ನೆಲ್ಯಾಡಿ: ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ’ಮಾದರಿ ಶಾಲೆ’ ಯೋಜನೆಗೆ ಈ ಹಿಂದೆ ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯನ್ನು ಶಿಫಾರಸ್ಸು ಮಾಡಿದ್ದರೂ ಇದೀಗ ಇದನ್ನು ಬದಲಾಯಿಸಿ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಯ ಆಯ್ಕೆಗೆ ಪ್ರಸ್ತಾವನೆ ಮಾಡಿರುವುದಕ್ಕೆ ಅ.14ರಂದು ನಡೆದ ಬಜತ್ತೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಬಿ.ಅವರ ಅಧ್ಯಕ್ಷತೆಯಲ್ಲಿ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು. ಪಶುಸಂಗೋಪನಾ ಇಲಾಖೆಯ ಪುತ್ತೂರು ತಾಲೂಕು ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್‌ರವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಹೇಂದ್ರ ವರ್ಮರವರು, ಸರಕಾರಿ ಶಾಲೆಗಳ ಬಲವರ್ಧನೆಗೋಸ್ಕರ ಗ್ರಾಮಕ್ಕೊಂದು ಮಾದರಿ ಶಾಲೆ ಎಂಬ ಯೋಜನೆಯಡಿ ಬಜತ್ತೂರು ಸರಕಾರಿ ಶಾಲೆಯಲ್ಲಿ ಜನಪ್ರತಿನಿಧಿಗಳು, ಎಸ್‌ಡಿಎಂಸಿ, ಗ್ರಾಮಸ್ಥರು, ಊರಿನ ಗಣ್ಯರು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಿಕೊಂಡು ಶಿಕ್ಷಣ ಇಲಾಖೆ ವತಿಯಿಂದ ಸಭೆ ನಡೆಸಿ ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯನ್ನು ಮಾದರಿ ಶಾಲೆಗೆ ಶಿಫಾರಸ್ಸು ಮಾಡಲಾಗಿತ್ತು. ಸರಕಾರದ ಸುತ್ತೋಲೆಯಂತೆ ಮಾದರಿ ಶಾಲೆ ಆಯ್ಕೆಗೆ ಬಜತ್ತೂರು ಶಾಲೆ ಪೂರಕವಾಗಿದೆ. ಆದರೆ ಇವೆಲ್ಲವನ್ನೂ ಮರೆಮಾಚಿ ಈಗ ಗ್ರಾಮದ ಗಡಿ ಪ್ರದೇಶದಲ್ಲಿರುವ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಯ ಆಯ್ಕೆಗೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈ ರೀತಿ ಬದಲಾವಣೆ ಮಾಡುವ ಉದ್ದೇಶವೇನಿತ್ತು ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾಮಸ್ಥ ವಿಲ್ರೆಡ್ ಡಿ.ಸೋಜರವರು, ಮೊದಲು ಶಿಫಾರಸ್ಸು ಮಾಡಿರುವ ಬಜತ್ತೂರು ಶಾಲೆಯ ಬದಲಿಗೆ ಏಕಾಏಕಿ ಹೊಸಗದ್ದೆ ಶಾಲೆಯ ಆಯ್ಕೆ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂಬುದು ಕಾಣುತ್ತಿದೆ. ಮಾದರಿ ಶಾಲೆಗೆ ಪೂರಕ ವಾತಾವರಣ ಹೊಂದಿರುವ ಬಜತ್ತೂರು ಶಾಲೆಯನ್ನೇ ಮಾದರಿ ಶಾಲೆಗೆ ಆಯ್ಕೆ ಮಾಡಬೇಕೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್‌ಪಿ ಪ್ರಕಾಶ್ ಬಾಕಿಲ ಅವರು, ಗ್ರಾಮದ ಬದಲು ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸಲಾಗುವುದು ಎಂದು ಸರಕಾರ ಹೇಳಿದೆ. ಇಲ್ಲಿ ಚರ್ಚೆಗೆ ಬಂದಿರುವ ವಿಚಾರವನ್ನು ಬಿಇಒರವರ ಗಮನಕ್ಕೆ ತರವುದಾಗಿ ಹೇಳಿದರು. ಗ್ರಾಮಸ್ಥರ ಬೇಡಿಕೆಯಂತೆ ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯನ್ನು ’ಮಾದರಿ ಶಾಲೆ’ಯಾಗಿ ಆಯ್ಕೆ ಮಾಡುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಸಾಮಾಜಿಕ ಅರಣ್ಯ ಜಾಗ ಅತಿಕ್ರಮಣ-ಚರ್ಚೆ: ಬಿದಿರಾಡಿಯಲ್ಲಿ ಸಾಮಾಜಿಕ ಅರಣ್ಯ ಜಾಗ ಅತಿಕ್ರಮಣ ಆಗುತ್ತಿದೆ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಕೃಷ್ಣ ಜೋಗಿಯವರು, ಜಾಗ ಅತಿಕ್ರಮಿಸಿ ಕೃಷಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಜಾಗದ ಸರ್ವೆ ಅರ್ಧ ನಡೆದಿದೆ. ಪೂರ್ಣ ಸರ್ವೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು. ನೀರಕಟ್ಟೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪಿನ ಅರ್ಧಜಾಗದಲ್ಲಿನ ಮರಗಳ ಕಟಾವು ಆಗಿದೆ. ಮರಗಳ ಕಟಾವು ಆಗಿರುವ ಜಾಗದ ಅತಿಕ್ರಮಣವೂ ಆಗುತ್ತಿದೆ. ಈ ಜಾಗವನ್ನು ಪಂಚಾಯತ್‌ಗೆ ಹಸ್ತಾಂತರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಅಧಿಕಾರಿಗಳ ಗೈರು/ಕೋರಂ ವಿಚಾರ ಚರ್ಚೆ: ಸಭೆಯ ಆರಂಭದಲ್ಲಿ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಗ್ರಾಮಸ್ಥ ಮಹೇಂದ್ರ ವರ್ಮ ಪ್ರಸ್ತಾಪಿಸಿದರು. ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆಯೂ ಕಡಿಮೆ ಇರುವ ವಿಚಾರ ಪ್ರಸ್ತಾಪಿಸಿದ ವಿಲ್ರೆಡ್ ಡಿ.ಸೋಜರವರು, ಕೋರಂ ಇಲ್ಲದೆ ಮಾಡುವ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಸಿಂಧುವಲ್ಲ, ಗ್ರಾಮಸಭೆಗೆ ಬರುವಂತೆ ಗ್ರಾಮದ ಮತದಾರರಿಗೆ ಕರಪತ್ರ ಮುಟ್ಟಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಪ್ರವೀಣ್‌ಕುಮಾರ್‌ರವರು, ಸದಸ್ಯರ ಮೂಲಕ ಗ್ರಾಮಸಭೆಯ ಕರಪತ್ರ ನೀಡಲಾಗಿದೆ. ಅಲ್ಲದೇ ಮೈಕ ಅನೌನ್ಸ್‌ಮೆಂಟ್, ಪತ್ರಿಕೆ ಮೂಲಕವೂ ಪ್ರಚಾರ ಮಾಡಲಾಗಿದೆ. ಮುಂದಿನ ಗ್ರಾಮಸಭೆಯ ಸಂದರ್ಭ ಪ್ರತಿ ಮನೆಗೂ ಕರಪತ್ರ ಮುಟ್ಟಿಸುವುದಾಗಿ ಹೇಳಿದರು. ಮತ್ತೆ ಮಾತನಾಡಿದ ವಿಲ್ರೆಡ್‌ರವರು, ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿ ನಡೆದಿಲ್ಲ. ಅಡಿಕೆ ತೋಟ ಇದ್ದವರಿಗೆ, ಮನೆ ಇದ್ದವರಿಗೂ ಅವರ ಪತ್ನಿಯ ಹೆಸರಿನಲ್ಲಿ ಮನೆ ಮಂಜೂರು ಮಾಡಿರುವುದು ಆರ್‌ಟಿಐಯಲ್ಲಿ ಪಡೆದುಕೊಂಡ ಮಾಹಿತಿಯಿಂದ ಬಹಿರಂಗಗೊಂಡಿದೆ. ಈ ಬಗ್ಗೆ ಆಕ್ಷೇಪಿಸಿದಲ್ಲಿ ಪಟ್ಟಿಯಲ್ಲಿರುವ ನಿಜವಾದ ಅರ್ಹರಿಗೂ ಅನ್ಯಾಯವಾಗಲಿದೆ ಎಂದು ಹೇಳಿದರು.
