ಪುತ್ತೂರು:ಬಲ್ನಾಡು ಗ್ರಾಮದ ಅಜಕ್ಕಲ ಎಂಬಲ್ಲಿ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಆದೇಶವಿದ್ದರೂ ಖಾಸಗಿ ಜಮೀನಿನಲ್ಲಿ ಬಲತ್ಕಾರದಿಂದ ರಸ್ತೆಯನ್ನು ನಿರ್ಮಿಸಿರುವುದಾಗಿ ಆರೋಪಿಸಿ ಕೃಷ್ಣಭಟ್ ಎಂಬವರು ನ್ಯಾಯಾಲಯಕ್ಕೆ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ತಾನು ಬಲ್ನಾಡಿನಲ್ಲಿ ಕೃಷಿ ಜಮೀನು ಹೊಂದಿದ್ದು, ಜಮೀನಿನ ಸುತ್ತಲೂ ತಂತಿ ಬೇಲಿಯನ್ನು ರಚಿಸಿರುವುದಾಗಿದೆ.ಜಮೀನಿನ ದಕ್ಷಿಣ ದಿಕ್ಕಿಗೆ 3 ಅಡಿ ಅಗಲದ ಕಾಲು ದಾರಿಯನ್ನು ಬಿಟ್ಟಿದ್ದು, ಆರೋಪಿತರು ಕಾಲುದಾರಿಯನ್ನು ಬಲತ್ಕಾರದಿಂದ ಹಾಗೂ ಅಕ್ರಮವಾಗಿ ವಿಸ್ತರಿಸಿ ರಸ್ತೆಯನ್ನು ರಚಿಸುವ ಹುನ್ನಾರದಲ್ಲಿದ್ದಾರೆಂಬ ಸಂಗತಿಯು ಗಮನಕ್ಕೆ ಬಂದು ತಕ್ಷಣ 1 ಮತ್ತು 2ನೇ ಆರೋಪಿತರ ವಿರುದ್ದ ಪುತ್ತೂರಿನ ಪ್ರಧಾನ ವ್ಯವಹಾರಿಕ ನ್ಯಾಯಾಲಯದಲ್ಲಿ ದಾವೆಯನ್ನು ದಾಖಲಿಸಿದ್ದು, ನ್ಯಾಯಾಲಯವು ಪ್ರತಿಬಂಧಕಾಜ್ಞೆ ನೀಡಿತ್ತು.ಹೀಗಿರುವಲ್ಲಿ ಜು.20ಕ್ಕೆ ತಮ್ಮ ಹಕ್ಕಿನ ಜಮೀನಿಗೆ ಐವರು ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ಜಮೀನಿನಲ್ಲಿ ರಕ್ಷಣೆಗೋಸ್ಕರ ಹಾಕಿರುವ ತಂತಿ ಬೇಲಿಯನ್ನು ಕಿತ್ತು ಬಿಸಾಡಿ, ಮನೆಯ ಮುಂಭಾಗದಲ್ಲಿ ಹಾಕಿರುವ ಗೇಟ್, ಕಾಂಕ್ರೀಟ್ ಕಂಬಗಳನ್ನು ನಾಶ ಮಾಡಿ, ಕೃಷಿ ಭೂಮಿಗೆ ಅಳವಡಿಸಿದ್ದ ಪೈಪ್ ಲೈನ್,ಪಂಪ್ ಶೆಡ್, ಕಲ್ಲಿನ ಕಟ್ಟಪುಣಿ ಇತ್ಯಾದಿಗಳನ್ನು ಹಾನಿ ಮಾಡಿ, ಹಿಟಾಚಿ ಮೂಲಕ ಅಕ್ರಮವಾಗಿ ಹಕ್ಕಿನ ಖಾಸಗಿ ಜಮೀನಿನಲ್ಲಿ ಬಲತ್ಕಾರದಿಂದ ರಸ್ತೆಯನ್ನು ನಿರ್ಮಿಸಿದ್ದು, ಇದನ್ನು ಪ್ರಶ್ನಿಸಿ ನ್ಯಾಯಾಲಯದ ಆದೇಶದ ಮಾಹಿತಿ ನೀಡಿದಾಗ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಆರೋಪಿಸಿರುವ ಕೃಷ್ಣ ಭಟ್, ಆರೋಪಿಗಳಾದ ವೆಂಕಪ್ಪ ನಾಯ್ಕ, ಕೊಗ್ಗು ನಾಯ್ಕ, ವಿಶ್ವನಾಥ ರೈ, ಚಂದ್ರಶೇಖರ, ಗಿರಿಧರ ನಾಯ್ಕ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.ನ್ಯಾಯಾಲಯದ ಆದೇಶದಂತೆ 189(2),190,324(4),329(4),191(2) 2023ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.