ಬೋಳೋಡಿಯಲ್ಲಿ ಕೆಎಂಎಫ್ ಫೀಡ್ ಫ್ಯಾಕ್ಟರಿ ನಿರ್ಮಾಣ ಆಗಲೇಬೇಕು – ಕೆದಂಬಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

0

ಪುತ್ತೂರು: ಉದ್ಯೋಗ ಸೃಷ್ಟಿಸುವ ಮಹತ್ವಾಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿರುವ ಸರಕಾರಿ ಜಾಗದಲ್ಲಿ ನಿರ್ಮಾಣವಾಗಲಿರುವ ಕೆಎಂಎಫ್ ಫೀಡ್ ಫ್ಯಾಕ್ಟರಿಗೆ ಅರಣ್ಯ ಇಲಾಖೆಯಿಂದ ಅಡ್ಡಿಯಾಗುತ್ತಿದ್ದು, ಫ್ಯಾಕ್ಟರಿ ನಿರ್ಮಾಣವಾಗಲಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಕಾರಣವನ್ನಿಟ್ಟುಕೊಂಡು ಇಲಾಖೆ ಅಡ್ಡಿ ಪಡಿಸುತ್ತಿದೆ.ಆದರೆ ಈ ಜಾಗ ಗೋಮಾಳದ ಜಾಗವಾಗಿದೆ. ಈಗಾಗಲೇ ಫ್ಯಾಕ್ಟರಿಗೆ 34 ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ಅಳತೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಇದಕ್ಕೆ ಅಡ್ಡಿ ಪಡಿಸದೇ ಉದ್ಯೋಗ ಸೃಷ್ಟಿಸುವ ಫ್ಯಾಕ್ಟರಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೆದಂಬಾಡಿ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಆಗ್ರಹಿಸಿದರು. ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್‌ನ   ಮೇಲಂತಸ್ತಿನ ಸಭಾಂಗಣದಲ್ಲಿ ಫೆ.9ರಂದು ನಡೆಯಿತು.

 

ಅರಣ್ಯ ಇಲಾಖೆಯ ಮಾಹಿತಿ ಸಂದರ್ಭದಲ್ಲಿ ನಾರಾಯಣ ಪೂಜಾರಿ ಕುರಿಕ್ಕಾರರವರು ವಿಷಯ ಪ್ರಸ್ತಾಪಿಸಿ, ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ ನಿರ್ಮಾಣವಾಗಲಿರುವ ಕೆಎಂಎಫ್ ಫೀಡ್ ಫ್ಯಾಕ್ಟರಿಗೆ ಅರಣ್ಯ ಇಲಾಖೆ ಇದು ತನ್ನ ಜಾಗ ಎಂದೇಳಿಕೊಂಡು ಅಡ್ಡಿ ಪಡಿಸುತ್ತಿರುವ ಬಗ್ಗೆ ತಿಳಿದುಬಂದಿದೆ. ಉದ್ಯೋಗ ಸೃಷ್ಟಿಸುವ ಉದ್ದೇಶವನ್ನಿಟ್ಟುಕೊಂಡು ಫ್ಯಾಕ್ಟರಿ ನಿರ್ಮಾಣವಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಾಮಾಜಿಕ ಅರಣ್ಯ ಇಲಾಖಾಧಿಕಾರಿ ಇದು ದಾಖಲೆಗಳ ಪ್ರಕಾರ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಇದೆ ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳು ಈ ಬಗ್ಗೆ ಮಾಹಿತಿ ಕೊಡುತ್ತಾರೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಪ್ರತಿಕ್ರಿಯೆ ನೀಡಿ, ಇದು ಗೋಮಾಳ ಜಾಗವಾಗಿದೆ. ಇದರಲ್ಲಿ ನೆಡುತೋಪು ರಚಿಸಲು ಅರಣ್ಯ ಇಲಾಖೆಗೆ ಅನುಮತಿ ನೀಡಲಾಗಿತ್ತು ಅದರಂತೆ 2021 ರಲ್ಲಿ ನೆಡುತೋಪು ಕಟಾವು ಮಾಡಲಾಗಿದೆ. ನೆಡುತೋಪು ಕಟಾವು ಮಾಡಿದ್ದರೂ ಪಂಚಾಯತ್‌ಗೆ ಸಲ್ಲತಕ್ಕ ರೂ.10 ಲಕ್ಷವನ್ನು ಈ ತನಕ ಅರಣ್ಯ ಇಲಾಖೆ ಪಂಚಾಯತ್‌ಗೆ ಹಸ್ತಾಂತರ ಮಾಡಿಲ್ಲ, ಈ ಬಗ್ಗೆ ಅರಣ್ಯ ಸಚಿವರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಬೋಳೋಡಿಯಲ್ಲಿ ಸುಮಾರು 40 ಎಕರೆಗೂ ಅಧಿಕ ಸರಕಾರಿ ಜಾಗವಿದ್ದು ಇದು ಗೋಮಾಳವಾಗಿತ್ತು. ಇದರಲ್ಲಿ 34 ಎಕರೆ ಜಾಗವನ್ನು ಕೆಎಂಎಫ್ ಫ್ಯಾಕ್ಟರಿ ನಿರ್ಮಾಣಕ್ಕೆ ಈಗಾಗಲೇ ಕಂದಾಯ ಇಲಾಖೆಯಿಂದ ಸರ್ವೆ ಮಾಡಲಾಗಿದೆ. ಆದರೆ ಅರಣ್ಯ ಇಲಾಖೆ ಇದು ನಮ್ಮ ಇಲಾಖೆಗೆ ಸೇರಿದ ಜಾಗ ಎಂದು ಹೇಳುತ್ತಿದೆ. ಉದ್ಯೋಗ ಸೃಷ್ಟಿಸುವ ಸಲುವಾಗಿ ನಿರ್ಮಾಣವಾಗಲಿರುವ ಫ್ಯಾಕ್ಟರಿಗೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವುದು ಬೇಸರ ತಂದಿದೆ. ಶಾಸಕರು ಕೂಡ ಈ ಬಗ್ಗೆ ಪ್ರಯತ್ನ ಪಡುತ್ತಿದ್ದಾರೆ ಎಂದರು.

ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ಗುರುತಿಸುವ ಕೆಲಸ ಆಗಬೇಕು
ಸರಕಾರಿ ಜಾಗವನ್ನು ಕಬಳಿಸುವ ಕೆಲಸ ನಡೆಯುತ್ತಿದೆ. ಆದ್ದರಿಂದ ಗ್ರಾಮದಲ್ಲಿರುವ ಸರಕಾರಿ ಜಾಗಗಳನ್ನು ಗುರುತಿಸಿ ಸರ್ವೆ ಮಾಡಿ ಗಡಿಗುರುತು ಹಾಕುವ ಕೆಲಸ ಕಂದಾಯ ಇಲಾಖೆಯಿಂದ ಆಗಬೇಕಾಗಿದೆ. ಈ ರೀತಿಯಾದರೆ ಗ್ರಾಮದಲ್ಲಿ ಎಷ್ಟು ಸರಕಾರಿ ಜಾಗವಿದೆ, ಎಷ್ಟು ಅರಣ್ಯ ಇಲಾಖೆಗೆ ಸೇರಿದ ಜಾಗವಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಾರಾಯಣ ಪೂಜಾರಿ ಕುರಿಕ್ಕಾರ ತಿಳಿಸಿದರು. ಕೆದಂಬಾಡಿ ಗ್ರಾಮಕರಣಿಕರು ಮಾಹಿತಿ ನೀಡುತ್ತಾ, ಬೋಳೋಡಿಯಲ್ಲಿರುವ ಗೋಮಾಳ ಜಾಗದಲ್ಲಿ ಬೆಳೆಸಿದ್ದ ನೆಡುತೋಪನ್ನು ಕಟಾವು ಮಾಡಲು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಅನುಮತಿ ನೀಡಿದ್ದೇವೆ ಅದು ಬಿಟ್ಟು ಈ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಗ್ರಾಮದಲ್ಲಿ ಅಂಬೇಡ್ಕರ್ ಭವನವೇ ಇಲ್ಲ
ಕೆದಂಬಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನೂರಕ್ಕೂ ಅಧಿಕ ಮನೆಗಳಿದ್ದರೂ ಗ್ರಾಮದಲ್ಲಿ ಅಂಬೇಡ್ಕರ್ ಭವನವೇ ಇಲ್ಲ, ಆರ್ಥಿಕವಾಗಿ ಹಿಂದುಳಿದವರು ಶುಭ ಕಾರ್ಯಕ್ರಮ ಮಾಡಬೇಕಿದ್ದರೆ ಅವರಿಗೆ ಸಭಾಭವನವೇ ಇಲ್ಲದಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿದರೂ ಅದನ್ನು ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಚಂದ್ರ ಇದ್ಪಾಡಿ ಹೇಳಿದರು. ಇದಕ್ಕೆ ಉತ್ತರಿಸಿದ ಗ್ರಾಮಕರಣಿಕರು ಈಗಾಗಲೇ ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಿದ ಜಾಗಕ್ಕೆ ಆಕ್ಷೇಪಣೆ ಅರ್ಜಿ ಇರುವುದರಿಂದ ಇದು ಇತ್ಯರ್ಥವಾಗದೇ ಜಾಗ ಕಾಯ್ದಿರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ರತನ್ ರೈ ಮಾತನಾಡಿ, ಕೆದಂಬಾಡಿ ಗ್ರಾಮಕ್ಕೆ ಅಂಬೇಡ್ಕರ್ ಭವನದ ಅಗತ್ಯತೆ ತುಂಬಾ ಇದೆ ಆದ್ದರಿಂದ ಸದ್ಯದಲ್ಲೇ ಅಂಬೇಡ್ಕರ್ ಭವನಕ್ಕೆ ಸೂಕ್ತವಾದ ಜಾಗವನ್ನು ನೋಡಿ ಸರ್ವೆ ಮಾಡಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಯೇ ಸಿದ್ಧ ಎಂದು ಭರವಸೆ ನೀಡಿದರು.

