ಪುತ್ತೂರು: `ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಅತ್ಯಪೂರ್ವ ಸಂದೇಶವನ್ನು ಮನುಕುಲಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬ್ರಹ್ಮಶ್ರೀನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ೧೬೮ನೇ ಜನ್ಮ ದಿನಾಚರಣೆಯು ಸೆ.೧೦ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ ೭.೩೦ರಿಂದ ಸಾಯಿ ಶಾಂತಿ ಸರಪಾಡಿಯವರ ನೇತೃತ್ವದಲ್ಲಿ ಪ್ರಾರ್ಥನೆ, ಪಂಚಾಮೃತಾಭಿಷೇಕ ನಂತರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಆಲಂಕಾರು ಹಾಗೂ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯವರಿಂದ ಭಜನೆ, ೯.೩೦ರಿಂದ ಸಭಾ ಕಾರ್ಯಕ್ರಮ, ಗುರು ಸಂದೇಶ, ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಗುರು ಸಂದೇಶ ನೀಡಲಿದ್ದಾರೆ. ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿಗಳು, ಶ್ರೀಗುರು ಬೆಳಂದಿಗಳು ಇದರ ಅಧ್ಯಕ್ಷರಾಗಿರುವ ಪದ್ಮರಾಜ್ ಆರ್., ಬಲ್ಲಾಲ್ಬಾಗ್ ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಕುಮಾರ್ ಬಲ್ಲಾಲ್ಬಾಗ್, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಡಾ|ಬಿ.ಕೆ. ರಾಜಾರಾಮ್ ಕೆ.ಬಿ. ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಸಂಘದವರಿಗೆ ಅಭಿನಂದನೆ ನಡೆಯಲಿದ್ದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ ಎಸ್.ಎನ್, ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್, ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕರವರನ್ನು ಅಭಿನಂದಿಸಲಾಗುವುದು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದ ಬಳಿಕ ಅಪರಾಹ್ನ ವಿಠಲ ನಾಯಕ್ ಕಲ್ಲಡ್ಕರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಸೆ.೮ ಬೃಹತ್ ವಾಹನ ಜಾಥಾ
ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೮ನೇ ಜನ್ಮದಿನಾಚರಣೆಯ ಅಂಗವಾಗಿ ಸೆ.೮ರಂದು ಬೃಹತ್ ವಾಹನ ಜಾಥಾ ನಡೆಯಲಿದೆ. ಸಂಜೆ ೩ ಗಂಟೆಗೆ ದರ್ಬೆ ಬೈಪಾಸ್ ಅಶ್ವಿನಿ ವೃತ್ತದ ಬಳಿಯಿಂದ ವಾಹನ ಜಾಥಾ ನಡೆಯಲಿದೆ. ಜಾಥಾವು ದರ್ಬೆ ಬೈಪಾಸ್ ಬಳಿಯಿಂದ ಹೊರಟು ಮುಖ್ಯ ರಸ್ತೆಯ ಮೂಲಕ ಸಾಗಿ ಶ್ರೀಧರ ಭಟ್ ಅಂಗಡಿ ಬಳಿಯಿಂದ ಮಾರ್ಕೆಟ್ ರಸ್ತೆ ತಾಲೂಕು ಆಡಳಿತ ಸೌಧದ ಬಳಿಯಿಂದಾಗಿ ಬಿಲ್ಲವ ಸಂಘದ ಸಭಾ ಭವನದ ಬಳಿ ಸಮಾಪನಗೊಳ್ಳಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.