ನೆಲ್ಯಾಡಿ: ಮನುಷ್ಯ ಮರಣ ಹೊಂದಿದಾಗ ಕಾಯ ಮಾತ್ರ ಅಳಿಯುತ್ತದೆ. ಆದರೆ ಅವನು ಮಾಡಿದ ಕಾಯಕ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸದಾ ಉಳಿಯುತ್ತದೆ ಎಂದು ಪುತ್ತೂರು ಎವಿಜಿ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಹಾಗೂ ಯಕ್ಷಗಾನ ಕಲಾವಿದರೂ ಆದ ಗುಡ್ಡಪ್ಪ ಗೌಡ ಬಲ್ಯ ಹೇಳಿದರು.
ಇತ್ತೀಚೆಗೆ ನಿಧನರಾದ ಹೊಸಮಜಲು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಆಲಂಕಾರು ಸೊರ್ವಲ್ತಡಿ ಮನೆತನದ ಆನಂದ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು. ಆನಂದ ಗೌಡರು ಶಿಸ್ತುಬದ್ಧ ಶಿಕ್ಷಕ, ಪ್ರಾಣಕ್ಕೆ ಪ್ರಾಣ ಕೊಡುವ ಪರೋಪಕಾರಿ ಹಾಗೂ ಶ್ರಮ ಜೀವಿಯಾಗಿದ್ದರು. ದೈಹಿಕ ಶಿಕ್ಷಣದೊಂದಿಗೆ ಸೇವಾದಳದ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು ಅನೇಕ ಶಿಬಿರಗಳನ್ನು ಸಂಘಟಿಸಿರುತ್ತಾರೆ. ವೃತ್ತಿಯಿಂದ ನಿವೃತ್ತಿಯಾಗುವ ಮುನ್ನವೇ ಬದುಕಿನಿಂದಲೇ ನಿವೃತ್ತರಾದರು. ಸಾವು ದೇಹಕ್ಕೆ ಮಾತ್ರ ಆತ್ಮಕ್ಕೆ ಸಾವಿಲ್ಲ. ಅವರ ಆತ್ಮಕ್ಕೆ ಮುಕ್ತಿದಾತನಾದ ಶ್ರೀಮನ್ನಾರಾಯಣ ಸಾಯುಜ್ಯ ಪದವಿಯನ್ನು ನೀಡಲಿ ಹಾಗೂ ಅವರ ಅಗಲುವಿಕೆಯ ದು:ಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು.
ಭಾರತ್ ಸೇವಾದಳದ ಜಿಲ್ಲಾ ಸಂಘಟಕರಾದ ಮಂಜೇಗೌಡ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಹೊಸಮಜಲು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಬಾಣಜಾಲು, ನಿವೃತ್ತ ಶಿಕ್ಷಕರಾದ ಜಯರಾಮ ಕುಂಬ್ರ, ಸುರೇಶ್, ಕುಶಾಲಪ್ಪ ಗೌಡ ಕೆಮ್ಮಾರ, ಶಿಕ್ಷಣ ಇಲಾಖೆಯ ತನುಜಾ, ಸೀತಮ್ಮ, ಶಿಕ್ಷಕರಾದ ಕುಶಾಲಪ್ಪ ಪಡುಬೆಟ್ಟು, ಸಾಂತಪ್ಪ, ಜಯಪ್ರಕಾಶ್ ಹಾಗೂ ಇತರೇ ಶಿಕ್ಷಕರು, ಪ್ರವೀಣ್ ಕುಂಟ್ಯಾನ ಮತ್ತಿತರರು ಉಪಸ್ಥಿತರಿದ್ದರು.
ಆನಂದ ಗೌಡರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೃತರ ಪತ್ನಿ ಶಿಕ್ಷಕಿ ವೀಣಾ, ಮಕ್ಕಳಾದ ನಮೃತಾ, ಹಿತೇಶ್, ಅಳಿಯ ಹಾಗೂ ಕುಟುಂಬವರ್ಗದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಶಿಕ್ಷಕ ಜನಾರ್ದನ ಟಿ.ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು.