ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ – 574241, ಮೊ: 9448158112
ಗಯಾಪದ ಕ್ಷೇತ್ರ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಪ್ರಯಾಗ ಸದೃಶ ಮಹಿಮಾನ್ವಿತ ಸ್ಥಳವೆಂದೂ, ಮೋಕ್ಷ ಕ್ಷೇತ್ರವೆಂದು ಖ್ಯಾತಿ ಪಡೆದಿರುವ ಸ್ವಯಂಭೂಚೈತನ್ಯ ಮೂರ್ತಿಯೆಂದು ಕೀರ್ತಿತನಾಗಿರುವ, 700 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಕ್ಷೇತ್ರವು ತಪಸ್ವಿಗಳ ತಪೋ ಭೂಮಿಯೆಂದು ಶ್ರೀ ಶ್ರೀ ವಾದಿರಾಜ ಸ್ವಾಮಿಗಳಂತಹ ಯತಿವರ್ಯರು ಸಂದರ್ಶಿಸಿರುವ ಜನ ಶ್ರುತಿ ಇರುವ, ನೇತ್ರಾವತಿ ಕುಮಾರಧಾರ ನದಿಗಳ ಪವಿತ್ರ ಸಂಗಮ ಸ್ಥಾನವಾದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಇಡೀ ತಾಲೂಕಿಗೆ ಒಂದು ಪುಣ್ಯ ಕ್ಷೇತ್ರವಾಗಿದೆ. ‘ಮಹಾಕಾಳಿ ಅಬ್ಬೆ ಎಂದು ಜನರಿಂದ ಪೂಜಿಸಲ್ಪಡುವ ಮಹಾಕಾಳಿ ಮಾತೆಯ ದಿವ್ಯ ಸನ್ನಿಧಿ ಇಲ್ಲಿದೆ. ಗಣಪತಿ, ಭೈರವ, ನಾಗಶಕ್ತಿ ಸಾನಿಧ್ಯ ಇಲ್ಲಿನ ಮಹಿಮೆಯನ್ನು ಹೆಚ್ಚಿಸಿದೆ. ಇಲ್ಲಿ ನಡೆಯುವ ಮೂರು ಮಖೆ ಕೂಟವು ಸಹಸ್ರಾರು ಭಾವುಕ ಭಕ್ತರನ್ನು ಆಕರ್ಷಿಸುತ್ತಿದೆ. ಮಹಾಕಾಳಿಯ ವರ್ಣರಂಜಿತ ನೇಮೋತ್ಸವ ಅದ್ಭುತ ರಮ್ಯವಾಗಿದೆ. ನಾಡಿನ ಪ್ರಮುಖ ಕಾರಣಿಕ ದೈವಗಳಾದ ಕಲ್ಲುರ್ಟಿ, ಕಲ್ಕುಡದ ಆವಾಸ ಸ್ಥಾನ ಕೂಡ ಈ ಸಂಗಮ ಪರಿಸರವೇ ಆಗಿರುವುದು ಗಮನಾರ್ಹವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಪುರಾಣ ಪ್ರಸಿದ್ಧ ಸಂಗಮ ಕ್ಷೇತ್ರ ಇದಾಗಿದ್ದು ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನೇತ್ರಾವತಿ ಹಾಗೂ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ಹುಟ್ಟುವ ಕುಮಾರಧಾರ ನದಿಗಳು ಹರಿದು ಬಂದು ಉಪ್ಪಿನಂಗಡಿಯಲ್ಲಿ ಸಂಗಮಿಸಿ ಮುಂದೆ ಅರಬ್ಬೀ ಸಮುದ್ರ ಸೇರುತ್ತದೆ. ಈ ಎರಡು ನದಿಗಳಿಂದ ಆವೃತ್ತವಾದ ಕಿನಾರೆಯಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನವಿದೆ. ಸಹಸ್ರಲಿಂಗೇಶ್ವರ ಸ್ವಯಂ ಭೂ ಉದ್ಭವ ಲಿಂಗವಾಗಿ ಇಲ್ಲಿ ನೆಲೆ ನಿಂತನೆಂದು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಿದೆ. ಸಹಸ್ರಲಿಂಗೇಶ್ವರ ಪ್ರಧಾನ ದೇವರಾಗಿರುವ ದೇವಳದಲ್ಲಿ ಮಹಾಕಾಳಿ ಗ್ರಾಮದೇವತೆಯಾಗಿದ್ದಾಳೆ. ದೇವಳದ ಹಿಂಭಾಗದಲ್ಲಿ ಮಹಾಕಾಳಿಯ ಗುಡಿಯಿದೆ. ದಕ್ಷಿಣ ಭಾರತದಲ್ಲಿ ಸಹಸ್ರಲಿಂಗೇಶ್ವರ, ದಕ್ಷಿಣೇಶ್ವರ, ಸರ್ವೇಶ್ವರನೆಂದೂ, ಮಹಾಕಾಳಿ, ದಕ್ಷೀಣೇಶ್ವರಿ ಎಂದು ಕರೆಯಲ್ಪಡುತ್ತಾರೆ. ಸಹಸ್ರಲಿಂಗೇಶ್ವರ ಕ್ಷೇತ್ರವು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಜೈನ ಆಡಳಿತಕ್ಕೊಳಪಟ್ಟಿತ್ತು. ಕಜೆಕ್ಕಾರು ಬೀಡುವಿನಿಂದ ಸಹಸ್ರಲಿಂಗೇಶ್ವರ ಸ್ವಾಮಿಯ ಭಂಡಾರ ಬಂದು ಇಲ್ಲಿ ನೇಮೋತ್ಸವ ನಡೆಯುವುದಾಗಿರುತ್ತದೆ. ವರ್ಷದ ಮಾಘ ಮಾಸದಲ್ಲಿ ಮಖೆ ಕೂಡ ಜಾತ್ರಾ ಉತ್ಸವ ನಡೆಯುತ್ತದೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪದಾಳ, ಉಪ್ಪಿನಂಗಡಿ, ಪುತ್ತೂರು ದ.ಕ.
ದಕ್ಷಿಣ ಕಾಶಿ ಗಯಾಪದ ಕ್ಷೇತ್ರವೆಂದು ಹೆಸರಾದ ಉಪ್ಪಿನಂಗಡಿಯ ಪೂರ್ವಕ್ಕೆ ಪಟ್ಟಣದ ಹೊರ ವಲಯದಲ್ಲಿ ನಿತ್ಯ ಹರಿದ್ವರ್ಣದ ಸಸ್ಯರಾಶಿಯ ನಡುವೆ ಕಂಗೊಳಿಸುವ ಕ್ಷೇತ್ರ-ಪದಾಳ ಶ್ರೀ ಮಯೂರ ವಾಹನ ಬಾಲಸುಬ್ರಹ್ಮಣ್ಯ ದೇವಸ್ಥಾನ.
ಈ ಕ್ಷೇತ್ರಕ್ಕೆ ಒಂದು ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಈ ಕ್ಷೇತ್ರದ ಸ್ಥಾಪನೆ ಯನ್ನು ಉದಾರ ಧ್ಯೇಯ್ಯೋದ್ದೇಶಗಳನ್ನು ಹೊಂದಿದ್ದ ಅಂದಿನ ಆಳರಸರಾಗಿದ್ದ ಕದಿಕ್ಕಾರು ಬೀಡಿನ ಜೈನ ಅರಸರು ಗ್ರಾಮ ಸಂರಕ್ಷಣೆಯ ಹಾಗೂ ಪುತ್ರ ಸಂತಾನ ಪ್ರಾಪ್ತಿಗಾಗಿ ಕ್ಷಿಪ್ರ ವರಪ್ರದಾಯಕ, ಸಕಲ ಇಷ್ಟಾರ್ಥಾದಾಯಕ, ದೇವ ಸೇನಾನಿ, ಮಯೂರ ವಾಹನ ಶ್ರೀ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ ಸ್ಕಂದನಿಗೆ ಪ್ರಿಯವಾದ ಕಾನನ ನಡುವೆ ಇಂದಿನ ಪದಾಳ ದಲ್ಲಿ ಶ್ರೀ ದೇವರನ್ನು ಪ್ರತಿಷ್ಠಾಪಿಸಿ ಕ್ಷೇತ್ರ ನಿರ್ಮಾಣಕ್ಕೆ ಕಾರಣ ಪುರುಷರಾದರು.
ಕಾಲಾಂತರದಲ್ಲಿ ಕದಿಕ್ಕಾರು ಬೀಡಿನ ಅರಸೊತ್ತಿಗೆ ಅಂತ್ಯವಾದಾಗ ಬೀಡಿನ ಒಡೆತನವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿತು. ಅರಸರಿಂದ ಸ್ಥಾಪನೆಯಾದ ದೇವಸ್ಥಾನ ಹಾಗೂ ಪರಿಸರದ ಜಮೀನುಗಳ ಒಡೆತನವು ವಿವಿಧ ಕಾಲಘಟ್ಟದಲ್ಲಿ ಬೇರೆ ಬೇರೆ ಜನರ ಕೈಯಲ್ಲಿದ್ದು ಪೂಜಾದಿ ಕಾರ್ಯಗಳು
ನಡೆಯುತ್ತಿತ್ತು. ಕ್ರಿ.ಶ. ೧೯೨೩ರಲ್ಲಿ ಅಗ್ನಿ ಅನಾಹುತವುಂಟಾಗಿ ದೇವಾಲಯದ ಪೂಜಾದಿ ಕಾರ್ಯಗಳಿಗೆ ವಿಘ್ನ ಉಂಟಾದದ್ದಲ್ಲದೆ, ಸಾನಿಧ್ಯವು ಕಾಲನ ಗರ್ಭಕ್ಕೆ ಸಂದು ಹೋಗಿ ಗಿಡ ಬಳ್ಳಿಗಳು ಬೆಳೆದು ಕಾಡು ಪಾಲಾಯಿತು. ೧೯೯೩ರಲ್ಲಿ ಊರ ಹತ್ತು ಸಮಸ್ತರು ಸೇರಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಲಾಯಿತು.
