ಪೆರಾಬೆ: ಇಲ್ಲಿನ ಗ್ರಾ.ಪಂ.ಅರಿವು ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ ನ.16ರಂದು ಬೆಳಿಗ್ಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ. ಮಾತನಾಡಿ, ಇಲ್ಲಿನ ಅರಿವು ಕೇಂದ್ರ ಉತ್ತಮ ಕಾರ್ಯಚಟುವಟಿಕೆಯನ್ನು ಹಮ್ಮಿಕೊಂಡಿದೆ. ಎಲ್ಲರೂ ಪುಸ್ತಕ ಪ್ರೇಮಿಗಳಾಗಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಬಾಲಚಂದ್ರ ಮುಚ್ಚಿಂತಾಯ ಅವರು ಮಾತನಾಡಿ, ಪುಸ್ತಕ ಓದುವ ಹವ್ಯಾಸ ಎಲ್ಲರೂ ಬೆಳೆಸಿಕೊಳ್ಳಬೇಕು. ಪುಸ್ತಕವು ನನ್ನ ಜೀವನ ಬದಲಿಸಿ ಅಧ್ಯಾಪಕರನ್ನಾಗಿ ಉತ್ತುಂಗದ ಶಿಖರಕ್ಕೆ ಏರಿಸಿದೆ. ಎಲ್ಲಾ ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಓದಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು, ಪುಸ್ತಕ ಓದುವುದರಿಂದ ಆರೋಗ್ಯ ಸಂಪತ್ತು, ನೆಮ್ಮದಿ ಸಿಗುತ್ತದೆ. ಓದುವುದರಿಂದ ಹಣ, ಕೀರ್ತಿ ಬಂದು ಸಮಾಜ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಕೆಎಸ್ಆರ್ಟಿಸಿ ನಿವೃತ್ತ ಅಧಿಕಾರಿ ಅಬ್ಬಾಸ್ ಕೋಚಕಟ್ಟೆ ಮಾತನಾಡಿ, ಗ್ರಾಮೀಣ ಗ್ರಂಥಾಲಯ ಜನ ಸಾಮಾನ್ಯರ ವಿಶ್ವ ವಿದ್ಯಾನಿಲಯ. ಪೆರಾಬೆ ಅರಿವು ಕೇಂದ್ರದ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಗ್ರಂಥಾಲಯ ಸೂರ್ಯನಂತೆ ಶೋಭಿಸಲಿ ಎಂದರು. ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಹರೀಶ್ಚಂದ್ರ ಅವರು ಮಾತನಾಡಿ, ಅರಿವು ಎಂದರೆ ಅಕ್ಷರ ಜ್ಞಾನ. ನಾವೆಲ್ಲರೂ ಪುಸ್ತಕ ಓದುವ ಹವ್ಯಾಸದ ಜೊತೆಗೆ ರಾಮಾಯಣ, ಮಹಾಭಾರತದಂತಹ ಮಹಾ ಗ್ರಂಥಗಳನ್ನು ಓದಬೇಕು ಎಂದು ಹೇಳಿದರು. ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಅಂಬರಾಜೆ, ಮಾಜಿ ಉಪಾಧ್ಯಕ್ಷ ಜನಾರ್ದನ ಶೆಟ್ಟಿ, ಮೋನಪ್ಪ ಗೌಡ ಅಗತ್ತಾಡಿ ಶುಭಹಾರೈಸಿದರು. ವಿದ್ಯಾರ್ಥಿಗಳಾದ ಚಾರ್ವಿ, ಸ್ಮೃತಿ, ಸಿಂಚನ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಬಂಧ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ಗ್ರಾ.ಪಂ.ಸದಸ್ಯೆ ಲೀಲಾವತಿ, ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ ಶೆಟ್ಟಿ ಕೇವಳ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ನಿರೂಪಿಸಿದರು. ಕೇಂದ್ರದ ಮೇಲ್ವಿಚಾರಕಿ ಜಯಕುಮಾರಿ ವಂದಿಸಿದರು. ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಸುಬ್ರಮಣ್ಯ ಎರ್ಮಾಳ, ಗಣೇಶ್ ರೈ ಬೇಳ್ಪಾಡಿ, ಅಬ್ಬಾಸ್ ಕೆ., ಪೆರಾಬೆ ಶಾಲಾ ಮುಖ್ಯ ಶಿಕ್ಷಕಿ ಸುಚೇತಾ ಕುಮಾರಿ, ಪ್ರಭಾಕರ ಶೆಟ್ಟಿ ಕೇವಳ ವಿವಿಧ ರೀತಿಯಲ್ಲಿ ಸಹಕರಿಸಿದರು.