ದೂಮಡ್ಕ,ಅಜಕ್ಕಳ,ಮೇಗಿನಪಂಜಕ್ಕೆ ರಸ್ತೆ ಸಂಪರ್ಕಕ್ಕಾಗ್ರಹಿಸಿ ಪ್ರತಿಭಟನೆ

0

ಸ್ಥಳಕ್ಕೆ ಆಗಮಿಸಿದ ಎ.ಸಿ, ಇ.ಒ-ಪರಿಶೀಲಿಸಿ ನ್ಯಾಯ ಕೊಡುವ ಭರವಸೆ
ತಿಂಗಳೊಳಗೆ ನ್ಯಾಯ ಸಿಗದಿದ್ದರೆ ಮಿನಿ ವಿಧಾನಸೌಧಕ್ಕೆ ಮುತ್ತಿಗೆ-ಪ್ರತಿಭಟನಾಕಾರರಿಂದ ಎಚ್ಚರಿಕೆ


ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ, ಬಲ್ನಾಡು ಗ್ರಾಮದ ಅಜಕ್ಕಳ, ಆರ್ಯಾಪು ಗ್ರಾಮದ ಮೇಗಿನಪಂಜದಲ್ಲಿ ಮೂಲ ಸೌಕರ್ಯವಾದ ರಸ್ತೆ ಸಂಪರ್ಕ ಒದಗಿಸುವಂತೆ ಮತ್ತು ಕಾಲೋನಿ ನಿವಾಸಿಗಳ ಮೇಲಿನ ಕೇಸನ್ನು ಹಿಂಪಡೆಯುವಂತೆ ಆಗ್ರಹಿಸಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ನೇತೃತ್ವದಲ್ಲಿ ಪುತ್ತೂರು ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಸೆ.8ರಂದು ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಆಗಮಿಸಿದ ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಮತ್ತು ತಾ.ಪಂ ಇಒ ನವೀನ್ ಭಂಡಾರಿ ಅವರು, ಪರಿಶೀಲನೆ ಮಾಡಿ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.


