ಪುತ್ತೂರು : ಧರಿತ್ರಿ ಸೌಹಾರ್ದ ಸಹಕಾರಿ ಮುರ ಕಬಕ, ಕಲ್ಲೇಗ ಗೌಡ ಯುವ ಸಂಘ ಮುರ ಕಬಕ, ಎಂ.ವಿ.ಫೌಂಡೇಶನ್ ಪುತ್ತೂರು, ಶಕ್ತಿ ಯುವಕ ವೃಂದ ಮುರ ಕಲ್ಲೇಗ, ಓಂ ಫ್ರೆಂಡ್ಸ್ ಶೇವಿರೆ, ಕಲ್ಲೇಗ, ಪುತ್ತೂರು ತಾಲೂಕು ಎಂ.ಆರ್.ಡಬ್ಲ್ಯೂ., ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂಗಳ ತಾಲೂಕು ಒಕ್ಕೂಟ ಪುತ್ತೂರು, ಎ.ಜೆ.ವೈದ್ಯಕೀಯ ಹಾಗೂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಂಗಳೂರು, ಗ್ರಾಮ ವಿಕಾಸ ಸಮಿತಿ ಕಬಕ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ ಸೆ.25ರಂದು ಬೆಳಿಗ್ಗೆ 9.30ರಿಂದ ಅಪರಾಹ್ನ 2ರವರೆಗೆ ಮುರ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಬಿರ ಉದ್ಘಾಟಿಸಲಿದ್ದಾರೆ. ಕಬಕ ಗ್ರಾ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಬಕ ಗ್ರಾ.ಪಂ. ಸದಸ್ಯ ರಾಜೇಶ್ ಗೌಡ ಪೋಳ್ಯ, ಭಾಗವಹಿಸಲಿದ್ದಾರೆ. ಎ.ಜೆ.ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ನವೀನ್ ಕುಮಾರ್ ಎಂ. ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ದಂತ ತಪಾಸಣೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಚರ್ಮರೋಗ ತಪಾಸಣೆ ಹಾಗೂ ಕೆಲವು ಪ್ರಮುಖ ಪರೀಕ್ಷೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.