗೋಪಾಲ್‌ರವರು ಸೂಚನೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಅವರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸದಾರರು ತಮ್ಮ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಂದಗೋಪಾಲ್‌ರವರು, ರಬ್ಬರ್ ಟ್ಯಾಪಿಂಗ್ ಕೆಲಸದಾರರ ಸುರಕ್ಷತೆ ಬಹಳ ಮುಖ್ಯವಾಗಿದ್ದು ಇಂದಿನಿಂದ 10 ದಿನಗಳ ಕಾಲ ರಬ್ಬರ್ ಟ್ಯಾಪಿಂಗ್ ನಡೆಸದಂತೆ ತಿಳಿಸಿದರು. ಕಾರ್ಯಪಡೆ ತಂಡವನ್ನು ರಚನೆ ಮಾಡಿಕೊಂಡು ಪ್ರತಿದಿನ ಬೆಳಗ್ಗಿನ ಜಾವ ರಬ್ಬರ್ ತೋಟದೊಳಗೆ ಸಂಚರಿಸುವ ಕೆಲಸವನ್ನು ಮಾಡಲಿದ್ದೇವೆ. ರಬ್ಬರ್ ಟ್ಯಾಪಿಂಗ್ ಕೆಲಸದಾರರು ಯಾವುದೇ ರೀತಿಯಲ್ಲೂ ಭಯಬೀಳುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು. ರಬ್ಬರ್ ತೋಟದೊಳಗೆ ಇರುವ ಪೊದೆ,ಬಲ್ಲೆಗಳನ್ನು ಶೀಘ್ರವೇ ತೆರವು ಮಾಡಿಸುವುದಾಗಿಯೂ ಅವರು ತಿಳಿಸಿದರು.

ಆನೆಯನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ, ಆನೆಗುಂಡಿಯಲ್ಲಿ ಸೋಲಾರ್ ಬೇಲಿ ರಚನೆ- ಡಿಸಿಎಫ್ ಆಂತೊನಿ ಮರಿಯಪ್ಪ
ಆನೆಯನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸುವುದು ಕಷ್ಟದ ಕೆಲಸವಾಗಿದೆ. ಈ ಬಗ್ಗೆ ಸರಕಾರದ ಅನುಮತಿ ಕೂಡ ಬೇಕಿದೆ. ಸದ್ಯಕ್ಕೆ ಆನೆಯನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಮಾಡುತ್ತೇವೆ. ಇದಲ್ಲದೆ ಈಗಾಗಲೇ ಆನೆಗುಂಡಿಯಲ್ಲಿ ಸುಮಾರು 4 ಕಿ.ಮೀನಷ್ಟು ಸೋಲಾರ್ ಬೇಲಿ ರಚನೆ ಆಗಿದ್ದು ಉಳಿದ ಭಾಗಕ್ಕೂ ಸೋಲಾರ್ ಬೇಲಿ ರಚನೆ ಮಾಡುವ ಮೂಲಕ ಆನೆಗಳು ಈ ಭಾಗಕ್ಕೆ ಪ್ರವೇಶ ಪಡೆಯದಂತೆ ನೋಡಿಕೊಳ್ಳುವ ಕೆಲಸವನ್ನು ಅರಣ್ಯ ಇಲಾಖೆ ಮಾಡಲಿದೆ. ಜನರು ಯಾವುದೇ ರೀತಿಯ ಭಯಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಸದಾ ಜನರೊಂದಿಗೆ ಇರಲಿದ್ದಾರೆ ಎಂದು ಡಿಸಿಎಫ್ ಆಂತೋನಿ ಮರಿಯಪ್ಪರವರು ಮಾಹಿತಿ ನೀಡಿದರು.‌


