ಪುತ್ತೂರು:ಮಲ್ಲಿಗೆ ಕೃಷಿಗಾಗಿ ಸರ್ಕಾರದಿಂದ ಬರುವ ಸಬ್ಸಿಡಿಯಲ್ಲಿ ಪಾಲು ಕೊಡುವುದಾಗಿ ನಂಬಿಸಿ ಮಹಿಳೆಯೋರ್ವರಿಂದ ಹಂತ ಹಂತವಾಗಿ 70 ಲಕ್ಷ ರೂ. ಹಣವನ್ನು ಮೋಸದಿಂದ ಪಡೆದು ವಂಚಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಕಡಂಬು ಎಲ್ಲಾ ಲಾರೆನ್ಸ್ ಎಂಬವರ ಪತ್ನಿ ಬೀನಾ ರೋಡ್ರಿಗಸ್ (55)ದೂರು ನೀಡಿದವರು.ಫಿಲೋಮಿನಾ ಡಿ’ಸೋಜಾ ಎಂಬವರು ಆರೋಪಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಪರಿಚಯಸ್ಥರಾಗಿದ್ದು, 2024 ಅಕ್ಟೋಬರ್ ತಿಂಗಳಲ್ಲಿ ಆರೋಪಿಯು ಮಲ್ಲಿಗೆ ಕೃಷಿಗಾಗಿ ತಾನು ಸರ್ಕಾರದಿಂದ ಲೋನ್ ಪಡೆಯುತ್ತಿದ್ದು ಅದರಲ್ಲಿ ಹೆಚ್ಚಿನ ಸಬ್ಸಿಡಿ ಹಣ ಸಿಗುವುದರಲ್ಲಿ ಪಾಲು ಹಣವನ್ನು ನೀಡುವುದಾಗಿ ಹೇಳಿ ಸದ್ರಿ ಸಬ್ಸಿಡಿ ಹಣಕ್ಕಾಗಿ ಅರ್ಜಿ ಹಾಕಲು ಆರಂಭದಲ್ಲಿ ರೂ.30ಸಾವಿರ ಹಣವನ್ನು ಕಟ್ಟಬೇಕಾಗುತ್ತದೆ ಎಂದು ಹೇಳಿದ ಮೇರೆಗೆ ನಾನು 03-10-2024ರಂದು 30 ಸಾವಿರ ರೂ. ಹಣವನ್ನು ನೀಡಿದ್ದೆ.ನಂತರ ಆರೋಪಿಯು,ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಉದ್ಯೋಗ ಖಾತರಿಯಲ್ಲಿ 10 ಲಕ್ಷ ಕಟ್ಟಿದಲ್ಲಿ ಇನ್ನೂ 10 ಲಕ್ಷ ಹೆಚ್ಚುವರಿ ಸಾಲ ದೊರೆಯುತ್ತಿದ್ದು ಅದರಲ್ಲಿ 75ಶೇ.ಮನ್ನಾ ದೊರೆಯುತ್ತದೆ ಎಂದು ತನ್ನನ್ನು ನಂಬಿಸಿ ಸಬ್ಸಿಡಿ ಮೌಲ್ಯವನ್ನು 10 ಲಕ್ಷಕ್ಕೆ ಏರಿಸಲು ಹೆಚ್ಚುವರಿ ಹಣವನ್ನು ಪಾವತಿಸುವಂತೆ ಹೇಳಿದ್ದಲ್ಲದೇ ನಂತರದಲ್ಲಿ ಪ್ರತೀ ಸಲ ಒಂದೊಂದು ಕಾರಣವನ್ನು ಹೇಳುತ್ತಾ ಮಲ್ಲಿಗೆ ಕೃಷಿಗಾಗಿ ಸರ್ಕಾರದಿಂದ ಬರುವ ಸಬ್ಸಿಡಿಯಲ್ಲಿ ಪಾಲು ಹಣ ಕೊಡಿಸುವುದಾಗಿ ನಂಬಿಸಿ ಹಣವನ್ನು ಪಡೆದುಕೊಂಡು ನಂತರ ಹೆಚ್ಚು ಸಬ್ಸಿಡಿಯಲ್ಲಿ ಹೆಚ್ಚು ಹಣವನ್ನು ಕೊಡುವುದಾಗಿ ಮತ್ತು ಲೋನ್ ಪಡೆದ ಬಡ್ಡಿಯನ್ನು ಹಿಂತಿರುಗಿಸುತ್ತೇನೆಂದು ನಂಬಿಸಿ 03-10-2024ರಿಂದ ಇದೇ ನ.19ರವರೆಗೆ ಹಂತ ಹಂತವಾಗಿ ಒಟ್ಟು 70 ಲಕ್ಷ ರೂ.ತನ್ನಿಂದ ಮೋಸದಿಂದ ಪಡೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 318(2), 318(4) BNS 2023. ಯಂತೆ ಪ್ರಕರಣ(ಆ.ಕ್ರ176/2025) ದಾಖಲಾಗಿರುತ್ತದೆ.
