ಜು.31: ಕಾವು ಸ.ಮಾ. ಉ ಹಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹುಕ್ರಪ್ಪ ನಾಯ್ಕ ಬಿ ನಿವೃತ್ತಿ

0
ಏಕೋಪಾಧ್ಯಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗುವ ಮೂಲಕ ವೃತ್ತಿ ಜೀವನ ಆರಂಭ
ಪುತ್ತೂರು: ಕಾವು ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಹುಕ್ರಪ್ಪ ನಾಯ್ಕ ಬಿ ಅವರು ಜು.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಕಳೆದ ಏಳು ವರ್ಷದಿಂದ ಕಾವು ಶಾಲೆಯಲ್ಲಿ ಪದವೀಧರೇತರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
29 ಸೆಪ್ಟಂಬರ್ 1982 ರಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದ ಹುಕ್ರಪ್ಪ ನಾಯ್ಕರವರು ಪ್ರಥಮ ಬಾರಿಗೆ ಪುಣ್ಚಪ್ಪಾಡಿಯ ಏಕೋಪಾಧ್ಯಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗುವ ಮೂಲಕ 1982 ರಿಂದ 1990 ರ ತನಕ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಮುಚ್ಚುವ ಹಂತದಲ್ಲಿದ್ದ ಪುಣ್ಚಪ್ಪಾಡಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಿ ಶಾಲೆಯ ಉಳಿವಿಗಾಗಿ ಶ್ರಮಿಸಿದ್ದ ಖ್ಯಾತಿ ಇವರಿಗೆ ಸಲ್ಲುತ್ತದೆ.
1990 ರಿಂದ 1994 ರತನಕ ಪಳ್ಳತ್ತೂರಿನ ಆಲಂತಡ್ಕ ಶಾಲೆಯಲ್ಲಿ ಪ್ರಭಾರ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಿದ್ದು ಇವರ ಸೇವಾ ಅವಧಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಾರ್ಪಡಿಸಿ ಶಾಲಾ ಆಟದ ಮೈದಾನವನ್ನು ನಿರ್ಮಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು. 1994 ರಿಂದ 97 ರ ತನಕ ಮಣಿಕ್ಕರ ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, 1997 ರಿಂದ 2002ರತನಕ ಇರ್ದೆ ಉಪ್ಪಳಿಗೆ ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2002 ರಿಂದ 2003 ರ ತನಕ ದೂಮಡ್ಕ ಶಾಲೆಯಲ್ಲಿ ಕೇಡರ್ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಬಿಸಿಯೂಟದ ಪ್ರಾರಂಭದ ದಿನಗಳಲ್ಲಿ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. 2003 ರಿಂದ 2016 ರ ತನಕ ಪೇರಲ್ತಡ್ಕ ಸರಕಾರಿ ಉನ್ನತ ಹಿ.ಪ್ರಾ ಶಾಲೆಯಲ್ಲಿ ಕೇಡರ್ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಆ ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. 4 ತರಗತಿ ಕೊಠಡಿಗಳ ನಿರ್ಮಾಣ, ಅಕ್ಷರ ದಾಸೋಹ ಅಡಿಗೆ ಕೊಠಡಿ ನಿರ್ಮಾಣ, 175 ಮೀಟರ್ ಆವರಣಗೋಡೆ ನಿರ್ಮಾಣ, ಮೆಟ್ಟಿಲುಗಳ ರಚನೆ, ಶಾಲೆಯಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಿಸುವ ಮೂಲಕ ಶಾಲೆಯ ಶ್ರೇಯಸ್ಸಿಗಾಗಿ ಕೆಲಸ ಮಾಡಿದ್ದರು.
2016 ರಿಂದ 31 ಜುಲೈ 2022 ರತನಕ ಕಾವು ಸರಕಾರಿ ಮಾದರಿ ಉನ್ನತ ಹಿಪ್ರಾ ಶಾಲೆಯಲ್ಲಿ ಪದವೀಧರೇತರ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಜು. 31 ರಂದು ನಿವೃತ್ತಿಯಾಗುತ್ತಿದ್ದಾರೆ. ದಾನಿಗಳ ಮತ್ತು ಪೋಷಕರ ಮನವೊಲಿಸಿ ಕಾವು ಶಾಲೆಯಲ್ಲಿ ಆಂಗ್ಲಮಾದ್ಯಮ ಎಲ್‌ಕೆಜಿ , ಯುಕೆಜಿ ತರಗತಿಗಳನ್ನು ಪ್ರಾರಂಭ ಮಾಡಿದ್ದರು. ಅಕ್ಷರ ದಾಸೋಹ ಅಡುಗೆ ಕೋಣೆಗಳ ನಿರ್ಮಾಣ, ಊಟದ ಹಾಲ್ ನಿರ್ಮಾಣ, ಪ್ರತೀ ಕೊಠಡಿಗೆ ಧ್ವನಿ ವರ್ಧಕ, ಫ್ಯಾನ್ ಅಳವಡಿಕೆ, ಪ್ರಿಂಟರ್ ಲ್ಯಾಪ್‌ಟ್ಯಾಪ್ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಶಾಲಾ ಹೋದೋಟ ನಿರ್ಮಾಣ ಸೇರಿದಂತೆ ಶಾಲೆಗೆ ಅಗತ್ಯ ಇರುವ ಎಲ್ಲಾ ವ್ಯವಸ್ಥೆಗಳನ್ನು ಸರಕಾರ, ಜನಪ್ರತಿನಿಧಿಗಳು ಮತ್ತು ಊರ ದಾನಿಗಳು ಹಾಗೂ ಪೋಷಕರಿಂದ ವ್ಯವಸ್ಥೆ ಮಾಡಿಸುವ ಮೂಲಕ ಕಾವು ಶಾಲೆಯಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಡುವ ಮೂಲಕ ಗ್ರಾಮದ ಅಚ್ಚುಮೆಚ್ಚಿನ ಶಿಕ್ಷಕರಾಗಿ ಪರಿಚಿತರಾಗಿದ್ದರು.
ಚೋಮ ನಾಯ್ಕ ಮತ್ತು ಪಾರ್ವತಿ ದಂಪತಿಗಳ ಪುತ್ರರಾಗಿರುವ ಹುಕ್ರಪ್ಪ ನಾಯ್ಕ ಬಿ ರವರು ಪ್ರಸ್ತುತ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ವಾಸ್ತವ್ಯವಿದ್ದಾರೆ. ನೆಟ್ಟಣಿಗೆ ಮುಡ್ನೂರು ಕರ್ನೂರು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ಕೋಡಿಯಾಲ್ ಬೈಲ್ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದಿರುತ್ತಾರೆ.
1994 ರಲ್ಲಿ ಶಿಕ್ಷಕಿ ಜಾನಕಿ ಕೆ ರವರನ್ನು ವಿವಾಹವಾಗಿರುವ ದಂಪತಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ. ಪುತ್ರಿ ರಶ್ಮಿ ಎ.ಎಚ್ ಬಿ ಇ ಪದವೀಧರೆಯಾಗಿದ್ದು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರ ರಕ್ಷಿತ್ ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಇಂಜನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳ ಸುಖೀ ಸಂಸಾರ ಇವರದ್ದಾಗಿದೆ.

LEAVE A REPLY

Please enter your comment!
Please enter your name here