ಅಷ್ಟಮಠಗಳಲ್ಲೊಂದಾದ ಶ್ರೀ ಕಾಣಿಯೂರು ಮಠ, ಕಾಣಿಯೂರು ಅಂಚೆ, ಪುತ್ತೂರು – 574 328. ಫೋನ್: 284250
ಶ್ರೀ ಮಧ್ವಾಚಾರ್ಯರು ಶ್ರೀ ಕೃಷ್ಣನ ಅರ್ಚನೆ ಹಾಗೂ ಮಧ್ವ ತತ್ತ್ವದ ಪ್ರಚಾರಕ್ಕಾಗಿ ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿ, ಬಾಲ ಸನ್ಯಾಸಿಗಳನ್ನು ನೇಮಿಸಿದರು. ಈ ಅಷ್ಟಮಠಗಳಲ್ಲಿ ಒಂದು ಶ್ರೀ ಕಾಣಿಯೂರು ಮಠ.
ಪುತ್ತೂರು ತಾಲೂಕಿನ ಕಾಣಿಯೂರಿನಲ್ಲಿ ಉಡುಪಿಯ ಶ್ರೀ ಕಾಣಿಯೂರು ಮಠದ ಮೂಲಮಠವಿದೆ. ಪುತ್ತೂರು-ಸುಬ್ರಹ್ಮಣ್ಯ ಮಾರ್ಗದಲ್ಲಿ ಸುಮಾರು ೨೫ ಕಿ.ಮೀ. ದೂರದ ಕಾಣಿಯೂರಿನಲ್ಲಿ ಕೇಂದ್ರ ಭಾಗದಿಂದ ಅರ್ಧ ಫರ್ಲಾಂಗ್ ದೂರದಲ್ಲಿ ಶ್ರೀ ಮಠ ಕಾಣಸಿಗುತ್ತದೆ. ಪ್ರಾಚೀನ ಕುಸುರಿ ಕೆತ್ತನೆಗಳ ಬೃಹತ್ ಮರದ ಕಂಬಗಳಿಂದ, ಪುರಾತನ ಮಾದರಿಯಲ್ಲಿಯೇ ವಿಶಾಲ ಹರಹು ಹೊಂದಿ ಆಸ್ತಿಕ ಜನರನ್ನು ಕೈಬೀಸಿ ಕರೆಯುತ್ತಿದೆ.
ಪ್ರತೀ ಹದಿನಾರು ವರ್ಷಕ್ಕೊಮ್ಮೆ ಉಡುಪಿ ಶ್ರೀಕೃಷ್ಣನ ಕೈಂಕರ್ಯವನ್ನು ನಿರ್ವಹಿಸುವ ಪುಣ್ಯ ಕಾರ್ಯವಾದ ‘ಪರ್ಯಾಯ’ ಕಾಣಿಯೂರು ಮಠಕ್ಕೆ ಲಭಿಸುತ್ತದೆ. ಪ್ರಕೃತ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ೨೦೧೪ನೇ ಜನವರಿಯಿಂದ ೨೦೧೬ನೇ ಜನವರಿ ವರೆಗೆ ಪರ್ಯಾಯ ಉತ್ಸವವನ್ನು ನಡೆಸಲಿದ್ದಾರೆ. ಎರಡು ವರ್ಷ ಪರ್ಯಾಯವನ್ನು ಮಠದ ಸ್ವಾಮೀಜಿಯವರು ನಿರ್ವಹಿಸಬೇಕಾಗುತ್ತದೆ. ಪರ್ಯಾಯಾವಧಿ ಮುಗಿಸಿದ ಬಳಿಕ ಸ್ವಾಮೀಜಿಯವರು ಕಾಣಿಯೂರಿನಲ್ಲಿ ‘ಮಹಾನಡಾವಳಿ’ ಉತ್ಸವ ನಡೆಸುತ್ತಾರೆ. ೧೬ ವರ್ಷಕ್ಕೊಮ್ಮೆ ಈ ಧರ್ಮ ನಡಾವಳಿ ನಡೆಯುತ್ತದೆ. ಶ್ರೀ ಕಾಣಿಯೂರು ಮಠದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ಪಶ್ಚಿಮಾಭಿಮುಖವಾಗಿರುವ ಗುಡಿಯಿದೆ. ಅಲ್ಲದೇ, ಲಕ್ಷ್ಮೀನರಸಿಂಹ ಹಾಗೂ ಮುಖ್ಯಪ್ರಾಣ ದೇವರ ಆರಾಧನೆಯಾಗುತ್ತಿದೆ. ಶ್ರೀ ಮಠದ ಅಧೀನದಲ್ಲಿ ಶ್ರೀ ಅಮ್ಮನವರ ದೇವಸ್ಥಾನ ಹಾಗೂ ಉಳ್ಳಾಕುಲು ದೈವಗಳ ತಾಣವೂ ಇದೆ.
