ಅ.20ಕ್ಕೆ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಶೋಕ ಜನಮನ
ಮುಖ್ಯಮಂತ್ರಿ ಸಿದ್ಧರಾಮ್ಯ, ಸ್ಪೀಕರ್ ಸಹಿತ ಹಲವಾರು ಮಂದಿ ಮಂತ್ರಿಗಳ ಆಗಮನ
1 ಲಕ್ಷ ಮಂದಿಗೆ ವಸ್ತ್ರದಾನ ಕಾರ್ಯಕ್ರಮ
ಸೀರೆ ಬೆಡ್‌ಶೀಟ್ ಬದಲು ತಟ್ಟೆ, ಗ್ಲಾಸ್, ಪಿಂಗಾನಿ, ಬೌಲ್, ಟೆವೆಲ್ ಕೊಡುಗೆ
ಪಕ್ಷಾತೀತ ನೆಲೆಯಲ್ಲಿ ನಡೆಯುವ ಕಾರ್ಯಕ್ರಮ
ಹಿರಿಯರಿಗೆ ಉಚಿತ ವಾಹನದ ವ್ಯವಸ್ಥೆ
ಹಿರಿಯ ಕಿರಿಯರಿಗೆ ಗೂಡುದೀಪ ಸ್ಪರ್ಧೆಯಲ್ಲಿ ನಗದು ಬಹುಮಾನ
ಬಡವರಾಗಿದ್ದು ಆಯ್ದ 20 ಮಂದಿ ಸೇವಾಕರ್ತರಿಗೆ ಸನ್ಮಾನ
ಪುತ್ತೂರು: ಈ ವರ್ಷವೂ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ 13ನೇ ವರ್ಷದ ವಸ್ತ್ರದಾನದ ’ಅಶೋಕ ಜನಮನ’ ಕಾರ್ಯಕ್ರಮ ಅ.20ಕ್ಕೆ ಪುತ್ತೂರಿನ ಕೊಂಬೆಟ್ಟು ತಾಲೂಕು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ಈ ಬಾರಿ 1 ಲಕ್ಷ ಮಂದಿಗೆ ವಸ್ತ್ರದಾನವಾಗಿ ಟೆವೆಲ್ ಮತ್ತು ಸ್ಟೀಲ್ ತಟ್ಟೆ, ಗ್ಲಾಸ್, ಪಿಂಗಾಣಿ, ಬೌಲ್ ವಿತರಣೆ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಪುತ್ತೂರು ಶಾಸಕರ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಇದೊಂದು ಪಕ್ಷಾತೀತ ನೆಲೆಯಲ್ಲಿ ಹಾಗೂ ಬಡವರ ಸೇವೆಗಾಗಿಯೇ ಹಾಕಿಕೊಂಡ ಕಾರ್ಯಕ್ರಮವಾಗಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ಇದರಲ್ಲಿ ಜಾತಿ ಧರ್ಮ ಭೇದಗಳಿಲ್ಲದೆ ಜನತೆ ಭಾಗವಹಿಸುತ್ತಾರೆ. ಬೆಳಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 4ರ ತನಕ ಕಾರ್ಯಕ್ರಮ ನಡೆಯಲಿದೆ. ಕಳೆದ 12 ವರ್ಷದಿಂದ ಸಾರಿ ಮತ್ತು ಬೆಡ್‌ಶೀಟ್, ಟೆವೆಲ್ ಕೊಡುತ್ತಾ ಬಂದಿದ್ದು, ಈ ವರ್ಷ ಜನರ ಬೇಡಿಕೆಯಂತೆ ಬದಲಾವಣೆ ತಂದು ಸ್ಟೀಲ್ ತಟ್ಟೆ, ಗ್ಲಾಸ್, ಪಿಂಗಾಣಿ, ಬೌಲ್ ಹಾಗು ಸಂಪ್ರದಾಯದಂತೆ ಒಳ್ಳೆಯ 60 * 36 ಇಂಚಿನ ಟೆವೆಲ್ ನೀಡಲಾಗುವುದು. ಕಳೆದ ಬಾರಿ 85,650 ಮಂದಿಗೆ ವಸ್ತ್ರದಾನ ಮಾಡಿದ್ದೇವೆ. ಈ ಭಾರಿ ಸುಮಾರು 1 ಲಕ್ಷ ಮಂದಿಗೆ ವಸ್ತ್ರ ವಿತರಣೆಯ ಯೋಜನೆ ಹಾಕಿಕೊಂಡಿದ್ದೇವೆ. ಕಳೆದ ವರ್ಷದಿಂದ ಈ ಭಾರಿ ಸುಮಾರು 75ಲಕ್ಷ ದಷ್ಟು ಬಜೆಟ್ ಹೆಚ್ಚಾಗಲಿದೆ. ಒಟ್ಟು 4 ಕೋಟಿ ರೂಪಾಯಿಷ್ಟು ಖರ್ಚು ವೆಚ್ಚವಾಗಬಹುದು ಎಂದು ಚಿಂತಿಸಲಾಗಿದೆ ಎಂದರು.