ಎಸ್‌ಸಿ/ಎಸ್‌ಟಿ ಸಭೆ ಆಗಿಲ್ಲ: ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಕ್ಕೆ ಬರುವ ಅನುದಾನ ಬಳಕೆ ಬಗ್ಗೆ ಎಸ್‌ಸಿ/ಎಸ್‌ಟಿ ಪಂಗಡದವರ ವಿಶೇಷ ಸಭೆ ಕರೆಯಬೇಕೆಂಬ ನಿಯಮ 2015ರಿಂದ ಜಾರಿಯಲ್ಲಿದೆ. ಆದರೆ ಗ್ರಾಮ ಪಂಚಾಯತ್‌ನಿಂದ ಇಲ್ಲಿಯ ತನಕವೂ ಒಂದೇ ಒಂದು ಎಸ್‌ಸಿ/ಎಸ್‌ಟಿ ವಿಶೇಷ ಗ್ರಾಮಸಭೆ ಕರೆಯದೇ ಇರುವ ಬಗ್ಗೆಯೂ ವಿಲ್ರೆಡ್ ಡಿ.ಸೋಜರವರು ಆಕ್ಷೇಪ ವ್ಯಕ್ತಪಡಿಸಿದರು. ಸಭೆ ಕರೆದರೂ ಎಸ್‌ಸಿ/ಎಸ್‌ಟಿಯವರು ಬರುವುದಿಲ್ಲ. ಅವರನ್ನು ಸಭೆಗೆ ಬರಿಸುವುದು ಹೇಗೆ ಎಂಬ ಬಗ್ಗೆಯೂ ಸಲಹೆ ನೀಡಬೇಕೆಂದು ಗ್ರಾ.ಪಂ.ಮಾಜಿ ಸದಸ್ಯ ಆನಂದ ಮೇಲೂರು ಹೇಳಿದರು. ಇನ್ನೂ ಮನೆ ನೀಡಲು ಅವಕಾಶವಿದೆ. ಎಸ್‌ಸಿ/ಎಸ್‌ಟಿ ಫಲಾನುಭವಿಗಳು ಮುಂದೆ ಬಂದಲ್ಲಿ ನೀಡಲು ಪಂಚಾಯತ್ ಬದ್ಧವಿದೆ ಎಂದು ಸದಸ್ಯ ಉಮೇಶ್ ಒಡ್ರಪಾಲು ಹೇಳಿದರು.