ರಸ್ತೆ ಸೌಕರ್ಯದಿಂದ ವಂಚಿತರಾಗಿದ್ದಾರೆನ್ನಲಾದ 90 ವರ್ಷ ಪ್ರಾಯದ ಕಮಲ ಅವರು ಡಾ|ಅಂಬೇಡ್ಕರ್ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಪ್ರತಿಭಟನೆಗೆ ಚಾಲನೆ ನೀಡಿದರು.ಕೃಷ್ಣಪ್ಪ ನಾಯ್ಕ, ಕೊರಗಪ್ಪ, ದಲಿತ ಮುಖಂಡ ಸೇಸಪ್ಪ ನೆಕ್ಕಿಲು, ಬೆಟ್ಟಂಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಪವಿತ್ರಾ ಎಸ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧಕ್ಕೆ ಬೀಗ: ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ ಅವರು ಮಾತನಾಡಿ,ದೂಮಡ್ಕ,ಅಜಕ್ಕಳ ಮತ್ತು ಮೇಗಿನಪಂಜದಲ್ಲಿ ರಸ್ತೆ ಸಂಪರ್ಕ ಒದಗಿಸುವಂತೆ ಮನವಿ ಮಾಡಿ ಸಾಕಾಗಿದೆ.ಬಡವರ ಕೂಗು ಯಾರಿಗೂ ಕೇಳಿಲ್ಲ.ನಾವು ಯಾರಿಗೂ ಜಗ್ಗುವವರಲ್ಲ,ಬಗ್ಗುವರಲ್ಲ.ಹಿಂದು ಸಂಘಟನೆ, ರಾಜಕೀಯ ಸಂಘಟನೆಯವರು ಶೋ ಮಾಡಿ ಹೋಗುತ್ತಾರೆ ಹೊರತು ಕಟ್ಟಕಡೆಯ ವ್ಯಕ್ತಿಗೆ ಯಾವ ಸ್ಪಂದನೆಯೂ ಇಲ್ಲ.ಇರ್ದೆ ಬೆಟ್ಟಂಪಾಡಿಯಲ್ಲಿ 13 ಮನೆಗಳಿಗೆ ರಸ್ತೆ ಇಲ್ಲ.ಜನಪ್ರಿಯ ಶಾಸಕ ಅಶೋಕ್ ರೈ,ಮಾಜಿ ಶಾಸಕ ಸಂಜೀವ ಮಠಂದೂರು ಪೊಳ್ಳು ಭರವಸೆ ಕೊಟ್ಟಿದ್ದಾರೆ.ಎಲ್ಲ ರಾಜಕೀಯದವರೂ ಮಾಡುವುದು ಒಂದೆ.ಶೋ ಮಾಡುವ ಸಂಘಟನೆಗಳಿಗೆ ತಮ್ಮನ್ನು ಮೀಸಲಿಡಬೇಡಿ.ನಿಮ್ಮಲ್ಲಿ ಶಕ್ತಿ ಇದ್ದರೆ ನನಗೆ ಆನೆ ಬಲ.ಅಧಿಕಾರಿಗಳಿಗೆ ಪತ್ರ ಕೊಟ್ಟರೆ ಪ್ರಯೋಜನ ಇಲ್ಲ.ಮೋದಿಜೀ ಅಚ್ಛೇ ದಿನ್ ಎಂದು ಹೇಳುತ್ತಾರೆ.ಆದರೆ 138 ವರ್ಷದಿಂದ ರಸ್ತೆ ಇಲ್ಲ.ಎಲ್ಲಿ ಹೋಯಿತು ಅಚ್ಛೇ ದಿನ್ ಎಂದು ಪ್ರಶ್ನಿಸಿದರು.ನ್ಯಾಯಕ್ಕಾಗಿ ಹೋದ ನಮ್ಮ ಮೇಲೆ, ಕಾಲೊನಿಯರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ.ಸಿವಿಲ್ ವಿಚಾರಕ್ಕೆ ಕ್ರಿಮಿನಲ್ ಕೇಸ್ ಯಾವ ನ್ಯಾಯ.ಅದಲ್ಲದೆ 13 ಮಂದಿಗೆ ರೂ.5 ಲಕ್ಷ ದಂಡ ಕಟ್ಟುವಂತೆ ಹೇಳಿದ್ದಾರೆ.5 ರೂಪಾಯಿ ಇಲ್ಲದ ಬಡವರು 5 ಲಕ್ಷ ಎಲ್ಲಿಂದ ಕಟ್ಟುತ್ತಾರೆ ಎಂದು ಪ್ರಶ್ನಿಸಿದ ಅವರು,13 ಮಂದಿಯ ಮೇಲಿರುವ ಕೇಸ್ ಹಿಂಪಡೆಯಬೇಕು.ನಮ್ಮ ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧಕ್ಕೆ ಬೀಗ ಜಡಿಯುತ್ತೇವೆ ಎಂದರು.