ವಸತಿ ರಹಿತರಿಗೆ ಜಾಗ ಕೊಡಿ
ಗ್ರಾಮದಲ್ಲಿ ಹಲವು ಮಂದಿ ಮನೆ ಕಟ್ಟಿಕೊಳ್ಳಲು ಜಾಗ ಇಲ್ಲದೇ ಇದ್ದವರು ಇದ್ದಾರೆ ಇಂಥವರಿಗೆ ಗ್ರಾಮ ಪಂಚಾಯತ್‌ನ್‌ನಿಂದ ೩ ಸೆಂಟ್ಸ್ ಜಾಗ ಕೊಟ್ಟು ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಕೆಲಸ ಆಗಬೇಕು ಎಂದು ಚಂದ್ರ ಇದ್ಪಾಡಿ ತಿಳಿಸಿದರು. ಇದಕ್ಕೆ ಉತ್ತರಿಸಿದ ರತನ್ ರೈ ಕುಂಬ್ರರವರು ಈಗಾಗಲೇ ಪಂಚಾಯತ್ ವತಿಯಿಂದ 1 ಎಕರೆಯಷ್ಟು ಸರಕಾರಿ ಜಾಗವನ್ನು ಸೈಟ್ ನಿರ್ಮಾಣಕ್ಕೆ ಗೊತ್ತುಮಾಡಲಾಗಿದೆ. ಸುಮಾರು 20 ಮನೆಗಳಿಗೆ ಸೈಟ್ ನಿರ್ಮಾಣ ಈ ಜಾಗದಲ್ಲಿ ಆಗಲಿದೆ ಎಂದು ತಿಳಿಸಿದರು.

ಬಸ್ಸು ದರ ಇಳಿಸಿ
ಪುತ್ತೂರಿನಿಂದ ಕುಂಬ್ರಕ್ಕೆ 10 ಕಿ.ಮೀ ಇದೆ ಬಸ್ಸು ದರ 15 ರೂಪಾಯಿ ಇದೆ ಅದೇ ಪುತ್ತೂರಿನಿಂದ ಉಪ್ಪಿನಂಗಡಿಗೆ 13 ಕಿ.ಮೀ ಇದೆ ಆದರೆ ಬಸ್ಸು ಟಿಕೆಟ್ ದರ 12ರೂಪಾಯಿ, ಇದು ಯಾಕೆ ಎಂದು ಮೆಲ್ವಿನ್ ಮೊಂತೆರೋ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು. ಸಂಜೆ ಹೊತ್ತು ಪುತ್ತೂರಿನಿಂದ ಮುಕ್ರಂಪಾಡಿ-ಮುಂಡೂರು ಮಾರ್ಗವಾಗಿ ತಿಂಗಳಾಡಿ ಬಸ್ಸು ಬಂದು ತಿರುಗಿ ಮತ್ತೆ ಪುತ್ತೂರಿಗೆ ಹೋಗುತ್ತದೆ. ಹೀಗೆ ಹೋಗುವುದರಿಂದ ಸಂಸ್ಥೆಗೆ ನಷ್ಟ ಆದ್ದರಿಂದ ಸಂಜೆ ಬಂದ ಬಸ್ಸನ್ನು ತಿಂಗಳಾಡಿಯಲ್ಲಿ ನಿಲ್ಲಿಸಿ ಮರುದಿನ ಬೆಳಿಗ್ಗೆ ತಿಂಗಳಾಡಿಯಿಂದ ಹೊರಡಿಸಿದರೆ ಶಾಲಾ ಕಾಲೇಜು ಮಕ್ಕಳಿಂದ ಹಿಡಿದು ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಪ್ರವೀಣ್ ಶೆಟ್ಟಿ ತಿಂಗಳಾಡಿ, ರತನ್ ರೈ ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಡಿಫೋ ಅಧಿಕಾರಿ ತಿಳಿಸಿದರು.

