ಬೆಟ್ಟಂಪಾಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ, ಸಾಹಿತಿಯೂ ಆಗಿರುವ ಡಾ| ವರದರಾಜ ಚಂದ್ರಗಿರಿಯವರು ಆಗಸ್ಟ್ 30 ರಂದು ವಯೋನಿವೃತ್ತಿ ಹೊಂದಲಿದ್ದಾರೆ.
ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೂವತ್ತೆರಡು ವರ್ಷಗಳ ಕಾಲ ಉಪ್ಪಿನಂಗಡಿ, ವಿಟ್ಲ, ಕಾರ್ಕಳ, ಬೆಟ್ಟಂಪಾಡಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಡಾ. ಚಂದ್ರಗಿರಿಯವರು 2009 ರಿಂದ ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿ, ಎರಡು ವರ್ಷಗಳ ಬಿಡುವನ್ನು ಹೊರತುಪಡಿಸಿ, ಸುದೀರ್ಘ 14 ವರ್ಷಗಳ ಪ್ರಾಂಶುಪಾಲರ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಕಾಲೇಜಿನ ಶೈಕ್ಷಣಿಕ ಮತ್ತು ಭೌತಿಕ ಅಭಿವೃದ್ಧಿಯ ಪರ್ವವನ್ನು ಕಂಡಿದ್ದು, ಬೆಟ್ಟಂಪಾಡಿಯ ಜನರ ವಿಶೇಷ ಪ್ರೀತಿಗೆ ಪಾತ್ರರಾಗಿರುತ್ತಾರೆ. ನೂರಾರು ವಿದ್ಯಾರ್ಥಿಗಳ ಪ್ರೀತಿಯ ಪ್ರಾಧ್ಯಾಪಕರಾಗಿರುವ ಇವರು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸೇರಿದಂತೆ ಹಲವಾರು ಶೈಕ್ಷಣಿಕ ಸಮಿತಿಗಳಲ್ಲಿ ಸದಸ್ಯರಾಗಿ ದುಡಿದ ಅನುಭವ ಹೊಂದಿದ್ದಾರೆ.
ಡಾ| ಚಂದ್ರಗಿರಿಯವರ ಅವಧಿಯಲ್ಲೇ ಬೆಟ್ಟಂಪಾಡಿ ಕಾಲೇಜಿನಲ್ಲಿ ಬಿ.ಎಸ್ಸಿ, ಬಿ.ಕಾಂ. ಕೋರ್ಸುಗಳು ಆರಂಭವಾದವು. ಬೆಟ್ಟಂಪಾಡಿ ಕಾಲೇಜಿಗೆ ಮೂರು ರಾಂಕ್ಗಳು ಬಂದಿದ್ದು, ಶೈಕ್ಷಣಿಕ ವಲಯದಲ್ಲಿ ವಿಶೇಷ ಮೆಚ್ಚುಗೆ ಪಡೆದಿತ್ತು. ಕಾಲೇಜಿಗೆ ಮೂರು ಬಾರಿ ಗುಣಮಟ್ಟ ಪರೀಕ್ಷೆಯ ನ್ಯಾಕ್ ಭೇಟಿ ನಡೆದಾಗಲೂ ಪ್ರತಿಬಾರಿಯೂ ಕಾಲೇಜಿಗೆ ಗ್ರೇಡ್ ಪಾಯಿಂಟ್ಗಳು ಹೆಚ್ಚುತ್ತಾ ಬರಲು ಡಾ. ಚಂದ್ರಗಿರಿಯವರ ವಿಶೇಷ ಪ್ರಯತ್ನ ಉಲ್ಲೇಖನೀಯ. ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರುಗಳಾಗಿದ್ದ ಡಾ. ವಿ.ಎಸ್. ಆಚಾರ್ಯ ಮತ್ತು ಡಾ. ಸಿ.ಎಸ್. ಅಶ್ವತ್ಥನಾರಾಯಣರವರು ಇವರ ಅಧಿಕಾರಾವಧಿಯಲ್ಲಿ ಬೆಟ್ಟಂಪಾಡಿ ಕಾಲೇಜಿಗೆ ಭೇಟಿ ನೀಡಿದ್ದು ಕಾಲೇಜಿನ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಯುಜಿಸಿ ಮತ್ತು ರೂಸಾ ಯೋಜನೆಗಳನ್ವಯ ಕಾಲೇಜಿನ ವಿಸ್ತರಿತ ಕಟ್ಟಡಗಳು ಮಂಜೂರುಗೊಂಡು ರೂಪುಗೊಳ್ಳುವುದರ ಹಿಂದೆ ವರದರಾಜರ ಪ್ರಯತ್ನಗಳು ಪ್ರಮುಖವಾಗಿದ್ದುವು. ಯುಜಿಸಿ, ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾಲಯದ ವಿವಿಧ ಪೀಠಗಳು ಮುಂತಾದ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಇವರ ಅವಧಿಯಲ್ಲಿ ವಿವಿಧ ವಿಷಯಗಳ ಹನ್ನೊಂದು ರಾಷ್ಟ್ರೀಯ ವಿಚಾರ ಸಂಕಿರಣಗಳು ಬೆಟ್ಟಂಪಾಡಿಯಂತಹ ಗ್ರಾಮೀಣ ಕಾಲೇಜಿನಲ್ಲಿ ನಡೆದಿರುವುದು ವಿಶೇಷವಾಗಿದೆ.
