ಉಪ್ಪಿನಂಗಡಿ: ಆದರ್ಶನಗರ – ತಾಳೆಹಿತ್ಲು ರಸ್ತೆಯ ಕಜೆ ಎಂಬಲ್ಲಿ ಧರೆ ಕುಸಿದ ಮಣ್ಣು ರಸ್ತೆ ಬದಿಯೇ ಇದ್ದು, ಇದರಿಂದಾಗಿ ಮಳೆ ಬಂದ ಸಂದರ್ಭ ರಸ್ತೆಯೆಲ್ಲಾ ಕೆಸರಿನಿಂದ ತುಂಬಿ ಸಂಚಾರಕ್ಕೆ ಕಷ್ಟಸಾಧ್ಯವಾಗಿದೆ ಆದ್ದರಿಂದ ತಕ್ಷಣವೇ ಆ ಮಣ್ಣನ್ನು ತೆರವುಗೊಳಿಸಬೇಕು ಹಾಗೂ ಹಿಟಾಚಿ ಯಂತ್ರಗಳು ಹೋಗಿ ಇಲ್ಲಿ ಡಾಮರು ರಸ್ತೆ ಕಿತ್ತು ಹೋಗಿದ್ದು, ಅದನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ 34 ನೆಕ್ಕಿಲಾಡಿ ಗ್ರಾ.ಪಂ.ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಈ ಸಂದರ್ಭ ಮಾತನಾಡಿ, ಮಳೆ ಬಂದ ಸಂದರ್ಭ ರಸ್ತೆಯಿಡೀ ಕೆಸರಾಗುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಬಿದ್ದಿರುವ ತಡೆಗೋಡೆಯನ್ನು ಮೇಲೆತ್ತಿಡಲು ಹಿಟಾಚಿ ಯಂತ್ರಗಳು ಹೋಗಿ ಡಾಮರು ರಸ್ತೆ ಹಾಳಾಗಿದೆ. ಅದನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ ಮಾತನಾಡಿ, ಗ್ರಾ.ಪಂ. ಪ್ರತಿಯೊಂದು ವಿಷಯದಲ್ಲಿ ರಾಜಕೀಯ ತಾರತಮ್ಯ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಅಲ್ಲಿಂದ 50 ಮೀ. ದೂರದಲ್ಲಿ ಖಾಸಗಿ ವ್ಯಕ್ತಿಯೋರ್ವರು ಕಾಮಗಾರಿ ನಡೆಸುವಾಗ ರಸ್ತೆಗೆ ಮಣ್ಣು ಬಿದ್ದು ರಸ್ತೆಯಲ್ಲಿ ಕೆಸರಾಗಿತ್ತು. ಆಗ ಪಂಚಾಯತ್ ಪಿಡಿಒ ಅವರು ತಕ್ಷಣವೇ ತೆಗೆಯಬೇಕು. ಇಲ್ಲದಿದ್ದಲ್ಲಿ ಪೊಲೀಸ್ ದೂರು ನೀಡಲಾಗುವುದು ಎಂದು ಹೇಳಿದ್ದರು. ಅದಕ್ಕೆ ಆ ವ್ಯಕ್ತಿ ಅವರ ಸ್ವಂತ ಖರ್ಚಿನಿಂದ ರಾತ್ರೋ ರಾತ್ರಿ ಟ್ಯಾಂಕರ್ ಮೂಲಕ ನೀರು ತರಿಸಿ ರಸ್ತೆಯನ್ನು ಕ್ಲೀನ್ ಮಾಡಿದ್ದಾರೆ. ಅವರಿಗೆ ಒತ್ತಡ ಹಾಕಿದವರು ಇಲ್ಲಿ ಯಾಕೆ ಮೌನವಾಗಿದ್ದಾರೆ. ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು ಎಂದರು.
34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ ಮಾತನಾಡಿ, ಅಲ್ಲಿ ಚರಂಡಿಯೂ ಮಣ್ಣಿನಿಂದ ಮುಚ್ಚಿ ಹೋಗಿದ್ದು, ಅದನ್ನು ಸ್ವಚ್ಛಗೊಳಿಸಿ ಕೊಡಬೇಕು. ಈ ರಸ್ತೆ ಗ್ರಾ.ಪಂ.ಗೆ ಹಸ್ತಾಂತರವಾಗಿದ್ದು, ಡಾಮರು ಕಿತ್ತು ಹೋದ ರಸ್ತೆಯನ್ನೂ ಸರಿಪಡಿಸಿಕೊಡಬೇಕು. ಇಲ್ಲಿ ಆಗಿರುವ ಅವ್ಯವಸ್ಥೆಗೆ ಗ್ರಾ.ಪಂ. ಹೊಣೆಯಾಗಿದೆ ಎಂದರು.
ಗ್ರಾಮಸ್ಥ ಹಮೀದ್ ಪರನೀರು ಮಾತನಾಡಿ, ನಾನು ಕಾಮಗಾರಿ ನಡೆಸುವಾಗ ರಸ್ತೆಯಲ್ಲಿ ಮಣ್ಣು ಬಿದ್ದಿದೆ ಎಂದು ಅದನ್ನು ತಕ್ಷಣವೇ ತೆರವು ಮಾಡಬೇಕು ಎಂದು ಒತ್ತಡ ಹಾಕಿದವರು ಈಗೆಲ್ಲಿ ಹೋದರು. ನಾವು ಕೂಡಾ ತೆರಿಗೆ ಕಟ್ಟುವವರೇ. ಆದ್ದರಿಂದ ಎಲ್ಲರಿಗೂ ನ್ಯಾಯ ಸಮಾನವಾಗಿರಬೇಕು. ರಸ್ತೆಯಲ್ಲಿ ಮಣ್ಣು ಬಿದ್ದಿದ್ದಕ್ಕೆ ಮೂರು ಮಂದಿ ಕೆಲಸದವರನ್ನು ಮಾಡಿ, ಮೂರು ಟ್ಯಾಂಕರ್ ನೀರು ತರಿಸಿ ನಾನು ರಸ್ತೆಯನ್ನು ಸ್ವಚ್ಛ ಮಾಡಿ ಕೊಟ್ಟಿದ್ದೇನೆ. ಆದರೆ ಈಗ ಕಜೆ ರಸ್ತೆಯಲ್ಲಿ ಕೆಸರಿನಿಂದ ಸಂಚರಿಸಲಾಗದ ಸ್ಥಿತಿ ಇರುವಾಗ ಗ್ರಾ.ಪಂ.ನವರು ಎಲ್ಲಿ ಹೋದರು ಎಂದು ಪ್ರಶ್ನಿಸಿದರು.
ಗ್ರಾ.ಪಂ. ಸಹಾಯಕ ಲೆಕ್ಕಾಧಿಕಾರಿ ದೇವಪ್ಪ ನಾಯ್ಕ ಮನವಿ ಸ್ವೀಕರಿಸಿ ಅಗತ್ಯ ಕ್ರಮದ ಭರವಸೆ ನೀಡಿದರು. ಮನವಿ ಕೊಟ್ಟಿ ನಿಯೋಗದಲ್ಲಿ ಗ್ರಾಮಸ್ಥರಾದ ಶಬೀರ್ ಅಹಮ್ಮದ್, ಇಸಾಕ್, ಶರೀಕ್ ಅರಪ್ಪಾ, ಯೂಸುಫ್ ಬೇರಿಕೆ, ರಿಝ್ವಾನ್, ರಂಜಿತ್ ರೈ ಉಪಸ್ಥಿತರಿದ್ದರು.