ಶ್ರೀ ಅಮ್ಮನವರ ದೇವಸ್ಥಾನ: ಪ್ರತೀ ಶುಕ್ರವಾರ, ಸಂಕ್ರಮಣದಂದು ಪೂಜೆ ನಡೆಯುತ್ತದೆ. ಅಲ್ಲದೆ ವರ್ಷದ ಫೆಬ್ರವರಿ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಮಠದ ಕಪಿಲ ದನ ಪ್ರತೀ ದಿನ ಹುತ್ತಕ್ಕೆ ಹಾಲೆರೆಯುತ್ತಿದ್ದು ಗದ್ದೆಯನ್ನು ಉಳುತ್ತಿರುವಾಗ ದೇವಿಯ ಮೂರ್ತಿ ಸಿಕ್ಕಿತೆಂಬ ನಂಬಿಕೆ ಊರ ಹಿರಿಯದ್ದಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ.
ಶ್ರೀ ಉಳ್ಳಾಕುಲು ದೈವ: ಸಾವಿರಾರು ವರ್ಷಗಳ ಹಿಂದೆ ಘಟ್ಟದಿಂದ ಬೆಳ್ಳಿಕುದುರೆ, ಬೆಳ್ಳಿ ಆನೆಯನೇರಿ ಬಂದ ದೈವಗಳಾದ ಅಣ್ಣ-ತಮ್ಮಂದಿರು ಕಾಣಿಯೂರಿನಲ್ಲಿ ನೆಲೆಯಾದ ಬಗ್ಗೆ ಪಾಡ್ದನದ ನುಡಿಗಟ್ಟಿನಲ್ಲಿ ಉಲ್ಲೇಖವಿದೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿನ ಕೆಲವು ಪ್ರದೇಶಗಳಾದ ನೇರೋಳ್ತಡ್ಕ, ಪೆರ್ಲೋಡಿ, ಕಂಡೂರು, ನೇರಳಕಟ್ಟೆ ಮುಂತಾದ ಉಲ್ಲೇಖ ಪಾಡ್ದನ ನುಡಿಗಟ್ಟಿನಲ್ಲಿವೆ. ಎಲ್ಯಾರ್ ಮತ್ತು ಮಲ್ಲಾರ್ ದೈವ ಎಂದು ಕರೆಯಲ್ಪಡುವ ದೈವಗಳು ಸುಳ್ಯ ಮಿತ್ತೂರು ನಾಯರ್ ದೈವದೊಡಗೂಡಿ ಚೊಕ್ಕಾಡಿ, ಎಡಮಂಗಲ, ಕಸ್ಬಾಡಿ, ಕಲ್ಲಮಾಡದ ಮೂಲಕ ಬಂದು ಕಾಣಿಯೂರಿನಲ್ಲಿ ಮುಕ್ಕಾಲು-ಮೂರು ಪಟ್ಟ ಜಾಗದಲ್ಲಿ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ನೆಲೆಯೂರುತ್ತಾರೆ. ಫೆಬ್ರವರಿ ತಿಂಗಳಲ್ಲಿ ಉಳ್ಳಾಕುಲು ದೈವಗಳ ಜಾತ್ರೆ ನಡೆಯುತ್ತದೆ. ಶೀಘ್ರದಲ್ಲಿ ಶ್ರೀ ಕಾಣಿಯೂರು ಮಠದ ಜೀರ್ಣೋದ್ಧಾರ ಕಾರ್ಯ ಪ್ರಾರಂಭವಾಗಲಿದೆ.
ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರ: ಸರಿಸುಮಾರು ೧೯೭೩ರಲ್ಲಿ ಮುಳಿಹುಲ್ಲಿನ ಛಾವಣಿಯ ಭಜನಾ ಮಂದಿರ ಕಾಣಿಯೂರಿನಲ್ಲಿ ಸ್ಥಾಪನೆಯಾಯಿತು. ಸುಸಜ್ಜಿತವಾದ ಸಭಾಂಗಣ, ಅಡುಗೆಕೋಣೆ ಹಾಗೂ ಎಲ್ಲಾ ಸೌಕರ್ಯ ಹೊಂದಿರುವ ಕಲ್ಯಾಣ ಮಂಟಪವೂ ಇಲ್ಲಿದೆ.
