ಪುತ್ತೂರು : ಫೈನಾನ್ಸ್ವೊಂದರಿಂದ ವಾಹನ ಖರೀದಿಸಲು ಪಡೆದುಕೊಂಡಿದ್ದ ಸಾಲಕ್ಕೆ ಸಂಬಂಧಿಸಿ ನೀಡಿದ್ದ ಚೆಕ್ ಅಮಾನ್ಯಗೊಂಡ ಹಿನ್ನಲೆಯಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟ ಆರೋಪಿ ನಿಗದಿತ ಅವಧಿಯೊಳಗೆ ಮೇಲ್ಮನವಿ ಸಲ್ಲಿಸದೆ ತಲೆಮರೆಸಿಕೊಂಡ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಸಂಸ್ಥೆಯಿಂದ ವಾಹನ ಖರೀದಿಸಲು ಹಸನಬ್ಬ ಮಂಗಳೂರು ಎಂಬವರು ಸಾಲ ಪಡೆದುಕೊಂಡಿದ್ದು ಸಾಲ ಮರುಪಾವತಿಗಾಗಿ ರೂ.5,75000ಕ್ಕೆ ಕರ್ಣಾಟಕ ಬ್ಯಾಂಕ್ನ ಚೆಕ್ ನೀಡಿದ್ದರು. ಸದ್ರಿ ಚೆಕ್ ಅಮಾನ್ಯಗೊಂಡಿದ್ದರಿಂದಾಗಿ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಸಂಸ್ಥೆಯು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಎಂ.ರಮೇಶ್ ರವರು ಆರೋಪಿ ಹಸನಬ್ಬರವರನ್ನು ದೋಷಿಯೆಂದು ತೀರ್ಪು ನೀಡಿ ರೂ.5,75,000ನ್ನು ದೂರುದಾರ ಸಂಸ್ಥೆಗೆ ಪಾವತಿಸುವಂತೆ ಮತ್ತು ತಪ್ಪಿದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದರು. ತೀರ್ಪಿಗೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲು ಆರೋಪಿಗೆ ಅವಕಾಶವಿದ್ದರೂ ಮೇಲ್ಮನವಿ ಮಾಡದೆ ತಲೆಮರೆಸಿಕೊಂಡಿದ್ದರು. ಮೇಲ್ಮನವಿ ವಾಯಿದೆ ಮುಗಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಪರಂಗಿಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪುತ್ತೂರು ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಅವರ ಮಾರ್ಗದರ್ಶನದಲ್ಲಿ ಎಸ್.ಐ ಶ್ರೀಕಾಂತ್ ರಾಥೋಡ್ ಅವರ ನೇತ್ವದಲ್ಲಿ ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ, ಕಾನ್ ಸ್ಟೇಬಲ್ ಕುಮಾರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.