ಶ್ರೀ ಪೆರಣಬೈಲು ಶ್ರೀ ಶಿರಾಡಿ ದೈವಸ್ಥಾನ ಮೊ: 9141502633, 9632924208
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ೧೩ ಕಿ.ಮೀ. ಬೆಂಗಳೂರು ಕಡೆಗೆ ಚಲಿಸಿದಾಗ ಸಿಗುವುದೇ ಗೋಳಿತ್ತೊಟ್ಟು ಎಂಬ ಪುಟ್ಟ ಗ್ರಾಮ.
ಈ ಗ್ರಾಮದ ಶಾಲೆಯ ಬಳಿ ಪಶ್ಚಿಮಕ್ಕೆ ಗುಡ್ಡದಲ್ಲಿ ಶ್ರೀ ಶಿರಾಡಿ ದೈವಸ್ಥಾನ, ನೇಮೋತ್ಸವದ ಕೊಡಿನಾಡು ಇದೆ. ದೈವದ ಭಂಡಾರವು ಪೆರಣ ಬೈಲಿನ ಪೆರಣಗುತ್ತಿನ ಮನೆಯಲ್ಲಿದೆ. ಶಿರಾಡಿ ದೈವ, ಶ್ರೀ ಧರ್ಮದೇವತೆ, ರುದ್ರಚಾಮುಂಡಿ, ಭೂಮಿ ದೈವ, ಬ್ರಹ್ಮ ಚಾಮುಂಡಿ, ನಾಗ ರಕ್ತೇಶ್ವರಿ, ನಾಗಬ್ರಹ್ಮ, ಪರಿವಾರ ದೇವತೆಗಳಾದ ಭೂಮಿ ಪಂಜುರ್ಲಿ, ಕಲ್ಲುರ್ಟಿ, ಮಂತ್ರದೇವತೆ, ಗುಳಿಗಾದಿ ಮೊದಲಾದ ದೈವಗಳನ್ನು ಇಲ್ಲಿ ಆರಾಧಿಸಲಾಗುತ್ತದೆ. ಶ್ರೀ ವೆಂಕಟರಮಣ ದೇವರ ಸಾನಿಧ್ಯವೂ ಇದ್ದು, ಭೂಮಿ ದೈವ, ಬ್ರಹ್ಮ ಚಾಮುಂಡಿ, ಬ್ರಹ್ಮೆರ್ ದೈವಕ್ಕೆ ಪೆರಣಗುತ್ತಿನ ಚಾವಡಿಯ ಎದುರು ನೇಮ ನಡೆಯುವುದು. ಪೆರಣ ಮನೆಗೆ ಸಂಬಂಧಪಟ್ಟಂತೆ ಇರುವ ದೊಡ್ಡ ಕಂಬಳಗದ್ದೆಗೆ ವರ್ಷಂಪ್ರತಿ ಉಳುಮೆ ಮಾಡಿ ಹಾಳೆಗಿಡ ಹಾಕಿ ಗದ್ದೆಕೋರಿ ನೇಮೋತ್ಸವ ನಡೆಯುವುದು. ಶಿರಾಡಿ ದೈವದ ನೇಮೋತ್ಸವವು ಸುಮಾರು ಇನ್ನೂರೈವತ್ತು ವರ್ಷಗಳಿಂದ ನಡೆದು ಬಂದಿದೆ.