ಮುಖ್ಯಮಂತ್ರಿ ಭಾಗವಹಿಸುವುದು ಫಿಕ್ಸ್ :
ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾಗವಹಿಸುವುದು ಈಗಾಗಲೇ ಪಿಕ್ಸ್ ಆಗಿದೆ. ಸರಕಾರದ ಗೃಹ ಇಲಾಖೆಯಿಂದ ಕಾರ್ಯಕ್ರಮ ನಿಗದಿಯಾಗಿದೆ. ಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ರಾಜ್ಯದ ಕೆಲವು ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:
ಈ ಹಿಂದೆ ಅಂದ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದೆವು. ಈ ಭಾರಿ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿ ಬೆಳಗ್ಗೆ ಗಂಟೆ ೯.೩೦ರಿಂದ ಸಂಜೆ ಗಂಟೆ ೫ ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಲಿದೆ. ಸ್ಪರ್ಧಾ ಮಾದರಿಯಲ್ಲಿ, ಸಂಗೀತ ರಸಮಂಜರಿ ಸಹಿತ ಹಲವು ಮನೋರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
1ಲಕ್ಷ ಮಂದಿಗೆ ಭೋಜನ- ಸಂಜೆ ದೋಸೆಮೇಳ:
ಕಾರ್ಯಕ್ರಮದಲ್ಲಿ ಮಧ್ಯಾಹ್ನ ಸುಮಾರು 1 ಲಕ್ಷ ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗುವುದು. ಕಳೆದ ಭಾರಿಯಂತೆ ಪ್ರತೇಕ ಕೌಂಟರ್ ಹಾಕಿ ಭೋಜನ ವ್ಯವಸ್ಥೆಯನ್ನು ಸುಗಮಗೊಳಿಸಲಾಗುವುದು. ಇದರ ಜೊತೆಗೆ ಸಂಜೆ ದೋಸೆ ಮೇಳ ಮಾಡುವ ಆಲೋಚನೆ ಇದೆ. 50 ಮಂದಿ ನಿರಂತರ ಸೆಟ್ ದೋಸೆ ಮಾಡುವ ಯೋಜನೆ ರೂಪಿಸಿದ್ದೇವೆ. ಇದು ಲೈವ್ ದೋಸೆ ಆಗಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಹಿರಿಯರಿಗೆ ಉಚಿತ ವಾಹನದ ವ್ಯವಸ್ಥೆ:
ಹಿರಿಯರಿಗೆ ವಸ್ತ್ರದಾನ ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗುವಂತೆ ಅವರು ಪುತ್ತೂರು ಮಹಾಲಿಂಗೇಶ್ವರ ದೇವಳದ ಬಳಿಗೆ ಬಂದರೆ ಅಲ್ಲಿಂದ ಪುತ್ತೂರಿನ ಆಟೋ ರಿಕ್ಷಾ ಚಾಲಕರಿಂದ ಉಚಿತ ಸಾಗಾಟದ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಗೂಡುದೀಪ ಸ್ಪರ್ಧೆ:
ಕಳೆದ ವರ್ಷದಂತೆ ಗೂಡುದೀಪ ಸ್ಪರ್ಧೆಯು ಈ ಭಾರಿಯೂ ನಡೆಯಲಿದೆ. ಜಯಪ್ರಕಾಶ್ ಬದಿನಾರು ಅವರ ನೇತೃತ್ವದಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ. ಈ ಭಾರಿ 16 ವರ್ಷ ವಯೋಮಾನದ ಒಳಗಿನ ಮತ್ತು 16ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ. ವಿಜೇತರ ಪೈಕಿ ಪ್ರಥಮ ದ್ವಿತೀಯ ಬಹುಮಾನವಿದೆ. ಕಿರಿಯರಿಗೆ ರೂ. 5 ಸಾವಿರ ಮತ್ತು 2,500, ಹಿರಿಯರಿಗೆ ರೂ. 7,500 ಮತ್ತು 3 ಸಾವಿರ ನಗದು ಬಹುಮಾನ ವಿತರಿಸಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಬಡವರ ಸೇವೆಯನ್ನು ಗುರುತಿಸಿ ಸನ್ಮಾನ:
ಸಮಾಜದಲ್ಲಿ ಅನೇಕ ಮಂದಿ ಸನ್ಮಾನಕ್ಕೆ ಯೋಗ್ಯತೆ ಇದ್ದರೂ ಅವರನ್ನು ಗುರುತಿಸಿ ಸನ್ಮಾನಿಸುವುದಿಲ್ಲ. ಬಡತನದಲ್ಲಿದ್ದು ಮನೆಯಲ್ಲಿ ಅನಾರೋಗ್ಯ ಪೀಡಿತರ ಸೇವೆ ಮಾಡುವ, ವಯೋವೃದ್ಧರನ್ನು ನೋಡುವ, ಬುದ್ದಿ ಮಾಂದ್ಯರನ್ನು ನೋಡುವ ಚಾಕ್ರಿಯನ್ನು ಮಾಡುವ ಕೃಷಿ ಕಾಯಕದಲ್ಲಿ ಪರಿಣತರಾಗಿರುವ, ಹೈನುಗಾರಿಕೆಯಲ್ಲಿ ಕುಟುಂಬವನ್ನು ನಡೆಸುವ ಆಯ್ದ ಮಂದಿಯನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಗ್ರಾಮ ಭೇಟಿ:
ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಕರ್ತರು ಪ್ರತೀ ಗ್ರಾಮಕ್ಕೂ ಹೋಗಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ ಎಂಬುವುದನ್ನು ನಾವು ತಿಳಿದುಕೊಳ್ಳಬೇಕು. ಈ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯುವ ಸೇವಾ ಕಾರ್ಯಕ್ರಮ. ಬಡವರಿಗಾಗಿಯೇ ಮಾಡುತ್ತಿರುವ ಸೇವಾ ಕಾರ್ಯ. ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರಿಗೂ ವಸ್ತ್ರವಿತರಣೆ ಮಾಡುತ್ತೆವೆ. ಒಂದು ಮನೆಯಿಂದ ಎಷ್ಟು ಮಂದಿ ಬಂದರೂ ಅವರಿಗೆ ವಸ್ತ್ರ ವಿತರಣೆ ಮಾಡಲಾಗುವುದು. ಇದನ್ನು ಗ್ರಾಮದ ಜನತೆಗೆ ಮಾಹಿತಿ ನೀಡಬೇಕು. ಈಗಾಗಲೇ ಟ್ರಸ್ಟ್‌ನ ಮೂಲಕವೂ ಆಮಂತ್ರಣ ಕರೆ ಹೋಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ರೈ ಎಸ್ಟೇಟ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ನಿಹಾಲ್ ಪಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.