೦ ಕೃಷಿಯೊಂದೇ ಸ್ವಾಭಿಮಾನಿ ಜೀವನಕ್ಕೆ ಆಧಾರ-ಸಂಜೀವ ಮಠಂದೂರು.
೦ 4 ಮಂದಿ ಸಾಧಕರಿಗೆ ಸನ್ಮಾನ.
೦ ಗಮನ ಸೆಳೆದ ಗೋ ತಳಿ ಪ್ರದರ್ಶನ.
ಉಪ್ಪಿನಂಗಡಿ: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ-22 ಪ್ರಯುಕ್ತ ಸಾವಯವ ಕೃಷಿ, ದೇಶಿ ಗೋತಳಿಯ ಮಹತ್ವ ಹಾಗೂ ಜಲ ಮರುಪೂರಣ ಮಾಹಿತಿ ಕಾರ್ಯಾಗಾರ ಅ. 14ರಂದು 34-ನೆಕ್ಕಿಲಾಡಿ ಗ್ರಾಮದ ಡಾ. ಸುಪ್ರೀತ್ ಲೋಬೋರವರ “ಆಯುರ್ಗ್ರಾಮ” ಬಳ್ಳಿ ಮನೆಯಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಕ್ಷೇತ್ರದ ಬಗ್ಗೆ ಯುವ ಜನತೆಗಿದ್ದ ಅಸಡ್ಡೆ ಕೊರೊನಾ ಕಾಲ ನಂತರದಿಂದ ಬದಲಾಗಿದ್ದು, ಕೃಷಿಯೊಂದೇ ಸ್ವಾಭಿಮಾನಿ ಜೀವನಕ್ಕೆ ಆಧಾರ ಎನ್ನುವುದನ್ನು ಯುವ ಜನತೆ ಅರಿತ್ತಿದ್ದಾರೆ, ಈ ನಿಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಮಾತನಾಡಿ ಅಮೃತ ಮಹೋತ್ಸವ ಸಮಾರಂಭದ ನಿಮಿತ್ತ ನಡೆಯುವ 9ನೇ ಕಾರ್ಯಕ್ರಮ ಇದಾಗಿದ್ದು, ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಪ್ರಗತಿಪರ ಸಾವಯವ ಕೃಷಿಕರೋರ್ವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿದೆ, ಮುಂದಿನ ತಿಂಗಳು ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ, ಡಿಸೆಂಬರ್ ತಿಂಗಳಿನಲ್ಲಿ ಅಮೃತ ಮಹೋತ್ಸವದ ಸಮಾರೋಪ ನಡೆಯಲಿದೆ ಎಂದು ಹೇಳಿದರು.
ಬಳ್ಳಿ ಮನೆ ಮಾಲಕಿ, ಸಾವಯವ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಐರಿನ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಸಂದರ್ಭೋಚಿತವಾಗಿ ಮಾತನಾಡಿದರು.
4 ಮಂದಿ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾಗಿ ಹೆಸರು ಪಡೆದಿರುವ ಚಿನ್ನಪ್ಪ ಗೌಡ ನೆಕ್ಕಿಲಾಡಿ, ಹೈನುಗಾರ ಮಂಜುನಾಥ ಭಟ್, ಕೃಷಿಕ ಐ. ರಾಜೀವ ಪೂಜಾರಿ ಇಪ್ಪನೊಟ್ಟು, ಮುಳುಗು ತಜ್ಞ ಸುದರ್ಶನ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ನಿರ್ದೇಶಕರಾದ ದಿವಾಕರ ಪೂಜಾರಿ, ರಾಧಾಕೃಷ್ಣ ನಾಯಕ್ ಉದಯಗಿರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ಉಪಸ್ಥಿತರಿದ್ದರು.