ಇದೊಂದು ನಿರೀಕ್ಷಿತ ಆನೆ ದಾಳಿ ಆಗಿದೆ. ಸಂಬಂಧಪಟ್ಟ ಇಲಾಖೆ ಗಮನ ಹರಿಸದೇ ಇರುವುದು ದುರಂತ: ಸಂಜೀವ ಮಠಂದೂರು
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರುರವರು ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರದಿಂದ ಈ ಕೂಡಲೇ ಆನೆ ದಾಳಿಗೆ ತುತ್ತಾದ ಮಹಿಳೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಕೊಡುವ ಕೆಲಸ ಆಗಬೇಕು. ಇದೊಂದು ನಿರೀಕ್ಷಿತ ಆನೆ ದಾಳಿ ಆಗಿದೆ. ಏಕೆಂದರೆ ಈ ಭಾಗದಲ್ಲಿ ಆನೆ ಇದೆ, ಉಪದ್ರ ಕೊಡುತ್ತಾ ಇದೆ ಎಂದು ಈ ಭಾಗದ ಜನರು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಆನೆಯನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹ ಕೂಡ ಮಾಡಿದ್ದರು. ಆದರೆ ಇದುವರೆಗೆ ಯಾವುದೇ ಕೆಲಸ ಆಗಿಲ್ಲ ಆದ್ದರಿಂದ ಇಂದು ಒಂದು ಜೀವ ಬಲಿಯಾಗಬೇಕಾಗಿದೆ. ಇಲಾಖೆಯ ಅಽಕಾರಿಗಳು ಗಮನ ಕೊಡದೇ ಇದ್ದುದರಿಂದ ಈ ದುರ್ಘಟನೆ ನಡೆದಿದೆ. ಇದಕ್ಕೆ ಸರಕಾರವೇ ನೇರ ಹೊಣೆ. ಮನುಷ್ಯನ ಜೀವಕ್ಕೆ ಬೆಲೆ ಇದೆ ಎಂಬುದನ್ನು ಸರಕಾರ, ಅರಣ್ಯ, ಪೊಲೀಸ್ ಇಲಾಖೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಮೃತರ ಕುಟುಂಬಕ್ಕೆ ಕೂಡಲೇ ಸರಕಾರ ಹಾಗೂ ಕೆಎ-ಡಿಸಿಯಿಂದ ದೊರೆಯುವ ಪರಿಹಾರ ಸಿಗಬೇಕು, ಮಹಿಳೆಯ ಪುತ್ರನಿಗೆ ಕೆಎ-ಡಿಸಿಯಲ್ಲಿ ಕೂಡಲೇ ಉದ್ಯೋಗವನ್ನು ಕೊಡಿಸುವ ಕೆಲಸ ಆಗಬೇಕು ಎಂದು ಸಂಜೀವ ಮಠಂದೂರು ಆಗ್ರಹಿಸಿದರು.


ಕೆಲಸಗಾರರಿಗೆ ಸರಿಯಾದ ಭದ್ರತೆ ಆಗಬೇಕಾಗಿದೆ: ತಿರುಮೂರ್ತಿ, ಅಧ್ಯಕ್ಷರು ವರ್ಕ್‌ರ‍್ಸ್ ಫೆಡರೇಷನ್
ಕೆಎಫ್ ಡಿಸಿಯ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರರಿಗೆ ಸರಿಯಾದ ಭದ್ರತೆ ಇಲ್ಲ. ಆರೋಗ್ಯ ವಿಮೆ ಕೂಡ ಆಗಬೇಕಾಗಿದೆ. ಇಂತಹ ರಬ್ಬರ್ ತೋಟದಿಂದ ಹಾಲನ್ನು ಹೊತ್ತುಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಹಾಲನ್ನು ಕೊಂಡ್ಹೋಗಲು ವಾಹನದ ವ್ಯವಸ್ಥೆ ಕೂಡ ಆಗಬೇಕಿದೆ. ಇದನ್ನು ಕೆಎಫ್ ಡಿಸಿಯಿಂದ ಮಾಡಿಕೊಡಬೇಕಾಗಿದೆ ಎಂದು ವರ್ಕ್ಸ್‌ರ‍್ಸ್ ಫೆಡರೇಷನ್‌ನ ಅಧ್ಯಕ್ಷ ತಿರುಮೂರ್ತಿ ಆಗ್ರಹಿಸಿದರು.

LEAVE A REPLY

Please enter your comment!
Please enter your name here