ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ನೀಡಿದ ಕೊಡುಗೆಯಿಂದ ನಿರ್ಮಿಸಲಾದ ನೀರಿನ ಬೇಸಿನ್ ವ್ಯವಸ್ಥೆಯ ಉದ್ಘಾಟನೆ ನಡೆಯಿತು.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟರಮಣ ಬೋರ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀರೆಂದರೆ ಜೀವ ಜಲ. ವಿದ್ಯಾರ್ಥಿಗಳಿಗಾಗಿ ಮಾಡಿದ ನೀರಿನ ಸೌಲಭ್ಯವನ್ನು ಸದುಪಯೋಗ ಮಾಡಬೇಕು ನೀರನ್ನು ಹಿತಮಿತವಾಗಿ ಬಳಸಬೇಕು ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಕರ್ಕೇರ ಶುಭ ಹಾರೈಸಿದರು. ಪ್ರಾಂಶುಪಾಲರಾದ ಡಾ.ಅಬ್ದುಲ್ ರಜಾಕ್ ಕೆ. ಮಾತನಾಡಿ ನೀರಿನ ವ್ಯವಸ್ಥೆಗೆ ಸಹಕರಿಸಿದ 2024-25ನೇ ಸಾಲಿನ ಹಿರಿಯ ವಿದ್ಯಾರ್ಥಿಗಳನ್ನು ಹಾಗೂ ನಿರ್ಮಾಣ ಕಾರ್ಯದ ಸಂಪೂರ್ಣ ಜವಾಬ್ದಾರಿ ಹೊತ್ತ ಉಪನ್ಯಾಸಕ ಕಮಲಾಕ್ಷ ಆನಡ್ಕರವರ ಕಾರ್ಯವನ್ನು ಇವರು ಶ್ಲಾಘಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಹರೀಶ್ ಕುಮಾರ್ ನಲ್ಲಿ ನೀರಿನ ಸೌಲಭ್ಯಕ್ಕಾಗಿ ಎಂ ಸ್ಯಾಂಡ್ ಮತ್ತು ಸಿಮೆಂಟ್ ವ್ಯವಸ್ಥೆ ಮಾಡಿದರು. ಉಪನ್ಯಾಸಕಿ ಗಾಯತ್ರಿ ಯಂ. ಸ್ವಾಗತಿಸಿ ರಶ್ಮಿ ಬಿ. ವಂದಿಸಿದರು. ರಜನಿ ಬಿ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು, ಹಿರಿಯ ವಿದ್ಯಾರ್ಥಿಗಳು, ಪ್ರಥಮ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.