ಇದ್ಪಾಡಿ ಆಟದ ಮೈದಾನ ಅನುಮತಿ ಕೊಡಿ
ಕೆದಂಬಾಡಿ ಗ್ರಾಮದಲ್ಲಿ ಸಾರ್ವಜನಿಕ ಆಟದ ಮೈದಾನವೇ ಇಲ್ಲ ಆದ್ದರಿಂದ ಈಗಾಗಲೇ ಸರ್ವೆ ಮಾಡಿದ ಇದ್ಪಾಡಿಯಲ್ಲಿರುವ ಜಾಗವನ್ನು ಆಟದ ಮೈದಾನ ನಿರ್ಮಾಣಕ್ಕೆ ಅನುಮತಿ ಕೊಡಬೇಕು ಎಂದು ಅಶ್ರಫ್ ಸಾರೆಪುಣಿ ಆಗ್ರಹಿಸಿದರು.

ಶಾಲೆಗಳಿಗೂ ಕುಚಲಕ್ಕಿಯನ್ನು ವಿತರಿಸಿ ಎಂದು ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಕುಮಾರ್ ಇದ್ಯಪೆ ತಿಳಿಸಿದರು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಾರೆಪುಣಿ-ಇದ್ಪಾಡಿ ರಸ್ತೆ ದುರಸ್ತಿಗೆ 50 ಸಾವಿರ ಅನುದಾನ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿದೆ ಆದರೆ ಅಲ್ಲಿ ಅಷ್ಟು ಮೊತ್ತದ ಕಾಮಗಾರಿ ನಡೆದಿಲ್ಲ ಎಂದು ಅಶ್ರಫ್ ಸಾರೆಪುಣಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಪಿಡಿಓ ಅಜಿತ್ ಜಿ.ಕೆಯವರು ಇಂಜಿನಿಯರ್‌ರವರ ಎಸ್ಟಿಮೇಟ್ ಪ್ರಕಾರವೇ ಬಿಲ್ ಮಾಡಲಾಗಿದೆ ಎಂದು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶೈಲಜಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ್ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಎನ್, ಸುಜಾತ ರೈ, ಅಸ್ಮಾ ಗಟ್ಟಮನೆ, ರೇವತಿ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ವಿವಿಧ ಮಾಹಿತಿಗಳನ್ನು ನೀಡಿದರು. ಕಾರ್ಯದರ್ಶಿ ಸುನಂದ ರೈ ವರದಿ ಮತ್ತು ವಾರ್ಡ್ ಸಭೆಯ ವರದಿ ವಾಚಿಸಿ, ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ಮೃದುಳ, ಶಶಿಪ್ರಭಾ, ವಿದ್ಯಾಪ್ರಸಾದ್ ಸಹಕರಿಸಿದ್ದರು.

‘ನಮ್ಮ ನೂತನ ಆಡಳಿತ ಬಂದು 1ವರ್ಷ ಆಗುತ್ತಿದೆ. ಕೆದಂಬಾಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಈಗಾಗಲೇ ಉದ್ಯೋಗ ಖಾತರಿ ಯೋಜನೆ ಮೂಲಕ 28 ಲಕ್ಷ ರೂ.ಮೊತ್ತದ ಕಾಮಗಾರಿ ನಡೆದಿದೆ. ಶಾಸಕರ ಅನುದಾನ 2 ಕೋಟಿ 60 ಲಕ್ಷ ರೂಪಾಯಿಯ ವಿವಿಧ ಕಾಮಗಾರಿಗಳು, 5 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೆ ಅಲ್ಲದೆ ಪಂಚಾಯತ್‌ನ 15 ನೇ ಹಣಕಾಸು ನಿಧಿಯಿಂದ 18ಲಕ್ಷ ರೂ.ಕಾಮಗಾರಿಗಳು, ಜಲಜೀವನ್ ಮಿಷನ್ ಯೋಜನೆಯಡಿ ಅನುದಾನ 1 ಕೋಟಿ13 ಲಕ್ಷ ರೂ, ಇದಲ್ಲದೆ ಉದ್ಯೋಗ ಖಾತರಿ, ಪಂಚಾಯತ್ ಅನುದಾನದೊಂದಿಗೆ ರೂ.15 ಲಕ್ಷ ವೆಚ್ಚದ ಸ್ವಚ್ಛ ಸಂಕೀರ್ಣ ಮತ್ತು ರೂ.10 ಲಕ್ಷ ವೆಚ್ಚದ ಸ್ಮಶಾನ ಮತ್ತು ಉದ್ಯಾನವನ ಕಾಮಗಾರಿ ನಡೆಯಲಿದೆ. ಗ್ರಾಮದ ಅಭಿವೃದ್ದಿಗೆ ಸರ್ವರ ಸಹಕಾರ ಅಗತ್ಯ’ – ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here