ಸ್ವಾವಲಂಬನೆಯಿಂದ ಗುರಿ ಮುಟ್ಟಲು ಸಾಧ್ಯ – ಕ್ಯಾ| ಗಣೇಶ್ ಕಾರ್ಣಿಕ್
ಪುತ್ತೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2047ರ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳಲು ದೇಶವು ಆರ್ಥಿಕವಾಗಿ ಸಾಮಾಜಿಕವಾಗಿ ಆತ್ಮ ನಿರ್ಭರದ ಮೂಲಕ ಸ್ವಾವಲಂಬನೆಯಾದಾಗ ಗುರಿ ಮುಟ್ಟಲು ಸಾಧ್ಯ ಎಂದು ವಿಧಾನ ಪರಿಷತ್ತಿನ ಮಾಜಿ ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ ಹೇಳಿದರು.
ಬೊಳುವಾರಿನಲ್ಲಿರುವ ಪ್ರಗತಿ ಸಂಸ್ಥೆಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅ.18ರಂದು ನಡೆದ ಆತ್ಮನಿರ್ಭರ ಭಾರತದ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಪ್ರಗತಿಯಲ್ಲಿ ಯುವ ಜನತೆ ಅದರಲ್ಲೂ ವಿದ್ಯಾರ್ಥಿಗಳ ಪಾಲು ಇದೆ. ಅವರು ತಮ್ಮ ಸ್ವಂತಿಕೆಯ ಮೂಲಕ ಗುರಿಯ ಸಾಧನೆಯ ಕಡೆಗೆ ಇಷ್ಟಪಟ್ಟು ಕಲಿತು ಸ್ವಾವಲಂಬನೆಯ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಮಾಜಿ ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತ ಅಧಿಕಾರಿ ಹಾಗೂ ಪ್ರಾಂಶುಪಾಲರಾಗಿರುವ ಪ್ರೀತ ಹೆಗಡೆಯವರು ಉಪಸ್ಥಿತರಿದ್ದರು.
ಶಿವಕುಮಾರ್ ಕಲ್ಲಿಮಾರ್, ದಯಾನಂದ ಶೆಟ್ಟಿ ಉಜಿರೆಮಾರು, ನಗರಸಭಾ ಸದಸ್ಯೆ ದೀಕ್ಷಾ ಪೈ, ಸಂತೋಷ್ ಕೈಕಾರ, ನಾಗೇಂದ್ರ ಬಾಳಿಗ, ಮಣಿಕಂಠ, ಸುರೇಶ್ಚಂದ್ರ ರೈ, ನಿರಂಜನ್ ಸುಮಿತ್ ಭಟ್, ನಿತೀಶ್ ಮೊದಲಾದವರು ಭಾಗವಹಿಸಿದ್ದರು. ಯುವರಾಜ್ ಪೆರಿಯತ್ತೋಡಿ ಸ್ವಾಗತಿಸಿ, ಹರೀಶ್ ಬಿಜತ್ರೆ ವಂದಿಸಿದರು. ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.