ಉಪ್ಪಿನಂಗಡಿ: ಬೀಗ ಹಾಕಲಾದ ಮನೆಗೆ ನುಗ್ಗಲು ಯತ್ನಿಸಿದ ಕಳ್ಳರ ತಂಡವು ಶಬ್ದ ಕೇಳಿ ಎಚ್ಚೆತ್ತ ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಸ್ಥಳದಿಂದ ಕಾಲ್ಕಿತ್ತ ಘಟನೆ ಗುರುವಾರ ರಾತ್ರಿ ಇಲ್ಲಿನ ಬ್ಯಾಂಕ್ ರಸ್ತೆಯ ಬಳಿ ನಡೆದಿದೆ.
ದಿವಂಗತ ಹೇಮಂತ್ರವರ ಸೌರಭ ಬಿಲ್ಡಿಂಗ್ನಲ್ಲಿರುವ ಮನೆಗೆ ಸದ್ಯ ಬೀಗ ಹಾಕಿ ಮನೆ ಮಂದಿ ಮಂಗಳೂರಿನಲ್ಲಿ ವಾಸ್ತವ್ಯವನ್ನು ಹೊಂದಿದ್ದು, ಗುರುವಾರ ತಡ ರಾತ್ರಿ 1.30 ರ ಸುಮಾರಿಗೆ ಕಪ್ಪು ಬಣ್ಣದ ಕಾರಿನಲ್ಲಿ ಬಂದ ನಾಲ್ವರಿದ್ದ ಕಳ್ಳರ ತಂಡ ಮನೆಯ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ತೆರೆಯಲು ಯತ್ನಿಸಿತ್ತು. ಈ ವೇಳೆ ಬಿಲ್ಡಿಂಗ್ ನ ಮೊದಲ ಮಹಡಿಯಲ್ಲಿ ಬಾಡಿಗೆಗಿದ್ದ ಮನೆಯ ಒಡತಿ ಸತ್ಯೇಶ್ವರಿ ಭಟ್ ಶಬ್ದ ಕೇಳಿ ಎಚ್ಚೆತ್ತು ಕಿಟಕಿಯಿಂದ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಕಾರಿನಿಂದ ಹೊರಗೆ ಬಂದ ವ್ಯಕ್ತಿಯೋರ್ವ ಮೊದಲ ಮಹಡಿಯ ಮನೆಯಲ್ಲಿ ದೀಪ ಬೆಳಗಿದ್ದನ್ನು ಕಂಡು ಮೊದಲ ಮಹಡಿಯತ್ತ ದೃಷ್ಟಿ ಹರಿಸಿದಾಗ ಯಾಕಾಗಿ ಇಲ್ಲಿ ನಿಂತಿರುವಿರಿ ಎಂದು ಸತ್ಯೇಶ್ವರಿಯವರು ಪ್ರಶ್ನಿಸಿದರು. ಆಗ ಆತ ‘ನಾವು ಪುತ್ತೂರಿಗೆ ಹೋಗಬೇಕಾಗಿದೆ. ದಾರಿ ತಪ್ಪಿದ್ದೇವೆ. ಇಲ್ಲಿಂದ ಪುತ್ತೂರಿಗೆ ಎಷ್ಟು ದೂರ ಇದೆ? ಎಂದೆಲ್ಲಾ ಸಬೂಬು ಹೇಳಿದ್ದನಲ್ಲದೆ, ಸಂದೇಹದಿಂದ ಅಲ್ಲೆ ನಿಂತ ಸತ್ಯೇಶ್ವರಿಯವರ ನಡೆಯಿಂದಾಗಿ ಕಾರನ್ನು ಮುಂದಕ್ಕೆ ಚಲಾಯಿಸಿ ಅನತಿ ದೂರದಲ್ಲಿ ನಿಲ್ಲಿಸಿದ. ಬಳಿಕ ಆ ತನಕ ಕಾಣಿಸದಿದ್ದ ಇಬ್ಬರು ವ್ಯಕ್ತಿಗಳು ಕಾರಿನಡೆಗೆ ಹೋಗಿ ಕಾರಿನಲ್ಲಿ ಕುಳಿತು ಮುಂದಕ್ಕೆ ಪ್ರಯಾಣಿಸಿದ್ದಾರೆ. ಶುಕ್ರವಾರ ಮುಂಜಾನೆ ಪರಿಶೀಲಿಸಿದಾಗ ಹೇಮಂತ್ರವರ ಮನೆಯ ಕಿಟಕಿಯ ಬಾಗಿಲನ್ನು ಸರಿಸಲಾಗಿದ್ದು, ಪ್ರಧಾನ ಬಾಗಿಲನ್ನು ಮೀಟಿ ತೆರೆಯಲು ಯತ್ನಿಸಿದ ಕುರುಹು ಬಾಗಿಲಲ್ಲಿ ಕಂಡು ಬಂದಿದೆ. ಸನಿಹದಲ್ಲೇ ಬ್ಯಾಂಕ್ ಕಟ್ಟಡವಿದ್ದು, ಕಳವು ಕೃತ್ಯಕ್ಕಾಗಿ ನಡೆಸಿದ ಪ್ರಯತ್ನವು ಮಹಿಳೆಯೋರ್ವರ ಜಾಗೃತ ನಡೆಯಿಂದಾಗಿ ವಿ-ಲವಾದಂತಾಗಿದೆ.