ಪುತ್ತೂರು: ಕೆದಂಬಾಡಿ ಗ್ರಾಪಂನ ಬೋಳೋಡಿಯಲ್ಲಿ ನಿರ್ಮಾಣವಾಗಲಿದೆ 5 ಟನ್ ಸಾಮರ್ಥ್ಯದ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕ. ಈಗಾಗಲೇ ಪ್ರತೀ ಗ್ರಾಪಂ ಮಟ್ಟದಲ್ಲಿ ಒಣ ಕಸ ಸಂಗ್ರಹಣಾ ಕೇಂದ್ರ ಸಿದ್ಧವಾಗಿದೆ. ಗ್ರಾಮೀಣ ಮಟ್ಟದಲ್ಲಿ ಹಸಿ ಕಸವನ್ನು ಮನೆಮನೆಗಳವರೇ ವಿಲೇವಾರಿ ಮಾಡುತ್ತಿದ್ದು, ಪ್ಲಾಸ್ಟಿಕ್ ಕಸ, ಮೆಡಿಕಲ್ ಕಸ ಮತ್ತು ಇ-ವೇಸ್ಟ್‌ಗಳನ್ನು ಗ್ರಾಪಂಗಳು ಸಂಗ್ರಹಿಸುತ್ತಿವೆ. ಸಂಗ್ರಹಿಸಿದ ಬಳಿಕ ಮುಂದಿನ ನಿರ್ವಹಣೆ ಮಾಡುವುದು ಎಲ್ಲ ಗ್ರಾ.ಪಂ ಗಳಿಗೆ ಕಷ್ಟವಾದ ಕಾರಣ ಕೆದಂಬಾಡಿ ಗ್ರಾಪಂನಲ್ಲಿ 3 ತಾಲೂಕಿಗಳಿಗೆ ಸೇರಿದಂತೆ ಒಂದು ಘಟಕ ನಿರ್ಮಿಸಲಾಗುತ್ತಿದೆ ಅದೇ ಎಂ.ಆರ್.ಎಫ್ ಘಟಕ ಅಂದರೆ ಮೆಟೀರಿಯಲ್ ರಿಕವರಿ ಫೆಸಿಟಿಲಿ. ಕಾರ್ಕಳ ತಾಲೂಕಿನಲ್ಲಿ ನಿರ್ಮಿಸಲಾದ 10 ಟನ್ ಸಾಮರ್ಥ್ಯದ ಮೆಗಾ ಗಾತ್ರದ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (ಎಂಆರ್‌ಎಫ್) ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊತ್ತಮೊದಲ ಎಂಆರ್‌ಎಫ್ ಪುತ್ತೂರು ತಾಲೂಕಿಗೆ ಮಂಜೂರಾಗಿದ್ದು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಂಗಳಾಡಿ ಸಮೀಪದ ಬೋಳೋಡಿ ಎಂಬಲ್ಲಿ ೫ ಟನ್ ಸಾಮರ್ಥ್ಯದ ಘಟಕ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ.
ಮುಂದಿನ 6 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಕಾರ್ಯಾರಂಭ ಮಾಡಲಿರುವ ಈ ಘಟಕದಲ್ಲಿ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ಪ್ರತೀ ಗ್ರಾಪಂಗಳಿಂದ ಒಣ ಕಸವನ್ನು ಸಂಗ್ರಹಿಸಿ ಮರುಬಳಕೆಗೆ ಮಾದರಿಗೆ ಪರಿವರ್ತಿಸಿ ಬೇರೆ ಬೇರೆ ಕಡೆಯ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಘಟಕದಿಂದಾಗಿ ಯಾವುದೇ ರೀತಿಯ ಪರಿಸರ ಮಾಲಿನ್ಯವಾಗಲಿ, ವಾಸನೆ ಸಮಸ್ಯೆಯಾಗಲಿ ಇಲ್ಲದೇ ಇರುವ ಕಾರಣ ಬೋಳೋಡಿ ಪ್ರದೇಶದ ಜನರಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ. ಕಾರ್ಕಳದ ನಿಟ್ಟೆಯಲ್ಲಿ ನಿರ್ಮಾಣವಾಗಿರುವ ಘಟಕವನ್ನು ಕೆದಂಬಾಡಿ ಗ್ರಾಪಂ ನಿಯೋಗ ಮತ್ತು ಬೋಳೋಡಿ ಪರಿಸರದ ಜನ ಖುದ್ದಾಗಿ ಪರಿಶೀಲಿಸಿರುವ ಕಾರಣ ಕೇಂದ್ರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.
