ಶಿಥಿಲಾವಸ್ಥೆಯಲ್ಲಿರುವ ಭಕ್ತಕೋಡಿ ಶಾಲೆಗೆ ಶಿಕ್ಷಣಾಧಿಕಾರಿ ಭೇಟಿ

0
  • ಹೊಸ ಕಟ್ಟಡ ನಿರ್ಮಾಣಕ್ಕೆ ಎಲ್ಲ ವಿಧದ ಪ್ರಯತ್ನಗಳಾಗುತ್ತಿದೆ-ಲೋಕೇಶ್

ಪುತ್ತೂರು: ಶಿಥಿಲಾವಸ್ಥೆಯಲ್ಲಿರುವ ಸರ್ವೆ ಗ್ರಾಮದ ಭಕ್ತಕೋಡಿ ಸರಕಾರಿ ಹಿ.ಪ್ರಾ.ಶಾಲೆಗೆ ಜ.24೪ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಅವರು ಭೇಟಿ ನೀಡಿ ಶಾಲಾ ಪರಿಸ್ಥಿತಿಗಳ ಬಗ್ಗೆ ವೀಕ್ಷಣೆ ಮಾಡಿದರು. ಕುಸಿತ ಕಾಣುವ ಭೀತಿಯಲ್ಲಿರುವ ಶಾಲಾ ಕೊಠಡಿಯನ್ನು ಹಾಗೂ ಶಾಲಾ ಸುತ್ತಮುತ್ತ ವೀಕ್ಷಿಸಿದ ಶಿಕ್ಷಣಾಧಿಕಾರಿಯವರು ಶಾಲಾ ಶಿಕ್ಷಕರಿಂದ ಹಾಗೂ ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಚರಣ್ ಕುಮಾರ್ ಅವರಿಂದ ವಿವಿಧ ಮಾಹಿತಿಯನ್ನು ಪಡೆದುಕೊಂಡರು.


ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣಾಧಿಕಾರಿ ಲೋಕೇಶ್ ಅವರು ಈ ಕಟ್ಟಡದ ಪರಿಸ್ಥಿತಿ ಬಗ್ಗೆ ನನಗೆ ತಿಳಿದಿದೆ. ನಾನು ಇಲ್ಲಿಗೆ ಬರುವಾಗ ಅಲ್ಪ ತಡವಾದರೂ ಇಲ್ಲಿನ ಶಾಲೆಯನ್ನು ನಿರ್ಲಕ್ಷಿಸಿಲ್ಲ. ನನಗೂ ಶಾಲೆಯ ಬಗ್ಗೆ, ಮಕ್ಕಳ ಬಗ್ಗೆ ಕಾಳಜಿ ಇದೆ. ಕ್ಷೇತ್ರ ಶೀಕ್ಷಣಾಧಿಕಾರಿಯಾಗಿರುವ ಕಾರಣ ಎಲ್ಲಾ ಶಾಲೆಗಳ ಜವಾಬ್ದಾರಿ ಇರುವುದರಿಂದ ಭೇಟಿ ನೀಡುವ ಅಲ್ಪ ವ್ಯತ್ಯಾಸಗಳಾಗುತ್ತದೆ ಎಂದು ಅವರು ಹೇಳಿದರು.

ಇಲ್ಲಿನ ಶಾಲೆ ಬೀಳುವ ಹಂತಕ್ಕೆ ತಲುಪಿರುವ ವಿಚಾರ ತಿಳಿದ ಕೂಡಲೇ ನೀವು ಇಲ್ಲಿಗೆ ಭೇಟಿ ನೀಡಬೇಕಿತ್ತು ಎಂದು ಸ್ಥಳೀಯ ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಹೇಳಿದರು. ಸಮಸ್ಯೆ ಬಿಗಡಾಯಿಸಿದ ಸಂದರ್ಭದಲ್ಲಿ ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಧೈರ್ಯ ತುಂಬಿ ಹೋಗಿದ್ದರೆ ಮತ್ತು ನೀವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೇಳಿದ್ದರೆ ಪೋಷಕರಿಗೆ, ಎಸ್.ಡಿ.ಎಂ.ಸಿಯವರಿಗೆ ಸಮಾಧಾನ ಆಗುತ್ತಿತ್ತು ಮತ್ತು ಸಮಸ್ಯೆ ಇಷ್ಟೊಂದು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ ಎಂದು ಕಮಲೇಶ್ ಎಸ್.ವಿ ಹೇಳಿದರು.

