ಪಡುವನ್ನೂರು ಗ್ರಾಮ

ಶ್ರೀ ಮಹಾವಿಷ್ಣು ದೇವಸ್ಥಾನ ಕುತ್ಯಾಳಪಾದೆ, ಪಡುವನ್ನೂರು, ಪುತ್ತೂರು, ದ.ಕ.


ಸುಮಾರು 900 ವರ್ಷಗಳ ಹಿಂದೆ ಮಹಾ ತಪಸ್ವಿಯೊಬ್ಬರು ಕುತ್ಯಾಳದಲ್ಲಿ ಮಹಾವಿಷ್ಣು ದೇವರನ್ನು ಪ್ರತಿಷ್ಠಾಪಿಸಿದರೆಂದು ಪೂರ್ವ ಚರಿತ್ರೆಯಿಂದ ತಿಳಿದು ಬರುತ್ತದೆ. ಆ ದೇವಾಲಯದ ಪರಿಸರದಲ್ಲಿ ಹರಿಯುತ್ತಿದ್ದ ಹೊಳೆಯೊಂದರ (ತೋಡು) ಪಕ್ಕದಲ್ಲಿಯೇ ಆ ತಪಸ್ವಿಯು ಗುಹೆಯೊಂದರಲ್ಲಿ ವಾಸವಾಗಿದ್ದರೆಂದೂ, ಈಗಲೂ ಅಲ್ಲಿ ಗುಹೆಯ ಕುರುಹುಗಳಿವೆ ಎಂದು ತಿಳಿದು ಬಂದಿದ್ದರೂ ಎಲ್ಲಿ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಮಹಾತಪಸ್ವಿಯು ತನ್ನ ತಪಸ್ಸಿನ ಫಲವನ್ನು ಧಾರೆ ಎರೆದು ಮಹಾವಿಷ್ಣು ದೇವರನ್ನು ಪ್ರತಿಷ್ಠಾಪಿಸಿದ ಫಲವಾಗಿಯೇ ಈ ಕ್ಷೇತ್ರವು ಕಾರಣಿಕ ಕ್ಷೇತ್ರವಾಗಿ ಈ ಹಿಂದೆ ಬೆಳಗಿತ್ತು. ಇದೀಗ ಮತ್ತೆ ಬೆಳಗುತ್ತಿದೆ.
ಈ ಹಿಂದೆ ಬಲ್ಲಾಳರ ಆಡಳಿತ ಕಾಲದಲ್ಲಿ ಈ ಕ್ಷೇತ್ರವು ಕಾರಣಿಕ ಕ್ಷೇತ್ರವಾಗಿ ಗ್ರಾಮ ದೇವಾಲಯ ವಾಗಿ ಅಲ್ಲದೆ ಈ ಪರಿಸರದ ಗ್ರಾಮಗಳ ಮಹಾವಿಷ್ಣು ಆಲಯ ವಾಗಿ ಪ್ರಖ್ಯಾತಿ ಹೊಂದಿತ್ತು. ಕಲ್ಲೂರಾಯ (ಇದೀಗ ಪರಪ್ಪೆಯಲ್ಲಿದ್ದಾರೆ) ಮನೆತನದವರು ಈ ಕ್ಷೇತ್ರದಲ್ಲಿ ಪೂಜಾದಿ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರೆಂದು ತಿಳಿದು ಬಂದಿದ್ದರೂ ಈ ಕ್ಷೇತ್ರವು ಯಾವ ಮನೆತನದವರ ಅಧೀನದಲ್ಲಿತ್ತೆಂಬುವುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ. ಕಲಹ ಸಂಬಂಧವಾಗಿ ಈ ಕ್ಷೇತ್ರವು ನಾಶವಾಯಿತೆಂಬುವುದು ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದ ವಿಚಾರವಾಗಿದೆ. ಬ್ರಿಟಿಷರ (ವಿದೇಶಿಯರ) ದಾಳಿಯ ವೇಳೆ ಈ ಕ್ಷೇತ್ರವು ನಾಶವಾಗಿರುವ ಸಾಧ್ಯತೆ ಅಧಿಕವಾಗಿದೆ. ಕುತ್ಯಾಳ ದೇವಾಲಯಕ್ಕೆ ೧.೫ ಕೀ.ಮೀಗಳಷ್ಟು ದೂರದಲ್ಲಿರುವ ಈಶ್ವರಮಂಗಲದಲ್ಲಿ ಬ್ರಿಟಿಷ್ ಸೈನ್ಯವು ಬೀಡುಬಿಟ್ಟ ಕಾರಣ ಅಲ್ಲಿಗೆ ಪಾಳ್ಯತ್ತಡ್ಕವೆಂಬ ಹೆಸರು ಬಂದಿತ್ತೆಂದು ತಿಳಿದು ಬರುವಾಗ ಬ್ರಿಟಿಷರ ದಾಳಿಯಿಂದಲೇ ಈ ಕ್ಷೇತ್ರವು ನಾಶವಾಗಿರಬಹುದೆಂಬುವುದು ಸ್ಪಷ್ಟ. ಆಡಳಿತ ಕಲಹವೂ ದೇವಾಲಯದ ನಾಶಕ್ಕೆ ಕಾರಣವಾಗಿರುವ ಸಾಧ್ಯತೆಗಳು ಇವೆ ಎಂದು ಊಹಿಸಲಾಗಿದೆ. ಆಡಳಿತ ಮೊಕ್ತೇಸರರು – ವಿನೋದ್ ಆಳ್ವ ಕುತ್ಯಾಳ

ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ ಈಶ್ವರಮಂಗಲ, ಧರ್ಮಶ್ರೀ ಪ್ರತಿಷ್ಠಾನ (ರಿ.), ಹನುಮಗಿರಿ. ಫೋನ್: 08251-289444

ಪಡುವನ್ನೂರು ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮಗಳ ಗಡಿಭಾಗದಲ್ಲಿ “ಹನುಮಗಿರಿ” ನಾಮಾಂಕಿತಗೊಂಡ ಆಂಜನೇಯ ಕ್ಷೇತ್ರ ಇದೆ. ಮಹಾಶಕ್ತಿ ಸ್ವರೂಪಿಯಾಗಿರುವ ಶ್ರೀ ಆಂಜನೇಯ ಸ್ವಾಮಿ ನೆಲೆ ನಿಂತ ಪುಣ್ಯ ಸನ್ನಿಧಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರವೇ ಈಶ್ವರಮಂಗಲದ ಹನುಮಗಿರಿ ಪ್ರಸ್ತುತ ವಿಶಾಲವಾದ ಸಭಾಭವನವನ್ನು ಹೊಂದಿರುವುದು ಕ್ಷೇತ್ರದ ಹೆಗ್ಗಳಿಕೆಯನ್ನು ವೃದ್ಧಿಸಿದೆ.
ವಿಶ್ವದಲ್ಲೇ ಅತೀ ದೊಡ್ಡದಾದ ಎಂಬ ಖ್ಯಾತಿಗೆ ಪಾತ್ರವಾದ ಸುಮಾರು ೧೩ ಅಡಿ ಎತ್ತರದ ಶ್ರೇಷ್ಠ ಕೃಷ್ಣ ಶಿಲೆಯಲ್ಲಿ ಕೆತ್ತಿದ ಪಂಚಮುಖಿ ಆಂಜನೇಯ ಏಕ ಶಿಲಾ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದಲ್ಲದೇ ರಾಮಾಯಣ ಕಥೆಗಳನ್ನು ವಿವರಣೆ ನೀಡುವ ಸಲುವಾಗಿ ವಿವರಣಾ ಫಲಕಗಳ ಸಮೇತ ಶಿಲಾ ಕಲಾ ಕೆತ್ತನೆಯ ಸೊಗಡು ಇಲ್ಲಿ ಅನಾವರಣಗೊಂಡಿದೆ. ನಿಸರ್ಗದತ್ತ ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿರುವ ಆಂಜನೇಯ ಜೀವನದ ಪುಣ್ಯ ಕಥಾ ಪ್ರಸಂಗಗಳು, ರಾಮ-ಹನುಮರ ವಿಗ್ರಹಗಳು ಇವೆ.
ಪಂಚಮುಖಿ ಆಂಜನೇಯ: ಹನುಮಂತ, ನರಸಿಂಹ, ವರಾಹ, ಹಯಗ್ರೀವ ಮತ್ತು ಗರುಡ ಈ ಐದು ಮುಖಗಳನ್ನು ಹೊಂದಿರುವ ಇಲ್ಲಿನ ಆಂಜನೇಯ ವಿಗ್ರಹದೊಂದಿಗೆ ಸಂಜೀವಿನಿ ಉದ್ಯಾನವನವಿರುವುದು ವಿಶೇಷವಾಗಿದೆ. ಶಾಲಾ ಮಕ್ಕಳು, ಯುವಜನತೆ ಮತ್ತು ಸಮಾನಾಸಕ್ತಿ ಆಸ್ತಿಕ ಬಂಧುಗಳಿಗೆ ಸನಾತನ ಸಂಸ್ಕೃತಿಯ ಅರಿವು ಮೂಡಿಸುವ ಜೀವನಾನುಷ್ಠಾನಗೊಳಿಸುವ, ವ್ಯಕ್ತಿತ್ವ ವಿಕಸಕ್ಕೆ ಪೂರಕ ಕಾರ್‍ಯಕ್ರಮಗಳು ಇಲ್ಲಿ ನಿರಂತರವಾಗಿ ಜರಗುತ್ತದೆ.
ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ವಿಚಾರಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ರಾಮ=ಹನುಮರ ಪುಣ್ಯ ಚರಿತೆಯ ಪಠಣ, ಮನನ, ಸ್ಮರಣ ಚಟುವಟಿಕೆಗಳನ್ನು ಕ್ಷೇತ್ರದಲ್ಲಿ ನಡೆಸಲಾಗುತ್ತದೆ. ಸಂಕೀರ್ತನೆ, ಭಜನೆ, ಪ್ರವಚನ, ಪಾರಾಯಣಗಳಿಗೆ ಅವಕಾಶವಿದೆ. ರಾಮ-ಆಂಜನೇಯರ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸುವಂತೆ ಮಾಡುವ ಮತ್ತು ಸನ್ಮಾರ್ಗ ಪ್ರವೃತ್ತರಾಗಿ ಮುನ್ನಡೆಯುವಂತೆ ಮಾರ್ಗದರ್ಶನ ನೀಡುವ ಚಿಂತನ-ಮಂಥನಗಳಿಗೆ ಇಲ್ಲಿ ಅವಕಾಶವಿದೆ.
ವಿಶ್ವದಲ್ಲಿ ಅತೀ ಎತ್ತರವಾದ ೨೨ ಅಡಿ ಎತ್ತರದ ಕೃಷ್ಣಶಿಲೆಯಲ್ಲಿ ರಚಿಸಲಾದ ಕೋದಂಡ ರಾಮನ ವಿಗ್ರಹ ಇಲ್ಲಿ ಪ್ರತಿಷ್ಠಾಪನೆಯಾಗಿದೆ. ಕ್ಷೇತ್ರದಲ್ಲಿ ಶನಿದೋಷ ನಿವಾರಣೆಗಾಗಿ, ಮುಖ್ಯ ಪ್ರಾಣ ಪೂಜೆ( ಶನಿಪೂಜೆ) ನಡೆಯುವುದು ಇಲ್ಲಿಯ ವಿಶೇಷಗಳಲ್ಲೊಂದು. ಶ್ರೀ ಕ್ಷೇತ್ರದಲ್ಲಿ ಸಮಾಜದ ತೀರ ಹಿಂದುಳಿದ ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಉಚಿತ ವಸತಿ, ಆಹಾರ, ಶಿಕ್ಷಣ, ಆರೋಗ್ಯ ಇತ್ಯಾದಿ ವೆಚ್ಚವನ್ನು ಸಂಸ್ಥೆ ಭರಿಸುತ್ತದೆ.
ಪುತ್ತೂರಿನಿಂದ ಸುಳ್ಯ ಮಾರ್ಗವಾಗಿ ಚಲಿಸಿದರೆ ೧೭ ಕಿ.ಮಿ ದೂರದಲ್ಲಿ ಕಾವು ಎಂಬ ಸ್ಥಳ ಸಿಗುತ್ತದೆ ಅಲ್ಲಿಂದ ದಕ್ಷಿಣಕ್ಕೆ ೫ ಕಿ.ಮಿ ದೂರದಲ್ಲಿ ಈಶ್ವರಮಂಗಲ ಪೇಟೆ ಸಿಗುತ್ತದೆ. ಈಶ್ವರಮಂಗಲ ವಿದ್ಯಾಸಂಸ್ಥೆಗಳ ಒತ್ತಿನಲ್ಲಿ ಬಡಗು ಪಾರ್ಶ್ವದಲ್ಲಿ ಕೊನೆತೋಟ. ಪಡುವನ್ನೂರು ಗ್ರಾಮದ ಗಡಿಭಾಗದಲ್ಲಿ “ಹನುಮಗಿರಿ”ನಾಮಾಂಕಿತಗೊಂಡ ಆಂಜನೇಯ ಕ್ಷೇತ್ರ ಇದೆ.
ಆಡಳಿತ ಧರ್ಮದರ್ಶಿ-ನನ್ಯ ಅಚ್ಚುತ ಮೂಡೆತ್ತಾಯ, ಮಹಾಪೋಷಕರು-ಜಿ.ಕೆ. ಮಹಾಬಲೇಶ್ವರ ಭಟ್ ಕೊನೆತೋಟ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸುಳ್ಯಪದವು
* ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನ ಪಡುಮಲೆ
* ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಶಬರಿನಗರ ಸುಳ್ಯಪದವು
* ಶ್ರೀ ರಕ್ತೇಶ್ವರಿ ದೈವಸ್ಥಾನ ಕನ್ನಡ್ಕ, 9535858996, 289302
* ಶ್ರೀ ಧೂಮಾವತಿ ದೈವಸ್ಥಾನ ಗೆಜ್ಜೆಗಿರಿ ನಂದನ ಹಿತ್ತಿಲು ಪಡುಮಲೆ
* ಶ್ರೀ ಕೊರಗ ತನಿಯ ದೈವಸ್ಥಾನ ಪೂಜಾರಿಮೂಲೆ ಪಡುವನ್ನೂರು
ಕುತ್ಯಾಳ ಹೊಸಮನೆ ಕುಟುಂಬ ದೈವಸ್ಥಾನ, ಪಡುವನ್ನೂರು ಗ್ರಾಮ, ಈಶ್ವರಮಂಗಲ ಅಂಚೆ, ಪುತ್ತೂರು ದ.ಕ. 9611202515, 9448529775