ಶಾಲೆ ಜಾಗ ಮಂಜೂರುಗೊಳಿಸಿ:ಬೆದ್ರೋಡಿ ವಿದ್ಯಾನಗರ ಕಿ.ಪ್ರಾ.ಶಾಲೆಯ ಸ್ವಾಧೀನದಲ್ಲಿರುವ ಜಾಗ ಶಾಲೆಯ ಹೆಸರಿಗೆ ಮಂಜೂರು ಮಾಡಬೇಕೆಂದು ಜಾಗದ ದಾನಿಯೂ ಆದ ಶ್ರೀಧರ ರಾವ್‌ರವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಲಯಾರಣ್ಯಾಧಿಕಾರಿ ಸಂಜೀವ ಕೆ.ಅವರು, ಅರಣ್ಯದ ಹೆಸರಿನಲ್ಲಿರುವ ಜಾಗ ಮಂಜೂರು ಮಾಡಲು ಅವಕಾಶವಿಲ್ಲ. ಬಹುತೇಕ ಶಾಲೆಗಳೂ ರಕ್ಷಿತಾರಣ್ಯದೊಳಗೆ ಇದೆ ಎಂದರು. ಗ್ರಾಮ ಪಂಚಾಯತ್ ಕಚೇರಿ ಬಳಿ ಇರುವ ಅಪಾಯಕಾರಿ ಮರದ ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಧನಂಜಯ ಬೆದ್ರೋಡಿ ಒತ್ತಾಯಿಸಿದರು. ಮೇಲೂರು ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರವಿದ್ದೂ ಅದರ ತೆರವಿಗೂ ಕ್ರಮ ಕೈಗೊಳ್ಳಬೇಕೆಂದು ಆನಂದ ಮೇಲೂರು ಒತ್ತಾಯಿಸಿದರು. ಮರಗಳ ತೆರವಿಗೆ ಸಮರ್ಪಕ ದಾಖಲೆಯೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕೆಂದು ಉಪವಲಯ ಅರಣ್ಯಾಽಕಾರಿ ಸಂಜೀವ ಕೆ.ಹೇಳಿದರು.
ಸಿಹೆಚ್‌ಒಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಆಗಬೇಕು: ಸರಕಾರದ ಮಟ್ಟದಲ್ಲಿ ಸಿಹೆಚ್‌ಒಗಳ ನೇಮಕ ಆಗಿದೆ. ದಿನದ 24 ಗಂಟೆಯೂ ಅವರು ಗ್ರಾಮದಲ್ಲಿದ್ದು ಆರೋಗ್ಯ ಸೇವೆ ಕೊಡಬೇಕೆಂಬುದು ಸರಕಾರದ ಉದ್ದೇಶವಾಗಿದೆ. ಆದರೆ ಅವರಿಗೆ ಗ್ರಾಮದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ ಸಿಹೆಚ್‌ಒಗಳಿಂದ 24 ಗಂಟೆಯೂ ಸೇವೆ ಸಿಗಬೇಕಾದಲ್ಲಿ ಅವರಿಗೆ ಗ್ರಾಮದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯೂ ಆಗಬೇಕೆಂದು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್ ಹೇಳಿದರು.
ಆದಾಯ ಮಿತಿ ಹೆಚ್ಚಿಸಿ: ಕಂದಾಯ ಇಲಾಖೆಯಿಂದ ಸಿಗುವ ವಿವಿಧ ಪಿಂಚಣಿಗಳಿಗೆ ವಾರ್ಷಿಕ ಆದಾಯ ಮಿತಿ 32 ಸಾವಿರ ರೂ. ಆಗಿದೆ. ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಯ ಆದಾಯ ಮಿತಿಯೂ ಇದಕ್ಕಿಂತ ಹೆಚ್ಚಾಗುತ್ತದೆ. ಆದ್ದರಿಂದ ಕಾನೂನಾತ್ಮಕವಾಗಿ ಈ ಪಿಂಚಣಿ ಯಾರಿಗೂ ಸಿಗುವುದಿಲ್ಲ. ಆದ್ದರಿಂದ ಈ ಯೋಜನೆಗಳಿಗೆ ಸಂಬಂಧಿಸಿದ ವಾರ್ಷಿಕ ಆದಾಯ ಮಿತಿ ಹೆಚ್ಚಳ ಮಾಡಬೇಕೆಂದು ಗ್ರಾಮಸ್ಥ ವಸಂತ ಪಿಜಕ್ಕಳ ಹೇಳಿದರು.
ಅಧ್ಯಕ್ಷರಿಗೆ ಮನ್ನಣೆ ನೀಡಿ: ಗ್ರಾಮ ಮಟ್ಟದಲ್ಲಿ ನಡೆಯುವ ಸರಕಾರದ ಯಾವುದೇ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕರೆಯಬೇಕು. ಅವರಿಗೆ ಇಲಾಖೆಯವರು ಗೌರವ ಕೊಡಬೇಕೆಂದು ಸದಸ್ಯ ಗಂಗಾಧರ ನೆಕ್ಕರಾಜೆ ಹೇಳಿದರು.