ಬೇಡಿಕೆ ಈಡೇರದಿದ್ದಲ್ಲಿ ಮುತ್ತಿಗೆ ಅನಿವಾರ್ಯ:
ದಲಿತ ಸಂಘಟನೆಗಳ ಮುಖಂಡ ಶೇಷಪ್ಪ ನೆಕ್ಕಿಲು ಅವರು ಮಾತನಾಡಿ ಯಾವುದೇ ಸರಕಾರ ಬಂದರೂ ಪರಿಶಿಷ್ಟ ಜಾತಿಯವರ ಸಮಸ್ಯೆಗಳನ್ನು ಈಡೇರಿಸುವ ಮಟ್ಟಕ್ಕೆ ಹೋಗುವುದಿಲ್ಲ. ಮುಂದುವರಿದ ಸಮಾಜ ಪತ್ರ ವ್ಯವಹಾರವನ್ನೂ ಮಾಡಬೇಕಾಗಿಲ್ಲ.ಆದರೆ ಪರಿಶಿಷ್ಟ ಜಾತಿ ಪಂಗಡದವರು ರಾಜ್ಯಮಟ್ಟಕ್ಕೆ ಪತ್ರ ವ್ಯವಹಾರ ಮಾಡಿದರೂ ಪ್ರತಿಕ್ರಿಯೇ ಇಲ್ಲ.ನಮ್ಮ ಜನರು ಮತದಾನ ಮಾಡುವಾಗ ಈ ಹೋರಾಟಗಳನ್ನು ನೆನಪಿಸಿಕೊಳ್ಳಬೇಕು.ನಾನು ರೂಲಿಂಗ್ ಪಾರ್ಟಿಯ ಜನವಾದರೂ ಸಂಘಟನೆ, ಅಂಬೇಡ್ಕರ್‌ರವರ ಆಶಯ ಈಡೇರಿಸುವುದು ನನಗೆ ಮುಖ್ಯ ಎನಿಸುತ್ತದೆ. ಹಾಗಾಗಿ ಜಟಿಲವಾದ ಸಮಸ್ಯೆಗಳನ್ನು ಇಲಾಖೆ ತಕ್ಷಣ ಬಗೆಹರಿಸಿ ನೊಂದ ಸಮಾಜಕ್ಕೆ ನ್ಯಾಯ ಕೊಡುವಂತೆ ಒತ್ತಾಯ ಮಾಡುತ್ತೇನೆ.ಇದು ಸಾಧ್ಯವಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಒಂದು ನಿರ್ಣಾಯಕ ಹಂತಕ್ಕೆ ಬರಬೇಕು.ಜೊತೆಗೆ ಜಿಲ್ಲಾ ಮುಖಂಡರ ಜೊತೆ ಸೇರಿ ದಿಟ್ಟ ಹೋರಾಟಕ್ಕೆ ಹೆಜ್ಜೆ ಇಡಬೇಕಾಗಿದೆ.ಬೇಡಿಕೆಯನ್ನು ಈಡೇರಿಸುವ ಕುರಿತು ಸರಕಾರವನ್ನು ಒತ್ತಾಯಿಸುತ್ತೇನೆ.ಬೇಡಿಕೆ ಈಡೇರದಿದ್ದಲ್ಲಿ ಮುತ್ತಿಗೆ ಅನಿವಾರ್ಯ ಎಂದರು.


ನನಗೂ ಇವತ್ತಿನ ತನಕ ದಾರಿಯಿಲ್ಲ:
ಬೆಟ್ಟಂಪಾಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಪವಿತ್ರಾ ದೇರಡ್ಕ ಅವರು ಮಾತನಾಡಿ ನಾನು ಈ ಹಿಂದೆ ಪಂಚಾಯತ್ ಅಧ್ಯಕ್ಷೆ ಆಗಿದ್ದರೂ ನನಗೂ ಇಲ್ಲಿನ ತನಕ ಮನೆಗೆ ಹೋಗಲು ದಾರಿಯಿಲ್ಲ. ನನಗೂ ಎಲ್ಲಿಯೂ ನ್ಯಾಯ ಸಿಗಲಿಲ್ಲ.ನಿಯತ್ತಿನಿಂದ ಪಂಚಾಯತ್ ಕೆಲಸ ಮಾಡಿದ್ದೇನೆ.ಆದರೆ ನ್ಯಾಯ ಸಿಗಲಿಲ್ಲ.ಹಾಗಾಗಿ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದರು.


