ಹರಿದು ಬಂದ ಜನಸಾಗರ- ಮೂರು ಸಾವಿರ ಭಕ್ತರಿಂದ ಪುಣ್ಯ ತೀರ್ಥ ಸ್ನಾನ
ನಿಡ್ಪಳ್ಳಿ; ಇತಿಹಾಸ ಪ್ರಸಿದ್ದ ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಕ್ಷೇತ್ರದಲ್ಲಿ ಆ.23 ರಂದು ತೀರ್ಥ ಅಮಾವಾಸ್ಯೆ ಪ್ರಯುಕ್ತ ಮುಂಜಾನೆ 4 ಗಂಟೆಯಿಂದ ಪುಣ್ಯ ತೀರ್ಥ ಸ್ನಾನ ನಡೆಯಿತು.
ಪುತ್ತೂರು ತಾಲೂಕಿನ ಇರ್ದೆ ಸೀರೆ ಹೊಳೆ ಬದಿಯಲ್ಲಿ ಹಚ್ಚ ಹಸುರಿನಿಂದ ರಾರಾಜಿಸುತ್ತಿರುವ ಇದೊಂದು ಪ್ರಕೃತಿ ಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ.ಈ ಬಿಸಿ ನೀರು ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದರಿಂದ ಕೆಲವು ಚರ್ಮ ರೋಗಗಳಿಗೆ ರಾಮಬಾಣವಾಗಿದೆ. ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಾಲಯಕ್ಕೆ ನಿಕಟ ಸಂಬಂಧ ಇರುವುದರಿಂದ ಹಿಂದುಗಳ ಪಾಲಿಗೆ ಇದು ಅತ್ಯಂತ ಪುಣ್ಯ ಶ್ರದ್ದಾ ಕೇಂದ್ರವಾಗಿದ್ದು, ಇಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾದರು.
ಮುಂಜಾನೆಯಿಂದಲೇ ಹರಿದು ಬಂದ ಜನಸಾಗರ; ಅಮಾವಾಸ್ಯೆ ದಿನ ಮುಂಜಾನೆ 4 ಗಂಟೆಗೆ ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಸಹಾಯಕ ಅರ್ಚಕರು ತೀರ್ಥ ಗುಂಡಿಯಲ್ಲಿ ಪೂಜೆ ಮಾಡಿ ನಂತರ ಅಶ್ವಥ ಕಟ್ಟೆಯಲ್ಲಿ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಂದ ತೀರ್ಥ ಸ್ನಾನ ಆರಂಭವಾಯಿತು.ತೀರ್ಥ ಸ್ನಾನಕ್ಕೆ ಮುಂಜಾನೆಯಿಂದಲೇ ಜನಸಾಗರ ಹರಿದು ಬಂತು.ಸುಮಾರು 3000 ಕ್ಕಿಂತಲೂ ಮಿಕ್ಕಿ ಭಕ್ತಾದಿಗಳು ಪುಣ್ಯ ತೀರ್ಥ ಸ್ನಾನ ಮಾಡಿದರು. ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಕಾರ್ಯಕ್ರಮಕ್ಕೆ ಉತ್ತಮ ಸಹಕಾರ ನೀಡಿದ್ದರು.ಕೆಲವು ಸಮಯಗಳಿಂದ ತೀರ್ಥ ಸ್ನಾನದ ಮಹತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಸಾರವಾಗಿದ್ದು ಭಕ್ತಾದಿಗಳ ಸಂಖ್ಯೆ ಹೆಚ್ಚಾಗಲು ಕಾರಣವೂ ಆಗಿರಬಹುದು.
ಉಪಾಹಾರದ ವ್ಯವಸ್ಥೆ; ತೀರ್ಥ ಸ್ನಾನಕ್ಕೆ ಬಂದ ಸುಮಾರು ಮೂರು ಸಾವಿರ ಭಕ್ತಾದಿಗಳಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸಮರ್ಪಣಾ ಸೇವಾ ಟ್ರಸ್ಟ್ ಇರ್ದೆ, ಅನಂತ ಭಟ್ ದರ್ಬೆ, ಗಂಗಾಧರ ಆಳ್ವ ಬಾಲ್ಯೊಟ್ಟು, ಪ್ರಮೋದ್ ಭಟ್ ಗುಮ್ಮಟೆಗದ್ದೆ, ಪ್ರಸಾದ್ ಭಟ್ ಘಾಟೆ, ವಿಷ್ಣು ಮಹಿಳಾ ಮಂಡಳಿ ಇರ್ದೆ ಇವರು ಉಪಾಹಾರದ ವ್ಯವಸ್ಥೆ ಒದಗಿಸಿದ್ದರು.
ಉತ್ತಮ ಸೇವೆ ನೀಡಿದ ಸ್ವಯಂ ಸೇವಕರು; ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ, ಶಿವಾಜಿ ಯುವ ಸೇನೆ ಬೆಂದ್ರ್ ತೀರ್ಥ ಇವರು ಸ್ವಚ್ಚತೆ ಮತ್ತು ಇನ್ನೀತರ ಕೆಲಸ ಕಾರ್ಯಗಳಲ್ಲಿ ಸ್ವಯಂ ಸೇವಕರಾಗಿ ಉತ್ತಮ ಸೇವೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.