ಪುತ್ತೂರು: ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮತ್ತು ನ್ಯಾಯಾಲಯಕ್ಕೆ ದಾಖಲಾಗದೇ ಇರುವ ಪ್ರಕರಣಗಳನ್ನು (ವ್ಯಾಜ್ಯ ಪೂರ್ವ ಪ್ರಕರಣಗಳು)ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಜು.12ರಂದು ಪುತ್ತೂರು ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 1512 ಪ್ರಕರಣಗಳ ಪೈಕಿ 986 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದ್ದು, ಫಲಾನುಭವಿಗಳಿಗೆ ರೂ.2,12,93,947 ಪರಿಹಾರ ಮೊತ್ತ ವಿತರಿಸಲು ಆದೇಶಿಸಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ ನೋಂದಾವಣೆ, ಚೆಕ್ ಬೌನ್ಸ್, ವಿಮಾ ಹಣದ ತಗಾದೆ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.
ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ ಅವರ ನ್ಯಾಯಾಲಯದಲ್ಲಿ 51 ಪ್ರಕರಣಗಳಲ್ಲಿ 7ಇತ್ಯರ್ಥಗೊಂಡಿದ್ದು, ರೂ.17,60,000 ಪರಿಹಾರ ವಿತರಣೆಗೆ ಆದೇಶ ಆಗಿದೆ. ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರ ನ್ಯಾಯಾಲಯದಲ್ಲಿ 300 ಪ್ರಕರಣಗಳಲ್ಲಿ 260 ಇತ್ಯರ್ಥಗೊಂಡಿದ್ದು ರೂ.94,72,000 ಪರಿಹಾರ ವಿತರಣೆಗೆ ಆದೇಶ ಆಗಿದೆ. ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಜೆಎಮ್ಎ-ಸಿಯೂ ಆಗಿರುವ ದೇವರಾಜ್ ವೈ.ಹೆಚ್ ಅವರ ನ್ಯಾಯಾಲಯದಲ್ಲಿ 352 ಪ್ರಕರಣಗಳಲ್ಲಿ 294ಪ್ರಕರಣ ಇತ್ಯರ್ಥಗೊಂಡಿದ್ದು, ರೂ.13500 ಪರಿಹಾರ ವಿತರಣೆಗೆ ಆದೇಶ ಆಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎ-ಸಿ ನ್ಯಾಯಾಧೀಶೆ ಶಿವಣ್ಣ ಹೆಚ್.ಆರ್ ಅವರ ನ್ಯಾಯಾಲಯದಲ್ಲಿ 393 ಪ್ರಕರಣಗಳಲ್ಲಿ 42 ಪ್ರಕರಣಗಳು ಇತ್ಯರ್ಥಗೊಂಡಿದ್ದು ರೂ.44,55,016 ಪರಿಹಾರ ವಿತರಣೆಗೆ ಆದೇಶ ಆಗಿದೆ.
ಹೆಚ್ಚುವರಿ ಸಿವಿಲ್ ನ್ಯಾಯಾಽಶ ಮತ್ತು ಜೆಎಮ್ಎ-ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ 146 ಪ್ರಕರಣಗಳಲ್ಲಿ 133 ಇತ್ಯರ್ಥಗೊಂಡಿದ್ದು, ರೂ.55,68,831 ಪರಿಹಾರ ವಿತರಣೆಗೆ ಆದೇಶ ಆಗಿದೆ. ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಽಶ ಮತ್ತು ಜೆಎಮ್ಎ-ಸಿ ನ್ಯಾಯಾಲಯದ ಚಾರ್ಜ್ನಲ್ಲಿರುವ ನ್ಯಾಯಾಽಶ ಯೋಗೇಂದ್ರ ಶೆಟ್ಟಿ ಅವರು ಅದಾಲತ್ ನಡೆಸಿದರು. ಅಲ್ಲಿ 270 ಪ್ರಕರಣಗಳಲ್ಲಿ 250 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.24,600 ಪರಿಹಾರ ವಿತರಣೆಗೆ ಆದೇಶ ಆಗಿದೆ.ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಮಹಮ್ಮದ್ ರಿಯಾಜ್, ಮೋಹಿನಿ, ನಝೀರ್, ಮಿಶ್ರಿಯಾ, ವೈಶಾಕ್ ಅವರು ಸಹಕರಿಸಿದರು.ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಜಿ.ಜಗನ್ನಾಥ ರೈ ಅವರು ನೇಮಕ ಮಾಡಿದ್ದರು.
ಚೆಕ್ಬೌನ್ಸ್ ಕೇಸುಗಳೇ ಅಧಿಕ
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಾದಿ, ಪ್ರತಿವಾದಿಯ ವಕೀಲರುಗಳ ಜೊತೆಗೆ ನ್ಯಾಯಾಲಯವೇ ಮಧ್ಯಸ್ಥಿಕೆಗಾಗಿ ವಕೀಲರನ್ನು ನೇಮಿಸಿ, ಅವರ ಮೂಲಕ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ವ್ಯಾಜ್ಯವನ್ನು ಮುಗಿಸಲು ಅವಕಾಶ ನೀಡಲಾಗಿದೆ. ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೆ ಎದುರಿಸುತ್ತಿರುವ ಚೆಕ್ಬೌನ್ಸ್ ಕೇಸುಗಳೇ ಈ ಬಾರಿಯ ಲೋಕ ಅದಾಲತ್ನಲ್ಲಿ ಅಧಿಕ ಸಂಖ್ಯೆಯಲ್ಲಿತ್ತು. ಪುತ್ತೂರು ಆರ್ಟಿಒ ಕಚೇರಿಗೆ ಸಂಬಂಧಿಸಿದ ಸುಮಾರು ೧೫೦ಕ್ಕೂ ಮಿಕ್ಕಿದ ಪ್ರಕರಣಗಳು ಲೋಕ ಅದಾಲತ್ನಲ್ಲಿ ದಾಖಲಾಗಿತ್ತು.ತೆರಿಗೆ ವಂಚನೆಯ ಪ್ರಕರಣಗಳ ಕುರಿತು ಇಲಾಖೆಯು ದೂರು ಸಲ್ಲಿಸಿದ್ದು, ಸುಮಾರು ೧ ಕೋಟಿ ರೂ.ಗಳಿಗೂ ಮಿಕ್ಕಿದ ತೆರಿಗೆಯನ್ನು ವಂಚಿಸಿರುವ ಪ್ರಕರಣಗಳಿಗೆ ಸಂಬಂಧಿಸಿ ಲೋಕ ಅದಾಲತ್ನಲ್ಲಿ ವಿಚಾರಣೆ ನಡೆದಿದೆ.