ಮಾಹಿತಿ ಕಾರ್ಯಾಗಾರ:
ಸಭಾ ಕಾರ್ಯಕ್ರಮದ ಬಳಿಕ ಜಲ ಮರುಪೂರಣದ ಬಗ್ಗೆ ಅಡಿಕೆ ಪತ್ರಿಕೆಯ ಪ್ರಧಾನ ಸಂಪಾದಕ ಶ್ರೀಪಡ್ರೆ, ದೇಶೀ ಗೋವಿನ ಮಹತ್ವದ ಬಗ್ಗೆ ಪಶು ವೈದ್ಯ ಡಾ. ವೈ.ವಿ. ಕೃಷ್ಣಮೂರ್ತಿ, ಸಾವಯವ ಕೃಷಿ ಪದ್ಧತಿ ಬಗ್ಗೆ ಗೋ ಸೇವಾ ಗತಿನಿಧಿಯ ಪ್ರವೀಣ ಸರಳಾಯ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ತಾಳ್ತಜೆ, ಪೆಲಪ್ಪಾರು ವೆಂಕಟ್ರರಮಣ ಭಟ್, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್. ಗೋಪಾಲ ಹೆಗ್ಡೆ, ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಧರ್ನಪ್ಪ ನಾಯ್ಕ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವಪ್ನಾ, ಸದಸ್ಯರಾದ ಹರೀಶ್ ದರ್ಬೆ, ವೇದಾವತಿ, ರತ್ನಾವತಿ, ಗೀತಾ, ಸ್ಥಳೀಯ ಪ್ರಮುಖರಾದ ಡಾ. ಕೆ.ಜಿ. ಭಟ್, ಚರ್ಚ್ ಧರ್ಮಗುರು ಅಬೆಲ್ ಲೋಬೋ, ಸುರೇಶ್ ಶೆಟ್ಟಿ ಪುತ್ತೂರು, ರೋಬರ್ಟ್ ಡಿ’ಸೋಜಾ, ಜಾನ್ ಕೆನ್ಯೂಟ್, ಸದಾನಂದ, ದುರ್ಗಾಮಣಿ, ಮಹಾಬಲೇಶ್ವರ ಭಟ್ ಪೆರಿಯಡ್ಕ, ವಾದ್ಯಕೋಡಿ ಶ್ಯಾಂ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಸ್ವಾಗತಿಸಿ, ನಿರ್ದೇಶಕ ರಾಜೇಶ್ ವಂದಿಸಿದರು. ಬಳ್ಳಿ ಮನೆಯ ಡಾ. ಸುಪ್ರೀತ್ ಲೋಬೋ, ಧರ್ಮಗುರು ಸೂರಜ್, ಸಂಘದ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿರ್ದೇಶಕರಾದ ಜಗದೀಶ್ ರಾವ್, ಯನ್. ಕುಂಞಾ, ಸಚಿನ್ ಪುತ್ಯ, ದಯಾನಂದ ಸರೋಳಿ, ಸುಜಾತ ಆರ್. ರೈ, ರಾಮ್ ನಾಯ್ಕ, ಸಿಬ್ಬಂದಿಗಳಾದ ಯಚ್. ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಆಳ್ವ, ಶಶಿಧರ್ ಹೆಗ್ಡೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರ ದರ್ಬೆ ಕಾರ್ಯಕ್ರಮ ನಿರೂಪಿಸಿದರು.
ಗಮನ ಸೆಳೆದ ಗೋ ತಳಿಗಳ ಪ್ರದರ್ಶನ
ಕಾರ್ಯಕ್ರಮದಲ್ಲಿ ಐರಿನ್ ಲೋಬೋ ಸಾಕುತ್ತಿರುವ ಸುಮಾರು ಮೂವತ್ತಕ್ಕೂ ಅಧಿಕ ದೇಶಿ ಗೋ ತಳಿಗಳಾದ ಕಪಿಲಾ ಹಾಗೂ ಮಲೆನಾಡ ಗಿಡ್ಡ ಗೋವುಗಳ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.