ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಲಿ: ಚಕ್ರವರ್ತಿ ಸೂಲಿಬೆಲೆ

0

ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ “ವಿವೇಕ ವಿಜಯ” ಶೀರ್ಷಿಕೆಯಡಿ ವಿಶೇಷ ಉಪನ್ಯಾಸ- ಕಾರ್ಯಕ್ರಮಗಳ ಉದ್ಘಾಟನೆ

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 123 ನೇ ವರ್ಷದ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಭಾರತ ವಂದನಾ – ವಿವೇಕ ಚಿಂತನ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗಾಗಿ ಪ್ರಥಮ ಅವಧಿ


ಪುತ್ತೂರು: ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸಿರುವುದು ಹಿಂದೂ ಧರ್ಮ. ಇಂತಹ ಹಿಂದೂ ಧರ್ಮದ ಪ್ರಾಚೀನತೆ ಹಾಗೂ ಶ್ರೇಷ್ಠತೆಯನ್ನು ಇಡೀ ಜಗತ್ತಿನ ಕಣ್ಣಿನಲ್ಲಿ ಎತ್ತಿ ಹಿಡಿದು ಸಾಕ್ಷೀಕರಿಸಿದವರು ಮಹಾನ್ ಸಂತ ವಿವೇಕಾನಂದರು. ಯಾವ ವ್ಯಕ್ತಿಯು ವಿವೇಕಾನಂದರ ತತ್ವಾದರ್ಶಗಳನ್ನು ತಮ್ಮ ಅಂತರಾತ್ಮದಲ್ಲಿ ಇರಿಸಿಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅಂತಹ ವ್ಯಕ್ತಿಗಳಲ್ಲಿ ದೇಶಭಕ್ತಿ, ದೈವೀಕತೆ ಹಾಗೂ ಆತ್ಮವಿಶ್ವಾಸ ತುಂಬಿಕೊಳ್ಳುತ್ತದೆ ಎಂದು ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ನುಡಿದರು. ಇವರು ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 123ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವೇಕ ವಿಜಯ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ. ಕೃಷ್ಣ ಭಟ್ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.


ವಿವೇಕ ವಿಜಯ ಉಪನ್ಯಾಸ ಕಾರ್ಯಕ್ರಮದ ಮೊದಲ ಹಂತವಾಗಿ ವಿದ್ಯಾರ್ಥಿಗಳಿಗಾಗಿ ಭಾರತ ವಂದನಾ – ವಿವೇಕ ಚಿಂತನ ಶೀರ್ಷಿಕೆಯಡಿ ಉಪನ್ಯಾಸ ಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ನಡೆಸಿಕೊಟ್ಟರು. ವಿದ್ಯಾರ್ಥಿಗಳನ್ನುದ್ದೇಶಿಸಿ ದಿಕ್ಸೂಚಿ ಮಾತುಗಳನ್ನಾಡುತ್ತಾ, ಇಂದಿನ ಯುವ ಪೀಳಿಗೆಯು ಸದಭಿರುಚಿಯ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ತರುಣ ವರ್ಗವು ಸ್ವತಂತ್ರವಾದ ಆಲೋಚನೆಯ ಶಕ್ತಿಯನ್ನು ಕಳೆದುಕೊಳ್ಳುತ್ತಾ ಇದೆ. ನಮ್ಮ ಪೂರ್ವಜರು ಸೂಕ್ಷ್ಮವಾದ ವಿಷಯಗಳಿಂದ ಮಹತ್ವವಾದುದನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದರು. ವಿವೇಕಾನಂದರು ಇಂತಹ ಆಲೋಚನೆಗಳನ್ನು ಬೆಳೆಸಿಕೊಂಡಿದ್ದ ಕಾರಣ ಅವರಿಗೆ ಇಡೀ ಜಗತ್ತನ್ನು ಗೆಲ್ಲಲು ಸಾಧ್ಯವಾಯಿತು. ಅದೇ ರೀತಿ ಇಂದಿನ ಯುವ ಪೀಳಿಗೆಯು ಇತರರ ಯೋಚನೆಗಳನ್ನು ಪರಿಗಣಿಸಿ, ಅದನ್ನು ಸುಧಾರಿಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸುವುದರ ಮೂಲಕ ಸ್ವಯಂ ಅಭಿವೃದ್ಧಿಯ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಕಾರಣೀಭೂತರಾಗುತ್ತಾರೆ. ವಿದ್ಯಾರ್ಥಿಗಳು ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಗಳ ಕಡೆಗೆ ಗಮನ ಕೇಂದ್ರೀಕರಿಸಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ, ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಎಂ. ದೇವಿಚರಣ್ ರೈ ಇವರು ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ, ಕೋಶಾಧಿಕಾರಿಗಳಾದ ಸಚಿನ್ ಶೆಣೈ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.


ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರೇರಣಾ ಗೀತೆ, ವಿವೇಕ ಗೀತಾ ನಮನವನ್ನು ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ. ಕೃಷ್ಣ ಭಟ್ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಯಶವಂತಿ ಡಿ. ವಂದಿಸಿ, ಕನ್ನಡ ಭಾಷಾ ಉಪನ್ಯಾಸಕಿ ಪುಷ್ಪಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here