ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣ- ಆರೋಪಿ ಶ್ರೀಕೃಷ್ಣ ಜೆ.ರಾವ್ ಜೈಲಿನಿಂದ ಬಿಡುಗಡೆ

0

ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.


ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ.ಹೆಗ್ಡೆ ಅವರು ಹೈಕೋರ್ಟ್‌ನಲ್ಲಿ ಆರೋಪಿ ಪರ ವಾದ ಮಂಡಿಸಿ, ರಾಜಕೀಯ ದುರುದ್ದೇಶದಿಂದ ಸುಳ್ಳು ದೂರು ದಾಖಲು ಮಾಡಲಾಗಿದೆ.ಆರೋಪಿಯ ತಂದೆಯನ್ನು ಗುರಿಯಾಗಿಟ್ಟುಕೊಂಡು ಷಡ್ಯಂತ್ರ ರೂಪಿಸಲಾಗಿದೆ.ಆರೋಪಿ ಮತ್ತು ಯುವತಿ ಸಹಪಾಠಿಗಳಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು.ಇಲ್ಲಿ ಅತ್ಯಾಚಾರದ ಪ್ರಶ್ನೆ ಉದ್ಬವಿಸುವುದಿಲ್ಲ. ಮೊದಲು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅತ್ಯಾಚಾರ ಮಾಡಿರುವ ಕುರಿತು ಉಲ್ಲೇಖವೇ ಇಲ್ಲ.ಪರಸ್ಪರ ಒಪ್ಪಿಗೆಯಿಂದ ನಡೆದಿರುವುದಕ್ಕೆ ಲೈಂಗಿಕ ದೌರ್ಜನ್ಯದ ಬಣ್ಣ ನೀಡಲಾಗಿದೆ. ಅತ್ಯಾಚಾರ ನಡೆದಿರುವುದೇ ಹೌದಾದರೆ ತಕ್ಷಣ ದೂರು ನೀಡಬೇಕಿತ್ತು.ಯುವತಿ ಗರ್ಭಿಣಿಯಾದ ಏಳು ತಿಂಗಳ ನಂತರ ದೂರು ನೀಡಲಾಗಿದೆ.ಹಾಗಾಗಿ ಈ ಪ್ರಕರಣದಲ್ಲಿ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ.ಯುವತಿ ಗರ್ಭಿಣಿ ಎಂದು ಗೊತ್ತಾದ ಬಳಿಕವೂ ಅವರ ಮನೆಯವರು ಮಗುವನ್ನು ತೆಗೆಸಲು ಪ್ರಯತ್ನಿಸಿದ್ದಾರೆಯೇ ಹೊರತು ಪೊಲೀಸರಿಗೆ ದೂರು ನೀಡಿಲ್ಲ. ಡಿ.ಎನ್.ಎ.ಇತ್ಯಾದಿ ಪ್ರಕ್ರಿಯೆ ನಡೆಸಲು ಆರೋಪಿಯನ್ನು ಜೈಲಿನಲ್ಲಿರಿಸಬೇಕಾಗಿಲ್ಲ.ಕಾನೂನು ಪ್ರಕ್ರಿಯೆಗೆ ಆರೋಪಿ ಸಹಕಾರ ನೀಡಲಿದ್ದಾರೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸಚಿನ್‌ಶಂಕರ್ ಮಗದಮ್ ಅವರು ಆರೋಪಿಗೆ ಜಾಮೀನು ಮಂಜೂರುಗೊಳಿಸಿ ಆದೇಶಿಸಿದ್ದಾರೆ.


ಆರೋಪಿ ಜೈಲಿನಿಂದ ಬಿಡುಗಡೆ:
ಆರೋಪಿಗೆ ಕರ್ನಾಟಕ ಹೈಕೋರ್ಟ್ ಸೆ.3ರಂದು ಜಾಮೀನು ಮಂಜೂರು ಮಾಡಿತ್ತು.ಆ ಬಳಿಕ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ವಕೀಲರಾದ ಸುರೇಶ್ ರೈ ಪಡ್ಡಂಬೈಲು,ರಾಘವ ಪಿ.,ದೀಪಕ್ ರೈ ಅವರು ಸೆ.4ರಂದು ಮುಗಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮಂಗಳೂರು ಜೈಲಿನಿಂದ ಬಿಡುಗಡೆಗೊಳಿಸಿ ಸೆ.4ರಂದು ರಾತ್ರಿ ಕರೆತರಲಾಗಿದೆ.ಆರೋಪಿಯು ಜಾಮೀನಿನ ಮೇಲೆ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರು ಜಿಲ್ಲಾ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದ ಬಳಿಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

LEAVE A REPLY

Please enter your comment!
Please enter your name here