ಪುತ್ತೂರು:ಪಡ್ನೂರು ಗ್ರಾಮದ ಕುಂಜಾರು ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಚಂಡಿಕಾ ಯಾಗ ಸಮಿತಿಯ ವತಿಯಿಂದ ಮದಗ ಜನಾರ್ದನ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾಯಾಗ ಹಾಗೂ ದೇವಸ್ಥಾನದ ನಿವೃತ್ತ ಅರ್ಚಕರಿಗೆ ಗ್ರಾಮಸ್ಥರ ನೆರವಿನಿಂದ ನಿರ್ಮಾಣಗೊಂಡಿರುವ ಸುಂದರ ಮನೆಯ ಹಸ್ತಾಂತರವು ಅ.೨ರಂದು ನಡೆಯಲಿದೆ.
ಕ್ಷೇತ್ರದ ತಂತ್ರಿಗಳಾಗಿರುವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಚಂಡಿಕಾಯಾಗದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಚಂಡಿಕಾಯಾಗ ಪ್ರಾರಂಭ ಹಾಗೂ ಸಂಕಲ್ಪ ನಡೆಯಲಿದೆ. ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಸುಹಾಸಿನಿ ಪೂಜೆ, ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆ:
ಕಾರ್ಯಕ್ರಮದಲ್ಲಿ ಮಧ್ಯಾಹ್ನ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಹಾಗೂ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಏಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅರ್ಚಕರ ಮನೆ ಹಸ್ತಾಂತರ:
ದೇವಸ್ಥಾನದಲ್ಲಿ ಸುಮಾರು ೭೦ ವರ್ಷಗಳ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಚಂದ್ರಶೇಖರ ಮಯ್ಯರವರಿಗೆ ಭಕ್ತಾದಿಗಳ ನೆರವಿನಿಂದ ನಿರ್ಮಾಣಗೊಂಡಿರುವ ಮನೆಯ ಹಸ್ತಾಂತರವು ಇದೇ ಸಂದರ್ಭದಲ್ಲಿ ನಡೆಯಲಿದೆ. ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಸುಮಾರು ೭೦ವರ್ಷಗಳ ಹಿಂದೆ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿ, ಆರ್ಥಿಕ ತೊಂದರೆಯ ಸಮಯದಲ್ಲೂ ದೇವರ ಸೇವೆ ನಡೆಸುತ್ತಾ ಬಂದಿರುವ ಚಂದ್ರಶೇಖರ ಮಯ್ಯರವರು ಇದೀಗ ವಯೋನಿವೃತ್ತಿ ಪಡೆದಿದ್ದು ಅವರಿಗೆ ಗ್ರಾಮದ ಭಕ್ತಾದಿಗಳ ಆರ್ಥಿಕ ನೆರವಿನಿಂದ ಸುಮಾರು ೧೫ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣಗೊಳಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಹಾಗೂ ಸದಸ್ಯರು ತಿಳಿಸಿದ್ದಾರೆ.
ಚಂಡಿಕಾ ಯಾಗ ಸಮಿತಿ:
ಪ್ರಥಮ ಬಾರಿಗೆ ನಡೆಯುವ ಚಂಡಿಕಾಯಾಗಕ್ಕೆ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದ್ದು ಇದರ ಅಧ್ಯಕ್ಷರಾಗಿ ಬಾಲಕೃಷ್ಣ ನಾಕ್, ಉಪಾಧ್ಯಕ್ಷರಾಗಿ ರಮೇಶ್ ರೆಂಜಾಳ, ಗಣೇಶ್ ಯರ್ಮುಂಜ ಪಳ್ಳ, ರಮಣಿ ಡಿ.ಗಾಣಿಗ, ಶ್ರೀನಿವಾಸ ಪೆರ್ವೋಡಿ, ಕಾರ್ಯದರ್ಶಿಯಾಗಿ ಪೂವಪ್ಪ ದೇಂತಡ್ಕ, ಜತೆಕಾರ್ಯದರ್ಶಿಯಾಗಿ ಗಿರಿಧರ ಪಂಜಿಗುಡ್ಡೆ, ಕೋಶಾಧಿಕಾರಿಯಾಗಿ ಶ್ರೀಧರ ಕುಂಜಾರು ಹಾಗೂ ಸದಸ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.