ಶ್ರೀಕ್ಷೇತ್ರ ಪದಾಳವನ್ನು ಕದಿಕ್ಕಾರು ಬೀಡಿನ ಅರಸರು ಸ್ಥಾಪಿಸಿದ್ದು, ಪ್ರಕೃತ ಬೀಡಿನ ಒಡೆತನವು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ್ದಾಗಿಯೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಅನುಮತಿ ಹಾಗೂ ಮಾರ್ಗದರ್ಶನದಲ್ಲಿಯೇ ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವಂತೆ ಕಂಡುಬಂದ ಮೇರೆಗೆ ಪೂಜ್ಯ ಧರ್ಮಾಧಿಕಾರಿ ರಾಜಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದ ಪಡೆದು ಅವರ ನಿರ್ದೇಶನದಂತೆ ಮುಂದಿನ ಕ್ರಮಕ್ಕೆ ಉದ್ಯುಕ್ತವಾದ ಜೀರ್ಣೋದ್ದಾರ ಸಮಿತಿಯು ನಿರಂತರ ಶ್ರಮದೊಂದಿಗೆ ರೂಪಾಯಿ ಇಪ್ಪತ್ತೈದು ಲಕ್ಷಕ್ಕೂ ಮಿಕ್ಕಿದ ವೆಚ್ಚದಲ್ಲಿ ಊರ ಹತ್ತು ಸಮಸ್ತರ ಅಮೂಲ್ಯವಾದ ಸಹಕಾರ ಹಾಗೂ ಅಸಂಖ್ಯ ಮಾನವ ದಿನಗಳ ಶ್ರಮದಾನದೊಂದಿಗೆ ಸುಂದರ ಸುಸಜ್ಜಿತ ಶಿಲ್ಪ ಶಾಸ್ತ್ರಕ್ಕನುಸಾರವಾಗಿರುವ ದೇವಾಲಯವನ್ನು ಪುನನಿರ್ಮಿಸಿದ್ದು, ಅಲೌಕಿಕ ಕ್ಷೇತ್ರ ಸನ್ನಿಧಾನ ಕಂಗೊಳಿಸುತ್ತಿದೆ.
ಪ್ರಕೃತ ಊರಿನ ಹತ್ತು ಸಮಸ್ತರಿಗೆ ಸೇರಿದ ಈ ದೇವಾಲಯದ ಅಡಿಸ್ಥಳ ಸಹಿತ ಪರಿಸರದಲ್ಲಿ ೦.೯೬ ಎಕ್ರೆ ಜಮೀನು ಹೊಂದಿರುವುದನ್ನು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ “ಪರಂಬೋಕು” ಎಂದು ಪಹಣೆಯಲ್ಲಿ ದಾಖಲಿಸಲಾಗಿದೆ.
