ಪುಣಚ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚ ಹಾಗೂ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ಪುಣಚ ಇವರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸಂಭ್ರಮಾಚರಣೆ, ದೀಪೋತ್ಸವ ಹಾಗೂ ದೇವಸ್ಥಾನದ ವಾರ್ಷಿಕ ಬಲಿಯೇಂದ್ರ ಪೂಜೆ ಅ.೨೦ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಲಿದೆ.

ಸಾಯಂಕಾಲ ಪುಣಚ ಪರಿಯಾಲ್ತಡ್ಕ ಪೇಟೆಯಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಆಕರ್ಷಕ ವಯೋಲಿನ್ ಚೆಂಡೆ ವಾದನದ ಭವ್ಯ ಮೆರವಣಿಗೆ ದೇವಸ್ಥಾನಕ್ಕೆ ಸಾಗಿ ಬರಲಿದೆ. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಎಸ್.ಆರ್. ರಂಗಮೂರ್ತಿ ಸಭಾಧ್ಯಕ್ಷತೆ ವಹಿಸಲಿದ್ದು, ವಿವೇಕಾನಂದ ಮಹಾವಿದ್ಯಾಲಯದ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥೆ ವಿಜಯ ಸರಸ್ವತಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅಗ್ರಾಳ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪಿ.ಯು. ಕಾಲೇಜು ಉಪನ್ಯಾಸಕಿ ವಿದುಷಿ ಕಾವ್ಯ ಭಟ್ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಏಕಕಾಲದಲ್ಲಿ ೨೦೦೦ ಹಣತೆ ದೀಪದ ಪ್ರಜ್ವಲನೆ, ಹಾಗೂ ದೇವಸ್ಥಾನದ ವಾರ್ಷಿಕ ಬಲೀಂದ್ರ ಪೂಜೆ ನಡೆಯಲಿದೆ. ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ ಎಂದು ಮಹಿಷಮರ್ದಿನಿ ಸಿಂಗಾರಿ ಮೇಳದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.