ವಿಟ್ಲ:ಎಟಿಎಂ ಕೇಂದ್ರದ ಬಳಿ ಅಪರಿಚಿತ ವ್ಯಕ್ತಿಗಳಿಬ್ಬರು ಎಟಿಎಂ ಕಾರ್ಡ್ ಬದಲಾಗಿದೆ ಎಂದು ಹೇಳಿ ವ್ಯಕ್ತಿಯೋರ್ವರ ಎಟಿಎಂ ಕಾರ್ಡ್ ಪಡೆದುಕೊಂಡು 1.9 ಲಕ್ಷ ರೂ.ಡ್ರಾ ಮಾಡಿ ವಂಚಿಸಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡ್ಡಿದು ಉರಿಮಜಲು ಎಂಬಲ್ಲಿ ಬಾಡಿಗೆ ಮನೆಯಲ್ಲಿರುವ ಬೆಳ್ತಂಗಡಿ ಮುಂಡಾಜೆ ಕುಳೂರು ನಿವಾಸಿ ದಾಮೋದರ ಪೂಜಾರಿ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
‘ತನ್ನ ಪತ್ನಿ ಗೀತಾ ಹೊಂದಿರುವ ಎಟಿಎಂ ಕಾರ್ಡ್ ಮೂಲಕ ತಾನು ಹಣ ಡ್ರಾ ಮಾಡಲೆಂದು ನ.23ರಂದು ವಿಟ್ಲ ಕಸ್ಬಾ ಫಾತಿಮಾ ಬಿಲ್ಡಿಂಗ್ ನಲ್ಲಿರುವ ಎಸ್ ಬಿಐ ಎಟಿಎಂಗೆ ಹೋದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಎಟಿಎಂ ಕೇಂದ್ರದೊಳಗಿದ್ದರು. ತಾನು ಹಣ ಡ್ರಾ ಮಾಡಿ ಹೊರಗಡೆ ಬಂದಾಗ ಎಟಿಎಂ ಒಳಗಡೆ ಇದ್ದ ಅಪರಿಚಿತ ವ್ಯಕ್ತಿಗಳು ತನ್ನನ್ನು ಕರೆದು ಹಿಂದಿಯಲ್ಲಿ ಮಾತನಾಡುತ್ತಾ, ಎಟಿಎಂನ್ನು ಸರಿಯಾಗಿ ಕ್ಲೋಸ್ ಮಾಡುವಂತೆ ತಿಳಿಸಿದರು. ತಾನು ವಾಪಸ್ ಎಟಿಎಂ ಒಳಗೆ ಹೋಗಿ ನೋಡಿ ಬರುವಾಗ ಅದೇ ಅಪರಿಚಿತ ವ್ಯಕ್ತಿಗಳು ಎಟಿಎಂ ಕಾರ್ಡ್ ಬದಲಾಗಿದೆ ಎಂದು ಅವರಲ್ಲಿದ್ದ ಕಾರ್ಡ್ ನೀಡಿ ನನ್ನಲ್ಲಿದ್ದ ಕಾರ್ಡ್ ತೆಗೆದುಕೊಂಡಿದ್ದರು.ನಾನು ಮನೆಗೆ ಹೋಗಿ ರಾತ್ರಿ ಸಮಯ ಮೊಬೈಲ್ ನೋಡುವಾಗ, ಪತ್ನಿಯ ಎಟಿಎಂ ಖಾತೆಯಿಂದ 1.9 ಲಕ್ಷ ರೂ.ಡ್ರಾ ಆಗಿರುವ ಸಂದೇಶ ಬಂದಿರುತ್ತದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
