ಪುತ್ತೂರು: ರಸ್ತೆ ಸಮಸ್ಯೆಯಿಂದ ರೋಸಿಹೋಗಿರುವ ಗ್ರಾಮಸ್ಥರು ಮುಂಬರುವ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿ ಬ್ಯಾನರ್ ಅಳವಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕೊಯಿಲ ಗ್ರಾಮದ ವಳಕಡಮದಿಂದ ವರದಿಯಾಗಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮ ಅಂಗನವಾಡಿಯಿಂದ ಗುಂಡಿಕಂಡಕ್ಕೆ ತೆರಳುವ ಸಂಪರ್ಕ ರಸ್ತೆಯೂ ಸುಮಾರು 60ಕ್ಕೂ ಹೆಚ್ಚು ವರ್ಷಗಳ ಹಳೆಯ ರಸ್ತೆಯಾಗಿದೆ. ಈ ಭಾಗದ ಸುಮಾರು 53 ಮನೆಗಳಿಗೆ ಇದೊಂದೇ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯ ದುರಸ್ತಿಗೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುದಾನವೂ ದೊರೆತಿರುವುದಿಲ್ಲ. ಊರಿನವರ ಬೇಡಿಕೆಯಾಗಿದ್ದ ರಸ್ತೆ ಮತ್ತು ಸುಮಾರು 7-8 ಸಲ ಕಿಂಡಿ ಅಣೆಕಟ್ಟು ಗುಂಡಿಕಂಡಕ್ಕೆ ಮಂಜೂರಾಗಿದ್ದರೂ ಸ್ಥಳ ನಿಗದಿಪಡಿಸಿ ಬಳಿಕ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಕ್ಷೇತ್ರದ ಶಾಸಕರಾಗಿರುವ ಎಸ್.ಅಂಗಾರ ಅವರಿಗೆ ಮನವಿ ಕೊಟ್ಟರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಈ ಸಂಪರ್ಕ ರಸ್ತೆಯು ಮಳೆಗಾಲದಲ್ಲಿ ನಡೆದುಕೊಂಡು ಹೋಗಲು ಅನಾನುಕೂಲವಾಗಿದೆ. ಆದ್ದರಿಂದ ಈ ರಸ್ತೆಯನ್ನು ಜನರ ಸಂಪರ್ಕಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ಮಾಡದಿದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ಬ್ಯಾನರ್ ಅಳವಡಿಸಿದ್ದಾರೆ. ಗ್ರಾಮಸ್ಥರ ಬೇಡಿಕೆಗೆ ಇನ್ನಾದರೂ ಪರಿಹಾರ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.