15 ಕೆ.ಜಿ ಅಕ್ಕಿಗೆ 300 ರೂಪಾಯಿ ಬಾಡಿಗೆ:
ಕಾಲೋನಿ ನಿವಾಸಿ ಕೊರಗಪ್ಪ ನಾಯ್ಕ ಅವರು ಮಾತನಾಡಿ ಸರಕಾರಕ್ಕೆ ನಮ್ಮ ಸಮಸ್ಯೆಯ ಕುರಿತು ಇನ್ನೂ ಅರಿವಿಲ್ಲ.ಚುನಾವಣೆ ಸಂದರ್ಭ ನಾವು ಗೆದ್ದರೆ ಗ್ಯಾರೆಂಟಿ ರಸ್ತೆ ಎಂದು ಹೇಳಿ ಹೋದವರು ಮತ್ತೆ ಬರುವುದಿಲ್ಲ. ಮತ್ತೆ ಅವರು ಮುಂದಿನ ಚುನಾವಣೆಗೆ ಬರುತ್ತಾರೆ.ಹಾಗೆಯೇ ಸರಕಾರದ ಯೋಜನೆಯೂ ನಮಗೆ ಸಿಗುವುದಿಲ್ಲ.15 ಕೆ.ಜಿ ಉಚಿತ ಅಕ್ಕಿ ಕೊಡುತ್ತಾರೆ.ಆದರೆ ಅದನ್ನು ಮನೆಗೆ ಕೊಂಡೊಯ್ಯಲು 300 ರೂಪಾಯಿ ಬಾಡಿಗೆ ಕೊಡುವುದು ನಮಗೆ ಕಷ್ಟವಾಗಿದೆ.ಹತ್ತದಿನೈದು ಎಕ್ರೆ ಜಾಗ ಇದ್ದವರೂ ಕೌರವರಂತೆ ಒಂದು ಸೂಜಿಯಷ್ಟು ಜಾಗ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.ಒಟ್ಟಿನಲ್ಲಿ ನಮ್ಮದು ಶೋಚನಿಯ ಸ್ಥಿತಿಯಾಗಿದೆ ಎಂದರು.


ಹೋರಾಟದಿಂದ ಗೆಲುವು ಸಾಧ್ಯ:
ಇರ್ದೆ ಗ್ರಾಮದ ಪೇರಲ್ತಡ್ಕ ನಿವಾಸಿ ಐತ್ತಪ್ಪ ಅವರು ಮಾತನಾಡಿ, ಮಾರ್ಗಕ್ಕಾಗಿ ಹಲವು ಹೋರಾಟ ಮಾಡಿದ್ದೇವೆ. ಆದರೆ ಆಗ ಒಂದೇ ಪಕ್ಷದ ಆಡಳಿತದಿಂದಾಗಿ ನಮಗೆ ನ್ಯಾಯ ಸಿಗಲಿಲ್ಲ. ಈಗ ನಮ್ಮದೇ ಶಾಸಕರಿದ್ದಾರೆ.ಆದರೂ ಮಾರ್ಗಕ್ಕೆ ಅಡೆತಡೆಯಿದೆ.ನಾವೆಲ್ಲ ಭೇದಭಾವ ಬಿಟ್ಟು ಒಂದೇ ತಾಯಿ ಮಕ್ಕಳಂತೆ ಹೋರಾಟ ಮಾಡಬೇಕು. ಆಗ ಗೆಲುವು ಸಾಧ್ಯ ಎಂದರು.

