ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಕ್ಕಿಲಾಡಿ ಗ್ರಾಮದ ದರ್ಬೆ ನಿಗರ್ ಗುಂಡಿ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಆ.22ರಂದು 2 ಕಾಡಾನೆ ಪ್ರತ್ಯಕ್ಷವಾಗಿದ್ದು, ಆ.23ರಂದು ಬೆಳಗಾಗುವುದರ ಒಳಗಾಗಿ ಅವುಗಳು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸುರಿಯ ಕಡೆಗೆ ಹೆಜ್ಜೆ ಹಾಕಿದ್ದು, ಶನಿವಾರ ಸಂಜೆಯ ಹೊತ್ತಿನಲ್ಲಿ ಸುರಿಯ ಕಾಡಿನೊಳಗೆ ಪ್ರವೇಶ ಮಾಡಿವೆ.
ಶುಕ್ರವಾರ ರಾತ್ರಿ ಕೊಳಕ್ಕೆಯ ಸುಭಾಶ್ ಅವರ ತೋಟಕ್ಕೆ ಲಗ್ಗೆಯಿಟ್ಟಿದ್ದ ಆನೆಗಳು ಅಲ್ಲಿ ಕೃಷಿ ಹಾನಿಗೊಳಿಸಿವೆ. ಬಳಿಕ ನೆಕ್ಕಿಲಾಡಿಯ ಆದರ್ಶನಗರ ಬಳಿಯ ಪ್ರಕಾಶ್ ಎಂಬವವರು ಬೆಳಗ್ಗೆ ತೋಟದೊಳಗೆ ಹೋದಾಗ ಅಲ್ಲಿ ಬಾಳೆಗಿಡಗಳು ತುಂಡಾಗಿ ಬಿದ್ದಿದ್ದವು. ಅವರು ಸಿಸಿ ಕ್ಯಾಮರಾ ನೋಡಿದಾಗ ಆನೆ ಹಾದು ಹೋಗಿರುವ ದೃಶ್ಯ ದಾಖಲಾಗಿರುವುದಾಗಿ ಪ್ರಕಾಶ್ ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಬೊಳ್ಳಾರು ದಿವಂಗತ ಬಾಬು ಶೆಟ್ಟಿ ಎಂಬವರ ತೋಟದಲ್ಲಿ ಬಾಳೆಗಿಡಗಳನ್ನು ತಿನ್ನುತ್ತಾ ಇದ್ದುದಾಗಿ ಮಾಹಿತಿ ಬಂದಿತ್ತು. ಸಂಜೆಯ ಹೊತ್ತಿನಲ್ಲಿ ಅದು ಬಿಳಿಯೂರು ಕಡೆ ಹೋಗಿದ್ದು, ಬಿಳಿಯೂರು ಅಣೆಕಟ್ಟು ಪ್ರದೇಶದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದೆ.
ನರಿಮೊಗರು ಪರಿಸರದಲ್ಲಿ ಇದ್ದ ಗಂಡು ಮತ್ತು ಹೆಣ್ಣು ಆನೆಗಳೆರಡು ಕಠಾರ ಮೂಲಕ ನೆಕ್ಕಿಲಾಡಿಗೆ ಬಂದಿರುವುದು. ಶುಕ್ರವಾರ ಸಂಜೆಯಿಂದ ತಡ ರಾತ್ರಿ ತನಕ ಕುಮಾರಧಾರಾ ನದಿಯಲ್ಲಿ ಇದ್ದುದು ನೆಕ್ಕಿಲಾಡಿಯ ಕೊಳಕೆ ರಸ್ತೆಯಾಗಿ ಬಂದು ಆದರ್ಶನಗರದಲ್ಲಿ ಉಪ್ಪಿನಂಗಡಿ-ಪುತ್ತೂರು ರಸ್ತೆಯನ್ನು ದಾಟಿ ತೋಟಗಳ ಮೂಲಕ ಬೊಳ್ಳಾರು ತನಕ ಸಾಗಿ ಅಲ್ಲಿ ಮಾರುತಿ ಶೋ ರೂಂ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಬಿಳಿಯೂರಿನಲ್ಲಿ ನೇತ್ರಾವತಿ ನದಿಯನ್ನು ದಾಟಿ ಸಂಜೆಯ ಹೊತ್ತಿನಲ್ಲಿ ಬಾರ್ಯ ಗ್ರಾಮದ ಸುರಿಯ ಎಂಬಲ್ಲಿ ಕಾಡು ಪ್ರವೇಶ ಮಾಡಿದೆ. ಅದು ಯಾರಿಗೂ ಯಾವುದೇ ರೀತಿಯ ತೊಂದರೆ ಕೊಟ್ಟಿರುವುದಿಲ್ಲ ಎಂದು ಪುತ್ತೂರು ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳು ಸ್ಥಳದಲ್ಲಿದ್ದು ಆನೆಗಳ ಚಲನವಲನವನ್ನು ಗಮನಿಸುತ್ತಿದ್ದು, ಬಿಳಿಯೂರು ಅಣೆಕಟ್ಟು ಬಳಿಗೆ ಉಪ್ಪಿನಂಗಡಿ ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡವನ್ನೂ ಬೋಟಿನೊಂದಿಗೆ ಕರೆಸಿಕೊಳ್ಳಲಾಗಿದೆ.