2 ಕೋಟಿ ಯೋಜನೆ
1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಎಂಆರ್‌ಎಫ್‌ನಲ್ಲಿ ೫ ಟನ್ ಒಣ ಕಸವನ್ನು ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸನ್ನದ್ಧಗೊಳಿಸಲಾಗುತ್ತದೆ. ಈಗಾಗಲೇ ಸರಕಾರ ಅನುದಾನ ಮಂಜೂರು ಮಾಡಿ ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೋಳೋಡಿಯಲ್ಲಿ 1 ಎಕರೆ ಜಾಗವನ್ನು ಕೆದಂಬಾಡಿ ಗ್ರಾಪಂ ಇದಕ್ಕಾಗಿ ನೀಡಿದೆ. ಕೆಲವೇ ದಿನಗಳಲ್ಲಿ ಶಿಲಾನ್ಯಾಸ ಕಾರ್ಯ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆಯಲಿದೆ.
ನಿರ್ವಹಣೆ ವಿಧಾನ
ಗುತ್ತಿಗೆದಾರ ಕಂಪನಿ ಘಟಕ ನಿರ್ಮಿಸಿದ ಬಳಿಕ ಇದರ ನಿರ್ವಹಣೆಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸಲಾಗುತ್ತದೆ. ವಹಿಸಿಕೊಂಡ ಸಂಸ್ಥೆಯವರು ಒಪ್ಪಂದದ ಆಧಾರದಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ.
ಕಾರ್ಯವಿಧಾನ ಹೇಗೆ
3 ತಾಲೂಕುಗಳ ಎಲ್ಲ ಗ್ರಾಪಂಗಳಿಂದ ಸಂಸ್ಥೆಯವರು ಒಣ ಕಸಗಳನ್ನು ಸಂಗ್ರಹಿಸುತ್ತಾರೆ. ಕಸ ಕೊಡುವುದರ ಜತೆಗೆ ನಿಗದಿ ಪಡಿಸಿದ ಮೊತ್ತವನ್ನು ಕೂಡ ಆಯಾ ಪಂಚಾಯಿತಿಯವರು ಸಂಸ್ಥೆಗೆ ನೀಡಬೇಕಾಗುತ್ತದೆ. ಸಂಗ್ರಹಗೊಂಡ ಒಣ ಕಸವನ್ನು ತಿಂಗಳಾಡಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಮಗ್ರವಾಗಿ ವಿಂಗಡಿಸಲಾಗುತ್ತದೆ. ಬಳಿಕ ಪ್ಲಾಸ್ಟಿಕ್ ಕಸಗಳನ್ನು ಕೂಡ ಪ್ರತ್ಯೇಕಿಸಿ ನಿರ್ದಿಷ್ಟ ಯಂತ್ರದ ಮೂಲಕ ಅವುಗಳನ್ನು ಬಂಡಲ್ ಮಾದರಿಗೆ ಪರಿವರ್ತಿಸಲಾಗುತ್ತದೆ. ಮರುಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಸಂಸ್ಕರಿಸಿದ ಬಳಿಕ ಕಾರ್ಖಾನೆಗಳಿಗೆ ಮಾರಲಾಗುತ್ತದೆ.ಕಾರ್ಕಳದ ನಿಟ್ಟೆಯ ಘಟಕದಲ್ಲಿ ಒಂದು ಕೆ.ಜಿ. ಒಣ ತ್ಯಾಜ್ಯಕ್ಕೆ ೩.೫೦ ರೂ.ಗಳಂತೆ ಗ್ರಾಪಂಗಳು ನಿರ್ವಹಣಾ ಸಂಸ್ಥೆಗೆ ಪಾವತಿಸುತ್ತಾರೆ. ಇದು ಗ್ರಾಪಂಗಳಿಗೆ ಸುಲಭ ವಿಧಾನ. ತಾವೇ ನಿರ್ವಹಣಾ ಕಾರ್ಯ ಮಾಡುವುದು ಅತ್ಯಂತ ವೆಚ್ಚದಾಯಕ. ಇದೀಗ ತಿಂಗಳಾಡಿ ಸಮೀಪ ನಿರ್ಮಾಣವಾಗಲಿರುವ ಕೇಂದ್ರ ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊದಲನೆಯದು. ಮಂಗಳೂರಿನಲ್ಲೂ ಇಂಥದೇ ಘಟಕ ನಿರ್ಮಾಣವಾಗಲಿದೆ. ಕೆದಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಎಂಆರ್‌ಎಫ್ ನಿರ್ಮಾಣವಾಗುವ ಕಾರಣ ನಮ್ಮ ಗ್ರಾಪಂನ ತ್ಯಾಜ್ಯಗಳನ್ನು ಸಂಸ್ಥೆಯವರು ಉಚಿತವಾಗಿ ಸಂಗ್ರಹಿಸುತ್ತಾರೆ.
– ರತನ್ ರೈ ಕುಂಬ್ರ. ಅಧ್ಯಕ್ಷರು ಕೆದಂಬಾಡಿ ಗ್ರಾಪಂ