ವರದರಾಜ ಚಂದ್ರಗಿರಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಮಾರ್ಗದರ್ಶಕರೂ ಆಗಿದ್ದು, ಇವರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಪಿ.ಹೆಚ್.ಡಿ. ಯನ್ನೂ ಇಬ್ಬರು ಎಂ.ಫಿಲ್ ಪದವಿಗಳನ್ನೂ ಪಡೆದಿರುತ್ತಾರೆ. ಸ್ವತ: ಲೇಖಕರೂ ಆಗಿರುವ ವರದರಾಜರ ಸುಮಾರು ಆರು ಕೃತಿಗಳು ಇದುವರೆಗೆ ಪಕಟವಾಗಿವೆ. ಅರಿವು-ಬೆರಗು, ನುಡಿನೋಟ, ವಿಶಿಷ್ಟಶೈಲಿಯ ಕತೆಗಾರ ವ್ಯಾಸ, ದುರ್ಗಾಪುರದ ವ್ಯಾಸಪಥ ಮುಂತಾದ ವಿಮರ್ಶಾಕೃತಿಗಳನ್ನಲ್ಲದೆ ಹಿರಿಯ ಕವಿ ಪೆರಡಾಲ ಕೃಷ್ಣಯ್ಯನವರ ಸಮಗ್ರ ಸಾಹಿತ್ಯ, ನವ್ಯ ಕತೆಗಾರ ಎಂ.ವ್ಯಾಸ ಅವರ ಸಾಹಿತ್ಯ ಇತ್ಯಾದಿಗಳನ್ನು ಸಂಗ್ರಹಿಸಿ ಪ್ರಕಟಿಸಿದವರು. ಡಾ. ತಾಳ್ತಜೆ ವಸಂತಕುಮಾರ ಅವರ ಅಭಿನಂದನ ಗ್ರಂಥ, ದೇವಮಣಿ ಶಂಕರ ಭಟ್ಟ ಅವರ ಸಂಸ್ಮರಣ ಸಂಪುಟ ಇತ್ಯಾದಿಗಳ ಪ್ರಮುಖ ಸಂಪಾದಕರಾಗಿ ದುಡಿದವರು. ಮಂಗಳೂರು ವಿಶ್ವವಿದ್ಯಾಲಯದ ಕೆಲವು ಪಠ್ಯಪುಸ್ತಕಗಳ ಸಹಿತ ಹಲವಾರು ಕೃತಿಗಳನ್ನು ಇವರು ಸಂಪಾದಿಸಿರುತ್ತಾರೆ. ಸಾಹಿತ್ಯ ವಲಯದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಜನಪ್ರಿಯರಾಗಿರುವ ವರದರಾಜ ಚಂದ್ರಗಿರಿ ಅವರ ಹಲವಾರು ಉಪನ್ಯಾಸಗಳು ನಾಡಿನ ವಿವಿಧೆಡೆಗಳಲ್ಲಿ ನಡೆದಿವೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಇವರ ಪತ್ನಿ ಡಾ. ಸುಲೇಖಾ ವರದರಾಜ್ ಅವರು ಪುತ್ತೂರಿನ ಇ.ಎಸ್.ಐ ಆಸ್ಪತ್ರೆಯಲ್ಲಿ 27 ವರ್ಷಗಳಿಂದ ವೈದ್ಯಾಧಿಕಾರಿಯಾಗಿದ್ದವರು ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಪ್ರಸ್ತುತ ಮಕ್ಕಳ ತಜ್ಞೆಯಾಗಿ ಮಕ್ಕಳ ಮತ್ತು ಹದಿಹರೆಯದವರ ಸಮಸ್ಯೆಗಳಿಗೆ ಆಪ್ತಸಲಹೆಯ ಚಿಕಿತ್ಸೆಯನ್ನು ನೀಡುವ ಕೌನ್ಸೆಲರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ ಸನ್ಮಾನಗಳು :
ಕಾರ್ಕಳದ ಸಾಹಿತ್ಯ ಸಂಘವು ಕೊಡಮಾಡುವ ಎಂ.ರಾಮಚಂದ್ರ ಸ್ಮಾರಕ ಪ್ರಶಸ್ತಿ, ಕಳೆದ ವರ್ಷ ಕಾಂತಾವರ ಕನ್ನಡ ಸಂಘದಿಂದ ʻಮಹೋಪಾಧ್ಯಾಯ ಪ್ರಶಸ್ತಿʼ ಸೇರಿದಂತೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಇವರ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ.
ಗ್ರಾಮೀಣ ಪ್ರದೇಶವಾದ ಬೆಟ್ಟಂಪಾಡಿಯ ಪ್ರಕೃತಿ ರಮಣೀಯ ಎತ್ತರದ ಪ್ರದೇಶದಲ್ಲಿರುವ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಯೋಗಾಲಯ, ಗ್ರಂಥಾಲಯಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಸನಕ್ಕೆ ಪೂರಕವಾದ ಶೈಕ್ಷಣಿಕ ಕಾರ್ಯಕ್ರಮಗಳು, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಭೌತಿಕ ಅಭಿವೃದ್ಧಿಯಲ್ಲಿ ವಿಶೇಷ ಕಾಳಜಿ ವಹಿಸಿ, ಯಾವ ಖಾಸಗಿ ಕಾಲೇಜುಗಳಿಗೂ ಕಡಿಮೆಯೆನಿಸದ ರೀತಿಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ದು ಸಾವಿರಾರು ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ಪ್ರಾಂಶುಪಾಲರಾಗಿರುವ ಡಾ. ಚಂದ್ರಗಿರಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ದುಡಿಮೆ ಸಲ್ಲಿಸಿದವರು.