ಸುಳ್ಯ:ದಲಿತ ದೌರ್ಜನ್ಯ ಪ್ರಕರಣ ಆರೋಪಿಗಳು ದೋಷಮುಕ್ತ

0

ಕಾಣಿಯೂರು:ಸುಳ್ಯದಲ್ಲಿ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ದೋಷ ಮುಕ್ತಿಗೊಳಿಸಿ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

“ದಿನಾಂಕ 7-8-2018ರಂದು ತಮ್ಮ ಕಾವೇರಿ ಕಲ್ಯಾಣ ಮಂಟಪ ಸಂಪರ್ಕಿಸುವ ರಸ್ತೆಗೆ ಪಕ್ಕದ ನಿವಾಸಿಗಳಾದ ಎಲಿಕ್ಕಳ ಜಯಶೀಲ ಮತ್ತು ಶುಭ ಎಂಬವರು ತೆಂಗಿನ ಮರದ ಕೊಂಬೆ, ಇನ್ನಿತರ ವಸ್ತುಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು.

ಇದನ್ನು ಪ್ರಶ್ನಿಸಿದಾಗ ಆರೋಪಿಗಳಿಬ್ಬರೂ ಸಮಾನ ಉದ್ದೇಶದಿಂದ ಬೈದು ಜೀವ ಬೆದರಿಕೆ ಒಡ್ಡಿ ಜಾತಿನಿಂದನೆ ಮಾಡಿದ್ದಾರೆ” ಎಂದು ಆರೋಪಿಸಿ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಗಬ್ಬಲ್ಕಜೆ ಶಿವ ನಾಯ್ಕ ಎಂಬವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.ಪುತ್ತೂರು ಉಪವಿಭಾಗದ ಅಂದಿನ ಪೊಲೀಸ್ ಉಪ ಅಧೀಕ್ಷಕ ದಿನಕರ್ ಶೆಟ್ಟಿಯವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಡಿ.ಅವರು, ಪ್ರಕರಣದಲ್ಲಿ ಸುಮಾರು 7 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಬಳಿಕ ವಾದ-ಪ್ರತಿವಾದಗಳನ್ನು ಆಲಿಸಿ, ಆರೋಪಿಗಳ ವಿರುದ್ಧದ ದೋಷಾರೋಪಣೆಯನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿರುತ್ತದೆ ಎಂಬ ಕಾರಣ ನೀಡಿ ಇಬ್ಬರು ಆರೋಪಿಗಳನ್ನೂ ದೋಷ ಮುಕ್ತಗೊಳಿಸಿ ನ.27ರಂದು ತೀರ್ಪು ನೀಡಿದ್ದಾರೆ.

ಆರೋಪಿತರ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್‌ಪ್ರಸಾದ್ ನಿಡ್ಯಮಲೆ ವಾದಿಸಿದ್ದರು.

LEAVE A REPLY

Please enter your comment!
Please enter your name here