ಒಂದೂವರೆ ತಾಸು ಟಿಪ್ಪರ್ ಚಕ್ರದಡಿ ಕಾಲು ಸಿಲುಕಿಕೊಂಡು ಒದ್ದಾಡಿದ ಮಹಿಳೆ; ಕ್ರೇನ್ ಸಹಾಯದಿಂದ ಟಿಪ್ಪರ್ ತೆರವು
ನೆಲ್ಯಾಡಿ: ಕಾಂಚನ-ಶಾಂತಿನಗರ ಹೆದ್ದಾರಿಯ ಗೋಳಿತ್ತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ಮರಳು ಸಾಗಾಟದ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಹಾಗೂ ಮಗ ಗಾಯಗೊಂಡಿರುವ ಘಟನೆ ಆ.೨೫ರಂದು ಮಧ್ಯಾಹ್ನ ನಡೆದಿದೆ. ಡಿಕ್ಕಿಯ ವೇಳೆ ಮಹಿಳೆಯ ಕಾಲು ಟಿಪ್ಪರ್ ಚಕ್ರದ ಅಡಿ ಸಿಲುಕಿಕೊಂಡಿದ್ದು ಎರಡು ಕ್ರೇನ್‌ಗಳ ಸಹಾಯದಿಂದ ಟಿಪ್ಪರ್ ತೆರವುಗೊಳಿಸಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟಿಪ್ಪರ್ ಅಡಿ ಕಾಲು ಸಿಲುಕಿಕೊಂಡ ಪರಿಣಾಮ ಸುಮಾರು ಒಂದೂವರೆ ತಾಸಿಗೂ ಹೆಚ್ಚು ಸಮಯ ಮಹಿಳೆ ಒದ್ದಾಡಿದ ಘಟನೆ ಹೃದಯ ವಿದ್ರಾವಕವಾಗಿತ್ತು.
ಗೋಳಿತ್ತೊಟ್ಟು ಗ್ರಾಮದ ನೂಜೋಲು ನಿವಾಸಿ, ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿರುವ ಕುಶಾಲಪ್ಪ ನಾಯ್ಕ್(32ವ.) ಹಾಗೂ ಅವರ ತಾಯಿ ಪ್ರೇಮಾ(50ವ.)ಗಾಯಗೊಂಡವರಾಗಿದ್ದಾರೆ. ಕುಶಾಲಪ್ಪ ನಾಯ್ಕ್‌ರವರು ತನ್ನ ತಾಯಿ ಪ್ರೇಮಾರವರ ಜೊತೆಗೆ ತಮ್ಮ ಸ್ಕೂಟಿ (ಕೆಎ19 ಹೆಚ್‌ಇ 7025)ಯಲ್ಲಿ ಉಪ್ಪಿನಂಗಡಿಗೆ ಹೋದವರು ಹಿಂತಿರುಗಿ ಕಾಂಚನ-ಶಾಂತಿನಗರ ರಸ್ತೆಯಲ್ಲಿ ಮನೆಗೆ ಬರುತ್ತಿದ್ದ ವೇಳೆ ಮೇಲೂರು ಕಡೆಯಿಂದ ನೀರಕಟ್ಟೆ ಕಡೆಗೆ ಹೋಗುತ್ತಿದ್ದ ಮರಳು ಸಾಗಾಟದ ಟಿಪ್ಪರ್(ಕೆಎಲ್ 36, ಬಿ ೮219) ಮಧ್ಯೆ ಗೋಳಿತ್ತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮೇಲೂರು ಕಡೆಯಿಂದ ವೇಗವಾಗಿ ಬಂದ ಮರಳು ಸಾಗಾಟದ ಟಿಪ್ಪರ್ ಲಾರಿ ನೂಜೋಲು ಎಂಬಲ್ಲಿನ ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ಎದುರಿನಿಂದ ಏರು ರಸ್ತೆಯಲ್ಲಿ ತಾಯಿ, ಮಗ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಕುಶಾಲಪ್ಪ ನಾಯ್ಕ್‌ರವರು ಲಾರಿಯಡಿ ಪಕ್ಕದ ಚರಂಡಿಯೆಡೆಗೆ ಬಿದ್ದಿದ್ದು ಅವರ ತಾಯಿಯ ಕಾಲು ಸ್ಕೂಟಿ ಹಾಗೂ ಟಿಪ್ಪರ್ ಲಾರಿಯ ಮುಂಭಾಗದ ಟಯರ್ ಮಧ್ಯೆ ಸಿಲುಕಿಕೊಂಡಿತು.
ಒಂದೂವರೆ ತಾಸು ಒದ್ದಾಡಿದ ಮಹಿಳೆ: ಕುಶಾಲಪ್ಪ ಅವರು ತ್ರಾಸಪಟ್ಟು ಟಿಪ್ಪರ್ ಲಾರಿಯಡಿಯಿಂದ ಹೊರಬಂದರು. ಆದರೆ ಅವರ ತಾಯಿಯ ಕಾಲು ಸ್ಕೂಟಿ ಹಾಗೂ ಲಾರಿಯ ಮುಂಭಾಗದ ಚಕ್ರದಡಿ ಸಿಲುಕಿಕೊಂಡಿದ್ದರಿಂದ ಅವರು ಹೊರಬರಲಾರದೆ ನೋವಿನಿಂದ ಒದ್ದಾಡುತ್ತಿದ್ದರು. ಬಳಿಕ ಉಪ್ಪಿನಂಗಡಿಯಿಂದ ಬಂದ ಒಂದು ಕ್ರೇನ್ ಹಾಗೂ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಸಂಬಂಽಸಿದ ಎಲ್‌ಎನ್‌ಟಿಯವರ ಬೃಹತ್ ಕ್ರೇನ್ ಸ್ಥಳಕ್ಕೆ ತರಿಸಿಕೊಂಡು ಟಿಪ್ಪರ್ ಲಾರಿ ತೆರವುಗೊಳಿಸಿ ಮಹಿಳೆಯನ್ನು ಲಾರಿಯಡಿಯಿಂದ ಹೊರ ತೆಗೆಯಲಾಯಿತು. ಎರಡು ಕ್ರೇನ್‌ಗಳ ಸಹಾಯದಿಂದ ಟಿಪ್ಪರ್ ಲಾರಿಯನ್ನು ಮೇಲಕ್ಕೆತ್ತಿ ಮಹಿಳೆಯನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಟಿಪ್ಪರ್ ಲಾರಿಯನ್ನು ಬದಿಗೆ ಸರಿಸಲಾಯಿತು. ಸುಮಾರು ಒಂದೂವರೆ ತಾಸು ಮಹಿಳೆಯ ಕಾಲು ಟಿಪ್ಪರ್ ಲಾರಿಯ ಚಕ್ರದಡಿಗೆ ಸಿಲುಕಿಕೊಂಡಿದ್ದು ನೋವಿನಿಂದ ಅವರು ಒದ್ದಾಡಿದ್ದು ನೆರೆದವರ ಹೃದಯ ಚುರ್ ಎನ್ನುವಂತಿತ್ತು. ಮಹಿಳೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಬಳಿಕ ಘಟನಾ ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದ ಎಂದು ವರದಿಯಾಗಿದೆ. ಉಪ್ಪಿನಂಗಡಿ ಎಸ್.ಐ.ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿಗಳು ಅಪಘಾತದ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಸ್ಥಳೀಯರು ಸಹಕರಿಸಿದರು. ಪುತ್ತೂರು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.