ನಾನು ಇಲ್ಲಿಗೆ ಬಾರದೇ ಇದ್ದರೂ ಇಲ್ಲಿನ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದೆ ಮತ್ತು ಇಲ್ಲಿಗೆ ಆಗಬೇಕಾದ ಕಟ್ಟಡದ ವಿಚಾರದಲ್ಲಿ ಮುತುವರ್ಜಿ ವಹಿಸಿ ನನ್ನಿಂದಾಗುವ ಪ್ರಯತ್ನವನ್ನು ಮಾಡಿದ್ದೆ ಎಂದು ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು.

ಶಾಸಕರೊಂದಿಗೆ ಮಾತನಾಡಿದ್ದೇನೆ:
ಈಗಾಗಲೇ ಶಾಸಕರ ಜೊತೆಗೂ ಈ ಶಾಲೆಯ ವಿಚಾರವಾಗಿ ಚರ್ಚೆ ಮಾಡಿದ್ದೇವೆ, ಇನ್ನೊಮ್ಮೆ ಶಾಸಕರ ಜೊತೆ ಮಾತನಾಡುತ್ತೇನೆ ಎಂದು ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು.

ಶಿಕ್ಷಣ ಸಂಯೋಜಕ ಹರಿಪ್ರಸಾದ್, ಭಕ್ತಕೋಡಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಪೂಜಾರಿ ಕೈಪಂಗಳದೋಳ, ಶಾಲಾ ಮುಖ್ಯಶಿಕ್ಷಕಿ ಗೀತಾ ಕುಮಾರ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಅನಂತ್ ವಂದಿಸಿದರು.

ರೂ. 98.36 ಲಕ್ಷದ ಎಸ್ಟಿಮೇಟ್:
7ಕೊಠಡಿಗಳನ್ನೊಳಗೊಂಡ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆಂದು ರೂ. 98.36 ಲಕ್ಷದ ಎಸ್ಟಿಮೇಟ್ ಮಾಡಲಾಗಿದ್ದು ಡಿಡಿಪಿಐ ಅವರಿಗೆ ಸಲ್ಲಿಸಲಾಗುವುದು. ಅವರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸುತ್ತಾರೆ ಎಂದ ಲೋಕೇಶ್ ಅವರು ನೂತನ ಕಟ್ಟಡ ಇಲ್ಲಿ ನಿರ್ಮಾಣವಾಗಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಧೈರ್ಯ ತುಂಬಿದ ಬಿಇಓ:
ಬಿಇಓ ಲೋಕೇಶ್ ಅವರು ಶಾಲಾ ಮಕ್ಕಳ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ಮಕ್ಕಳೇ ನೀವು ಭಯಪಡಬೇಡಿ, ನಿಮಗೆ ಉತ್ತಮವಾದ ಕಟ್ಟಡ, ಕೊಠಡಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳಲಿದೆ. ಉತ್ತಮವಾಗಿ ಕಲಿತು ಪರೀಕ್ಷೆ ಬರೆಯಬೇಕು. ಯಾವುದೇ ಕಾರಣಕ್ಕೂ ಆತಂಕ ಬೇಡ, ನಿಮ್ಮ ಜೊತೆ ನಾವೆಲ್ಲಾ ಇದ್ದೇವೆ ಎಂದು ಹೇಳಿ ಮಕ್ಕಳಿಗೆ ಧೈರ್ಯ ತುಂಬಿದರು.

LEAVE A REPLY

Please enter your comment!
Please enter your name here