ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದ ಪಕ್ಕದಲ್ಲಿ ಹಾದು ಹೋಗಿರುವ ಏಣಿತ್ತಡ್ಕ-ಗೋಳಿತ್ತಡಿ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರಿಗೆ ಸಂಚಾರಿ ನಿಯಮ ಪಾಲನೆಯ ಪಾಠ ಬೋದಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಚಾರಿ ನಿಯಮ ಪಾಲನೆ ಜಾಥಾ ಅಂಗವಾಗಿ ಈ ಕಾರ್ಯಕ್ರಮ ಅಯೋಜನೆ ಮಾಡಲಾಯಿತು.

ಶಾಲಾ ಆವರಣದ ಮುಖ್ಯದ್ವಾರದ ಬಳಿ ರಸ್ತೆಗಿಳಿದ ವಿದ್ಯಾರ್ಥಿಗಳು ಎಲ್ಲಾ ವಾಹನಗಳನ್ನು ತಡೆದು ಸಂಚಾರಿ ನಿಯಮದ ಜಾಗೃತಿ ಮೂಡಿಸಿದರು. ಕಾರು, ರಿಕ್ಷಾ, ಲಾರಿ, ಜೀಪು, ದ್ವಿಚಕ್ರ ತಡೆದು ನಿಲ್ಲಿಸಿ ಸೀಟ್ ಬೆಲ್ಟ್, ಯುನಿಫಾರಂ, ಹೆಲ್ಮೆಟ್ ಮುಂತಾದುವುಗಳ ನಿಯಮ ಪಾಲನೆ ಮಾಡಲು ತಿಳಿಸಿದರು. ಚಾಲನೆ ಸಂದರ್ಭ ಫೋನ್ನಲ್ಲಿ ಮಾತನಾಡದಂತೆ ವಿನಂತಿಸಿದರು.
ಸಂಚಾರಿ ನಿಯಮ ಪಾಲನೆ ಮಾಡದೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ನಿಯಮ ಪಾಲಿಸುವಂತೆ ನೀತಿ ಪಾಠ ಬೋಧಿಸಿದರು.
ನಿಯಮ ಪಾಲನೆ ಮಾಡಿದ ಸವಾರರಿಗೆ ವಿದ್ಯಾರ್ಥಿಗಳು ಹೂಗುಚ್ಚ ನೀಡಿ ಚಪ್ಪಾಲೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಸ್ಥಳದಿಂದ ನಿಯಮ ಪಾಲನೆ ಮಾಡಿಕೊಂಡವರಿಗೂ ಹೂಗುಚ್ಚ ನೀಡಲಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಜಾಗೃತಿ ಕಾರ್ಯಕ್ರಮ ನಡೆಯಿತು.
ಮುಖ್ಯ ಶಿಕ್ಷಕಿ ವಾರಿಜಾ ಬಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅಯೋಜನೆಗೊಂಡಿತ್ತು. ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಪಾನ್ಯಾಲು, ಎಸ್ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ, ಉಪಾಧ್ಯಕ್ಷೆ ರಮಿತಾ, ಸದಸ್ಯರು, ಶಿಕ್ಷಕರಾದ ಶೇಖರ ಬಲ್ಯ, ವೆಂಕಟೇಶ್, ರವಿಚಂದ್ರ, ಶಿಕ್ಷಕಿಯರಾದ ಅಂಜನಾ, ತಾರಾದೇವಿ, ತೇಜಶ್ವಿನಿ, ದೈಹಿಕ ಶಿಕ್ಷಣ ಶಿಕ್ಷಕಿ ವನಜಾ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.