ಪೆರಣಗುತ್ತಿನ ಚಾವಡಿಯಲ್ಲಿ ವರ್ಷಂಪ್ರತಿ ಚೌತಿಯಲ್ಲಿ ತಂಬಿಲ ಹಾಗೂ ಮತ್ತಿತರ ಹರಕೆ ತಂಬಿಲಗಳು, ದೀಪಾವಳಿ ತಂಬಿಲ, ಪತ್ತನಾಜೆಯಲ್ಲಿ ಕಾಲಾವಧಿ ತಂಬಿಲ ನಡೆಯುತ್ತದೆ. ಪೆರಣ ಚಾವಡಿಯಲ್ಲಿ ಗದ್ದೆಕೋರಿಯ ಬಿರ್ಮೆರ್ ದೈವಕ್ಕೆ ಅಕ್ಟೋಬರ್ ಕೊನೆಯ ವಾರ ಗದ್ದೆಗೆ ಬಾಳೆ ಹಾಕಿ ನೇಮೋತ್ಸವ ನಡೆಯುತ್ತದೆ. ನೆಮೋತ್ಸವದ ಮುಂದಿನ ದಿವಸ ರಾತ್ರಿ ‘ಕಂಚಿದರಿ ಹಿಡಿದು ಗದ್ದೆವಸಯ’ ಎಂಬ ಕಾರ್ಯಕ್ರಮವಿದೆ. ಪೆರಣ ಚಾವಡಿಯಿಂದ ಕಂಚಿದರಿ ಹಿಡಿದು ಗದ್ದೆಯಲ್ಲಿ ೧೦೧ ಕೋಲು ಬತ್ತಿ ಹೊತ್ತಿಸಿ ಗದ್ದೆಗೆ ಬಲಿ ಬಂದು ಚಾವಡಿಗೆ ಹಿಂತಿರುಗುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.
ಹಿಂದಿನ ಸಂತತಿ ಪ್ರಕಾರ ಪಾಂಡಿ ಗೌಡರು ಮತ್ತು ಕುಜುಂಬ ಗೌಡರು ಇದ್ದರು. ಗುತ್ತಿನಮನೆಯ ಯಜಮಾನರೇ ಎಲ್ಲಾ ದೈವಗಳ ಅರ್ಚಕರಾಗಿರುತ್ತಾರೆ. ವರ್ಷಕ್ಕೆ ಮೂರು ಸಲ ಬೇರೆ ಬೇರೆ ದೈವಗಳ ಕಾರ್ಯಕ್ರಮಗಳು ನಡೆಯುತ್ತವೆ. ಸತ್ಯ ಪ್ರಮಾಣ ಚಾವಡಿಯಲ್ಲಿ ಸತ್ಯ ಧರ್ಮ ನ್ಯಾಯ ನೀತಿ ನಿಯಮ ವಿಚಾರ ಆಚಾರಗಳೇ ಈ ದೈವಗಳ ಆಧಾರವಾಗಿದೆ. ಹಿಂದಿನ ಕಾಲದಲ್ಲಿ ೧೨ ವರ್ಷಗಳಿಗೊಮ್ಮೆ ಎಲ್ಲಾ ದೈವಗಳಿಗೆ ಒಟ್ಟಿಗೆ ‘ಜಾಲಾಟ’ ಆಗುತ್ತಿತ್ತಂತೆ. ಈಗ ಜಾಲಾಟದ ಬದಲು ‘ಚಾವಡಿಯ ನೇಮ’ ನಡೆಯುತ್ತಿದೆ. ಕುಟುಂಬದ ಯಜಮಾನ ಓಡ್ಯಪ್ಪ ಗೌಡ ಪೆರಣರವರನ್ನು ಮುಂದಿಟ್ಟುಕೊಂಡು ಪ್ರಸ್ತುತ ವಿಶ್ವನಾಥ ಗೌಡ ಪೆರಣ ಗುತ್ತುರವರ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ವಿನಾಯಕ ಬೆಟ್ಟ ಗೋಳಿತ್ತೊಟ್ಟು ಅಂಚೆ ಪುತ್ತೂರು ದ.ಕ -೫೭೪೨೨೯ ಮೊ: ೭೨೫೯೯೯೨೦೩೯
* ಶ್ರೀ ಶಿರಾಡಿ ದೈವಸ್ಥಾನ ಮುರಿಯೇಳುಬೈಲು
*ಶ್ರೀ ಶಿರಾಡಿ ದೈವಸ್ಥಾನ ಡೆಬ್ಬೆಲಿ
* ಶ್ರೀ ಅರಂತಬೈಲು ಪಟ್ಟದ ಪಂಜುರ್ಲಿ
* ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರ ಶಾಂತಿನಗರ ಗೋಳಿತೊಟ್ಟು