ಉಪ್ಪಿನಂಗಡಿ: ಮನೆಯ ತ್ಯಾಜ್ಯ ನೀರಿನ ನಿರ್ವಹಣೆಗೆ ಇಂಗು ಗುಂಡಿ ರಚಿಸಿಲ್ಲ ಎಂಬ ಕಾರಣಕ್ಕೆ ಬಡ ಕುಟುಂಬಗಳ ಕುಡಿಯುವ ನೀರಿನ ಸಂಪರ್ಕವನ್ನೇ ಪಂಚಾಯತ್ ಪಿಡಿಒ ರವರು ಕಡಿತಗೊಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
ಉಪ್ಪಿನಂಗಡಿ ರಥಬೀದಿ ಪರಿಸರದ ಕೆಲ ಮನೆ ಮಂದಿ ತಮ್ಮ ಮನೆಯ ತ್ಯಾಜ್ಯ ನೀರನ್ನು ಇಂಗು ಗುಂಡಿ ಮಾಡಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪಂಚಾಯತ್ ಪಿಡಿಒರವರು ಆಯ್ದ ಮನೆಗಳ ಕುಡಿಯುವ ನೀರಿನ ಸಂಪರ್ಕವನ್ನೇ ಕಡಿದು ಹಾಕಿದ್ದರು. ಮಾನವೀಯ ನೆಲೆಯಲ್ಲಿ ಸದ್ರಿ ಬಡ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಮರಳಿ ನೀಡಬೇಕೆಂದು ಪಂಚಾಯತ್ ಅಧ್ಯಕ್ಷೆ ಖುದ್ದು ನಿರ್ದೇಶನ ನೀಡಿದರೂ ಸಂಪರ್ಕ ನೀಡದೇ ಇರುವುದರಿಂದ ಸತತ ಮೂರು ದಿನವೂ ಕುಡಿಯುವ ನೀರಿಲ್ಲದೆ ಸದ್ರಿ ಕುಟುಂಬಗಳ ಸದಸ್ಯರು ಅತಂತ್ರರಾಗಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ.
ಉಪ್ಪಿನಂಗಡಿ ಪೇಟೆಯಲ್ಲಿ ಬಹುತೇಕ ಮನೆ ಮತ್ತು ಉದ್ದಿಮೆಗಳು ಇಂಗು ಗುಂಡಿ ರಚಿಸದೇ ನೇರವಾಗಿ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದರೂ, ಹಲವು ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್ಗೆ ಮೀಸಲಿಟ್ಟ ಸ್ಥಳದಲ್ಲಿ ಅಂಗಡಿ ಕೋಣೆಗಳನ್ನು ನಿರ್ಮಿಸಿದ್ದರೂ, ಈ ಬಗ್ಗೆ ಕ್ರಮಕೈಗೊಳ್ಳದ ಗ್ರಾ.ಪಂ. ಅಽಕಾರಿಗಳು ಬಡ ಕುಟುಂಬಗಳ ಮೇಲೆ ಈ ರೀತಿ ದರ್ಪ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.