ಆಡಳಿತ ಸಮಿತಿ: ಆಡಳಿತ ಮೊಕ್ತೇಸರರು-ನಡುಸಾರ ಜಯರಾಮ್ ಭಟ್ಟ, ಮೊಕ್ತೇಸರರು-ವಡ್ಯದಗಯ ಭೀಮ ಭಟ್ಟ, ಪ್ರವೀಣ ಕುಮಾರ ಕದಿಕ್ಕಾರು ಬೀಡು, ಚಿಕ್ಕಪ್ಪ ಶೆಟ್ಟಿ ಕಜೆಕ್ಕಾರು, ಬೊಳ್ಳಾವು ಶಂಕರನಾರಾಯಣ ಭಟ್ಟ, ಮಣಿಕ್ಕಳ ಜಗದೀಶ ರಾವ್, ಬಲ್ಯಾರಬೆಟ್ಟು ಪದ್ಮನಾಭ ಗೌಡ, ಸದಾನಂದ ಶೆಟ್ಟಿ, ಕಿಂಡೋವು, ನಡುಸಾರ ಉದಯಶಂಕರ ಭಟ್ಟ 9480009407.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಉಪ್ಪಿನಂಗಡಿ, 08251-251011
ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ಅತೀ ಪ್ರಾಚೀನ ದೇವಾಲಯಗಳಲ್ಲೊಂದು ಎಂದು ತಿಳಿದು ಬರುತ್ತದೆ. ಋಷಿ ಮೂಲ ಮತ್ತು ನದಿ ಮೂಲ ಇವುಗಳನ್ನು ತಿಳಿಯಲು ಪ್ರಯತ್ನಿಸಬಾರದೆಂಬ ಆರ್‍ಯೋಕ್ತಿಯಂತೆ ಈ ದೇವಾಲಯದ ಉಗಮವು ಕಾರಣಾಂತರ ಗಳಿಂದ ನಿಗೂಢವಾಗಿಯೇ ಉಳಿದಿದ್ದರೂ, ಸುಮರು ಮೂರು ಶತಮಾನಗಳಷ್ಟು ಹಿಂದೆ ಈ ದೇವಾಲಯದ ಸ್ಥಾಪನೆಯಾಗಿರ ಬಹುದೆಂದು ಊಹಿಸಬಹುದು. ಶ್ರೀ ಲಕ್ಷ್ಮೀ ದೇವಿಯನ್ನು ಇತರ ಪರಿವಾರ ದೇವತೆಗಳೊಂದಿಗೆ ಒಳ ಪ್ರದಕ್ಷಿಣಾ ವರ್ತುಲದ ಬಲ ಕೋಪದಲ್ಲಿ ಪ್ರತಿಷ್ಠಿಸುವ ಸಂಪ್ರದಾಯವನ್ನು ಮುರಿದು ಆಕೆಗೂ ಸಮಾನ ಸ್ಥಾನವನ್ನು ಕಲ್ಪಿಸಿ, ಶ್ರೀನಿವಾಸ ದೇವರ ಪಕ್ಕದಲ್ಲಿ ಪ್ರತ್ಯೇಕ ಗರ್ಭಗುಡಿ, ಮಂಟಪ, ದ್ವಾರ ಮುಖ ಮಂಟಪದ ಕ್ರಮವು ಇಲ್ಲಿಯ ಪ್ರಧಾನ ವೈಶಿಷ್ಟ್ಯ. ಇಲ್ಲಿ ಪ್ರತಿ ಶುಕ್ರವಾರ ಶ್ರೀನಿವಾಸ ದೇವರಿಗೆ ಪ್ರತಿ ಶುಕ್ರವಾರ ಪಂಚಾಮೃತ ಪುಳಕಾಭಿಷೇಕ, ಲಕ್ಷ್ಮೀ ದೇವಿಗೆ ಪ್ರತೀ ಶುಕ್ರವಾರ ಕುಂಕುಮಾರ್ಚನೆ ಸೇವೆ ನಡೆಯುತ್ತದೆ.
ಆಡಳಿತ ಮಂಡಳಿ: ಉಪೇಂದ್ರ ಪೈ ಅಧ್ಯಕ್ಷರು, ಹೆಚ್. ವಾಸುದೇವ ಪ್ರಭು, ಕೆ. ದಾಮೋದರ ಪ್ರಭು, ಎಸ್. ಗಣಪತಿ ನಾಯಕ್, ಕೆ. ರಾಮಚಂದ್ರ ನಾಯಕ್ ಸದಸ್ಯರು.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ & ಕಲ್ಕುಡ ದೈವಸ್ಥಾನ ಉಪ್ಪಿನಂಗಡಿ ಗಯಾಪದ ಕ್ಷೇತ್ರ ದಕ್ಷಿಣ ಕಾಶಿ-574241. 08251-251015
* ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಉಪ್ಪಿನಂಗಡಿ-574241. 08251-251011 www.slvtuppinangady.org
* ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪದಾಳ ಉಪ್ಪಿನಂಗಡಿ 251670
* ಶ್ರೀ ಆದಿಶಕ್ತಿ ಶ್ರೀ ರಾಜರಾಜೇಶ್ವರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪುಳಿತ್ತಡಿ
* ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಪೇಯಡ್ಕ ಉಪ್ಪಿನಂಗಡಿ
* ಶ್ರೀ ವೀರಾಂಜನೇಯ ದೇವಸ್ಥಾನ ರಥಬೀದಿ ಉಪ್ಪಿನಂಗಡಿ
* ಶ್ರೀ ನಂದಿಕೇಶ್ವರ ಭಜನಾ ಮಂದಿರ ನಂದಿ ನಗರ ಉಪ್ಪಿನಂಗಡಿ,
* ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿ, ಉಪ್ಪಿನಂಗಡಿ ಮೊ: 9449271519, 9448726178.