ಉಪ್ಪಿನಂಗಡಿ : ದೇವನೊಲಿದರೆ ಕೊರಡು ತಾ ಚಿಗುರೊಡೆಯುವುದಯ್ಯ ಎಂಬಂತೆ ಸಿಮೆಂಟು ಜಲ್ಲಿ ಕಲ್ಲುಗಳಿಂದಾವೃತವಾದ ಸುಡು ಬಿಸಿಲಿನಲ್ಲಿಯೂ ಕಬ್ಬುವಿನ ಗಿಡವೊಂದು ಹುಲುಸಾಗಿ ಬೆಳೆಯುತ್ತಿರುವ ದೃಶ್ಯ ಉಪ್ಪಿನಂಗಡಿಯ ಹೆದ್ದಾರಿಯಲ್ಲಿ ಗೋಚರಿಸಿದೆ.
ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಎತ್ತರಿಸಿದ ರಸ್ತೆ ನಿರ್ಮಾಣವಾದ ಸ್ಥಳದ ಮತ್ತು ಸರ್ವೀಸ್ ರಸ್ತೆಯ ಮಧ್ಯೆ ಒಂದಷ್ಟು ಸಿಮೆಂಟು ಮಿಶ್ರಿತ ಜಲ್ಲಿ ಕಲ್ಲುಗಳು ರಾಶಿ ಬಿದ್ದಿವೆ. ಆ ರಾಶಿಯ ನಡುವೆ ಕಬ್ಬುವೊಂದು ಚಿಗುರೊಡೆದು ಹುಲುಸಾಗಿ ಬೆಳೆಯುತ್ತಿದ್ದು, ದೇವನೊಲುಮೆಯನ್ನು ಸಾದರ ಪಡಿಸುವಂತಿದೆ.
ನೆಟ್ಟು ಪೋಷಿಸಿದರೂ ನೆಟ್ಟಗೆ ಬೆಳೆಯದ ಪ್ರಸಂಗಗಳೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಕಬ್ಬು ಬೆಳೆಗೆ ಒಂದಿನಿತೂ ಯೋಗ್ಯವಲ್ಲದ ಸ್ಥಳದಲ್ಲಿ ಹುಲುಸಾಗಿ ಬೆಳೆಯುತ್ತಿರುವುದು ಜನತೆಯ ಮನಸ್ಸನ್ನು ಸೆಳೆಯುವಂತಿದೆ.