ತ್ಯಾಜ್ಯ ಎಸೆಯದಂತೆ ತಡೆಗಟ್ಟಿ: ತ್ಯಾಜ್ಯ ಹಾಗೂ ಬಾಟ್ಲಿಗಳನ್ನು ರಸ್ತೆ ಬದಿ ಎಸೆಯಲಾಗುತ್ತಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರು ಊಟದ ತಟ್ಟೆ ಸೇರಿದಂತೆ ಇತರೇ ತ್ಯಾಜ್ಯಗಳನ್ನು ಹೆದ್ದಾರಿಯ ಪಕ್ಕದಲ್ಲೇ ಎಸೆಯುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು.
ಉಪವಲಯ ಅರಣ್ಯ ಅಧಿಕಾರಿ ಸಂಜೀವ ಕೆ., ಪಶುಸಂಗೋಪನಾ ಇಲಾಖೆಯ ಡಾ.ಎಂ.ವಿ.ಪ್ರಕಾಶ್, ಸಿಆರ್‌ಪಿ ಪ್ರಕಾಶ್ ಬಾಕಿಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜಾತ, ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಟಿ.ವಿಠಲ, ಆರೋಗ್ಯ ಇಲಾಖೆಯ ಹಿರಿಯ ಸುರಕ್ಷಾಧಿಕಾರಿ ಅನ್ನಮ್ಮ ಕೆ.ಸಿ., ಗ್ರಾಮ ಲೆಕ್ಕಾಧಿಕಾರಿ ಎನ್.ಎಂ.ಮಠದ, ಮೆಸ್ಕಾಂ ಪವರ್‌ಮ್ಯಾನ್ ದುರ್ಗಾಸಿಂಗ್, ಸಾಮಾಜಿಕ ಅರಣ್ಯ ಇಲಾಖೆ ಉಪವಲಯ ಅರಣ್ಯಾಽಕಾರಿ ಕೃಷ್ಣಜೋಗಿಯವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿತಾ ಪಿ., ಸದಸ್ಯರಾದ ಉಮೇಶ್ ಒಡ್ರಪಾಲು, ಮಾಧವ ಪೂಜಾರಿ, ಸಂತೋಷ್‌ಕುಮಾರ್ ಪಿ., ಗಂಗಾಧರ ಕೆ.ಎಸ್., ಪ್ರೆಸಿಲ್ಲಾ ಡಿ.ಸೋಜ, ಯಶೋಧ ಪಿ.ಎಸ್., ರತ್ನ, ವಿಮಲ, ಗಂಗಾಧರ ಪಿ.ಎನ್., ಮೋನಪ್ಪ ಗೌಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್‌ಕುಮಾರ್ ಡಿ.,ವರದಿ ವಾಚಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸನ್ಮಾನ: ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ನಿವೃತ್ತಿಯಾದ ಆರೋಗ್ಯ ಸಹಾಯಕಿ ಪುಷ್ಪವಲ್ಲಿ ಅವರನ್ನು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ವಿಮಲರವರು ಅಭಿನಂದನಾ ಭಾಷಣ ಮಾಡಿದರು.
ಮೌನ ಪ್ರಾರ್ಥನೆ: ಸೆ.29ರಂದು ನಿಧನರಾದ ಪ್ರಸಿದ್ಧ ದೈವನರ್ತಕ, ರಾಷ್ಟ್ರೀಯ ಭಾವೈಕ್ಯ ಮತ್ತು ತುಳುನಾಡ ರತ್ನ ಪ್ರಶಸ್ತಿ ಪುರಸ್ಕೃತ ಕಾಂಚನ ಸಂಕಪ್ಪ ನಲ್ಕೆಯವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯ ಆರಂಭದಲ್ಲಿ 1 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಗ್ರಾ.ಪಂ.ಸದಸ್ಯ ಗಂಗಾಧರ ನೆಕ್ಕರಾಜೆರವರು ವಿಷಯ ಪ್ರಸ್ತಾಪಿಸಿದರು.