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು ಬೊಬ್ಬೆಕೇರಿ ಅಂಚೆ, ಕಾಣಿಯೂರು, ಪುತ್ತೂರು-574320
ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದಲ್ಲಿರುವ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಮಾರು ೮೦೦ ವರ್ಷಗಳ ಪುರಾತನ ಪರಂಪರೆ ಇದೆ. ಬಲ್ಲಾಳ ಅರಸರುಗಳ ಕಾಲದಲ್ಲಿ ಈ ದೇಗುಲ ಕಟ್ಟಲಾಯಿತೆಂದು ಜ್ಯೋತಿಷಿ ಶ್ರೀ ರಾಘವ ಪೊದುವಾಳ್ ಉಜಿರೆ ಇವರ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿರುತ್ತದೆ.
ಬಡ ಕೃಷಿಕರು, ಕೂಲಿ ಕಾರ್ಮಿಕರೆ ಹೆಚ್ಚು ಸಂಖ್ಯೆಯಲ್ಲಿರುವ ಸುಮಾರು ೩೨೦ ಮನೆಗಳು ಈ ದೇವಸ್ಥಾನದ ಕೂಡುಕಟ್ಟಿಗೆ ಸೇರಿವೆ. ಈ ದೇವಸ್ಥಾನಕ್ಕೆ ಯಾವುದೇ ಆಸ್ತಿ-ಪಾಸ್ತಿ ಉಂಬಳಿಗಳಿಲ್ಲ. ಕೂಡುಕಟ್ಟಿನ ಜನತೆ ಈಗಾಗಲೇ ಸುಮಾರು ೧೫ ಲಕ್ಷಕ್ಕಿಂತಲೂ ಹೆಚ್ಚು ರೂಪಾಯಿಗಳನ್ನು ಜೀರ್ಣೋದ್ಧಾರದ ಕಾರ್ಯಗಳಿಗೆ ವಿನಿಯೋಗಿಸಿರುತ್ತಾರೆ. ಪ್ರತಿ ವರ್ಷ ಫೆಬ್ರವರಿ ೨೫ರಂದು ವಾರ್ಷಿಕ ಜಾತ್ರೆ ನಡೆಯುತ್ತದೆ.
ಅನುವಂಶಿಕ ಮೊಕ್ತೇಸರ-ಹರಿಯಪ್ಪ ಗೌಡ ನಾವೂರು, ಆಡಳಿತ ಮೊಕ್ತೇಸರರು-ಶಿವಾನಂದ ಟಿ. ಪುಣ್ಚತ್ತಾರು-9449102961.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪುಣ್ಚತ್ತಾರು, ಬೊಬ್ಬೆಕೇರಿ ಅಂಚೆ ಕಾಣಿಯೂರು
* ಶ್ರೀ ಶಿರಾಡಿ ಮತ್ತು ಚಾಮುಂಡೇಶ್ವರಿ ದೈವಸ್ಥಾನ ಏಲಡ್ಕ ಕಾಣಿಯೂರು ಗ್ರಾಮ & ಅಂಚೆ
* ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರ ಕಾಣಿಯೂರು (ಪರಮೇಶ್ವರ ಅನಿಲ ಅಧ್ಯಕ್ಷರು) 9480200025
* ಶ್ರೀ ಹರಿ ಭಜನಾ ಮಂದಿರ ಪುಣ್ಚತ್ತಾರು ಬೊಬ್ಬೆಕೇರಿ ಅಂಚೆ, ಕಾಣಿಯೂರು ಪುತ್ತೂರು (ರಾಮಣ್ಣ ಗೌಡ) 9480763585
* ಶ್ರೀ ಉಳ್ಳಾಕುಲು ದೈವಸ್ಥಾನ ಕಾಣಿಯೂರು ಪುತ್ತೂರು
* ರಾಮಾಂಜನೇಯ ಭಜನಾಮಂದಿರ ದೋಳ್ಪಾಡಿ (ಉಮೇಶ) 9481143013
* ಶ್ರೀ ಶಿರಾಡಿ ರಾಜನ್ ದೈವಸ್ಥಾನ ಮರಕಡ
* ಬ್ರಹ್ಮ ಬೈದರ್ಕಳ ಗರಡಿ ದೋಳ್ಪಾಡಿ