ಪುತ್ತೂರು:ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರೊಬ್ಬರಿಗೆ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತ,ಸಂಘಟನೆಯ ವಾಟ್ಸಪ್ ಗ್ರೂಪ್‌ನಲ್ಲಿ ಸದಸ್ಯರಾಗಿರುವ ನರಿಮೊಗರು ಅಳಕೆ ನಿವಾಸಿ ಸುಭಾಶ್ ರೈ ಹಲ್ಲೆಗೊಳಗಾಗಿದ್ದರು.
‘ನಾನು ಸದಸ್ಯನಾಗಿರುವ ಹಿಂದು ಜಾಗರಣ ವೇದಿಕೆ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಅಶೋಕ್ ತ್ಯಾಗರಾಜನಗರ ಎಂಬವರು ಸಹ ಸದಸ್ಯನಾಗಿದ್ದು, ಆ ಗ್ರೂಪ್‌ನಲ್ಲಿ ಕೆಲವೊಂದು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು.ಈ ಕುರಿತು ಆಶೋಕ್ ಅವರು ಕರೆ ಮಾಡಿ ದರ್ಬೆಗೆ ಬರಲು ಹೇಳಿದಂತೆ ಹೋದಾಗ ಅಲ್ಲಿ ನನಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಕೊಲೆಬೆದರಿಕೆಯೊಡ್ಡಿ, ಎದೆಗೆ ಮತ್ತು ಕೆನ್ನೆಗೆ ಹಲ್ಲೆನಡೆಸಿದ್ದಾರೆ’ ಎಂದು ಸುಭಾಶ್ ರೈ ಆರೋಪಿಸಿದ್ದಾರೆ.
ಪೊಲೀಸರು ಸುಭಾಶ್ ರೈಯವರ ಹೇಳಿಕೆ ದಾಖಲಿಸಿಕೊಂಡು, ಇದೊಂದು ಅಸಂeಯ ಪ್ರಕರಣವಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ತನಿಖೆ ನಡೆಸುವ ಕುರಿತು ಹಿಂಬರಹ ನೀಡಿದ್ದರು.ಬಳಿಕ ಸುಭಾಶ್ ರೈ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.ನ್ಯಾಯಾಲಯದ ಆದೇಶದಂತೆ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.