ಒಂದು ತಿಂಗಳ ಕಾಲಾವಕಾಶ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.ಈ ಸಂದರ್ಭ ಗಿರಿಧರ ನಾಯ್ಕ ಅವರು ಸಮಸ್ಯೆ, ಬೇಡಿಕೆ ಕುರಿತು ವಿವರಣೆ ನೀಡಿದರು.ನಮ್ಮ 13 ಮಂದಿ ಮೇಲೆ ಕೋರ್ಟ್ ಕೇಸ್ ಇದೆ.ರೂ.5 ಲಕ್ಷ ದಂಡ ಹಾಕಿರುವುದು ಯಾವ ಕಾರಣಕ್ಕಾಗಿ. ನಾವು ಏನಾದರೂ ಜಗಳ ಮಾಡಿದರೆ ಕ್ರಿಮಿನಲ್ ಕೇಸ್ ಆಗುತ್ತದೆ.ಸ್ಥಳಕ್ಕೆ ಆರ್‌ಐ, ವಿ.ಎ ಬರುವಾಗ ಗಲಾಟೆ ಮಾಡಿಲ್ಲ ನಮ್ಮಲ್ಲಿ ದಾಖಲೆ ಇದೆ.ಹಾಗಾಗಿ ನಮ್ಮ ಕೇಸ್ ಹಿಂಪಡೆಯುವಂತೆ ಗಿರಿಧರ ನಾಯ್ಕ ಅವರು ಸಹಾಯಕ ಕಮಿಷನರ್ ಅವರಿಗೆ ಮನವಿ ಮಾಡಿದರು.ಈ ಕುರಿತು ಪರಿಶೀಲಿಸುತ್ತೇನೆ.ಕಾಲಾವಕಾಶ ಬೇಕಾಗುತ್ತದೆ ಎಂದು ಎಸಿ ಹೇಳಿದರು.ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ಹೆಚ್ ಅವರು, ಕಾನೂನಿಗೆ ಗೌರವ ಕೊಡಲೇ ಬೇಕು. ರಸ್ತೆ ಕೆಲಸ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ.ಅಲ್ಲಿ ಕಾಲು ದಾರಿ ಇದೆ.ಅವಕಾಶ ಇದ್ದರೆ ಅಭಿವೃದ್ದಿಗೆ ನಾವೂ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಗಿರಿಧರ ನಾಯ್ಕ್ ಅವರು ಮಾತನಾಡಿ, ಅಧಿಕಾರಿಗಳು ಮನವಿ ಸ್ವೀಕರಿಸಿ, ನ್ಯಾಯ ಕೊಡುವ ಭರವಸೆ ನೀಡಿದ್ದಾರೆ.ನಾನು 15 ದಿನದೊಳಗೆ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ಬೇಡಿಕೆಯ ಕುರಿತು ವಿಚಾರಿಸುತ್ತೇನೆ.ಮುಂದೆ ಒಂದು ತಿಂಗಳ ಕಾಲಾವಕಾಶ ನೀಡುವ.ಸಹಾಯಕ ಕಮಿಷನರ್ ಅವರು ನಮ್ಮ ಕೆಲಸ ಮಾಡಿಕೊಡದಿದ್ದರೆ ನಾವು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಗ್ಯಾರೆಂಟಿ.ಇದರ ಜೊತೆಗೆ ಅಲ್ಲಿರುವ 12 ಎಕ್ರೆ ಸರಕಾರಿ ಜಮೀನನ್ನು ಕೂಡಾ ಬಡವರಿಗೆ ಹಂಚುವಂತೆ ಒತ್ತಾಯ ಮಾಡಲಿದ್ದೇವೆ.ಈ ಸಂದರ್ಭ ಕಾಲೊನಿಯವರು ನನ್ನೊಂದಿಗೆ ಇರಬೇಕು. ನಿಮ್ಮ ಆನೆ ಬಲ ಇದ್ದರೆ ನಾನು ಖಂಡಿತಾ ಕೆಲಸ ಮಾಡುತ್ತೇನೆ.ಇದೇ ತಿಂಗಳ 20ಕ್ಕೆ ದಂಡಾಧಿಕಾರಿ ಕೋರ್ಟ್ ಇದೆ.ನಮ್ಮ ಮೇಲೆ ದಾಖಲೆ ಇದ್ದರೆ ಖಂಡಿತಾ ಕೇಸ್ ಹಾಕಲಿ,ಜೈಲಿಗೂ ಹಾಕಲಿ.ಯಾವುದೇ ದಾಖಲೆ ಇಲ್ಲದೆ ಸುಮ್ಮನೆ ಕೇಸು ಹಾಕುವುದು ಸರಿಯಲ್ಲ ಎಂದರು.

LEAVE A REPLY

Please enter your comment!
Please enter your name here